ತುಮಕೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟಕರೆ ನೀಡಿರುವ ಈ ತಿಂಗಳ ೧೩ರ ಕರ್ನಾಟಕ ಬಂದ್‌ಗೆ ನಗರದ ಕನ್ನಡಪರ ಹಾಗೂ ಇತರೆ ಸಂಘಗಳ ಒಕ್ಕೂಟ ಬೆಂಬಲ ನೀಡಿದೆ. ಈ ಸಂಬAಧ ನಗರದಲ್ಲಿ ಸಭೆ ಸೇರಿ ಚರ್ಚಿಸಿದ ಸಂಘಟನೆಗಳ ಮುಖಂಡರು ೧೩ರ ಬಂದ್ ಹೋರಾಟದಲ್ಲಿ ಭಾಗವಹಿಸಲು ತೀರ್ಮಾನಿಸಿದರು.
ಒಕ್ಕೂಟದ ಅಧ್ಯಕ್ಷ ಎಂ ಗೋಪಿ ಮಾತನಾಡಿ, ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ರಾಜ್ಯದ ಜನರಿಗೆ ಮಾರಕವಾಗಿದೆ. ಮಳೆ ಇಲ್ಲದೆ, ಕುಡಿಯುವ ನೀರಿಗೂ ತೊಂದರೆಯಾಗಿ ಹಾಹಾಕಾರ ಪರಿಸ್ಥಿತಿ ಇರುವಾಗ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ನಿರ್ಧಾರ ಅಮಾನವೀಯ. ಇದರ ವಿರುದ್ಧ ರಾಜ್ಯದ ಎಲ್ಲಾ ಶಾಸಕರು, ಸಂಸದರು ಪಕ್ಷಾತೀತವಾಗಿಧ್ವನಿ ಎತ್ತಬೇಕು, ಕನ್ನಡಿಗರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್. ರಾಮಯ್ಯ ಮಾತನಾಡಿ, ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶವನ್ನು ರಾಜ್ಯದ ಹಿತಾಸಕ್ತಿಯ ಆಧಾರದ ಮೇಲೆ ಸರ್ಕಾರ ಬಲವಾಗಿ ವಿರೋಧಿಸಬೇಕು. ರಾಜ್ಯದ ಜಲಾಶಯಗಳ ವಾಸ್ತವಿಕ ನೀರಿನ ಸಂಗ್ರಹಣೆ ಹಾಗೂ ಮಳೆಯ ಕೊರತೆಯ ಕುರಿತು ಸಮಗ್ರ ವರದಿಯನ್ನು ಸಲ್ಲಿಸಿ ಕರ್ನಾಟಕದ ಪರವಾಗಿ ವಾದ ಮಂಡಿಸುವಲ್ಲಿ ನಮ್ಮಪರ ನ್ಯಾಯವಾದಿಗಳು ಪದೇಪದೆ ವಿಫಲವಾಗುತ್ತಿರುವುದು ದುರಾದೃಷ್ಟಕರ. ನ್ಯಾಯ ಮಂಡನೆಗಾಗಿ ಸರ್ಕಾರ ಸಾರ್ವಜನಿಕರ ಕೋಟ್ಯಾಂತರ ರೂ. ಖರ್ಚು ಮಾಡಿದರೂ ನಮಗೆ ನ್ಯಾಯ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಾಬಾ, ಸಂಘಟನಾ ಕಾರ್ಯದರ್ಶಿ ಟಿ.ಎಸ್. ರಕ್ಷಿತ್ ಕುಮಾರ್, ಖಜಾಂಚಿ ಕನ್ನಡ ಪ್ರಕಾಶ್, ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವೀರೇಶ್ ಪ್ರಸಾದ್ ಗುಬ್ಬಿ, ಮುಖಂಡರಾದ ರಾಜಣ್ಣ, ಆದಿಲ್ ಬಾಷಾ, ಗಂಗಾಧರ್, ಷಾಹೀದ್ ಖಾನ್, ಶಾಮೀದ್ ಖಾನ್, ಗೌಸ್‌ಖಾನ್ ಮೊದಲಾದವರು ಭಾಗವಹಿಸಿದ್ದರು.

(Visited 1 times, 1 visits today)