
ಚಿಕ್ಕನಾಯಕನಹಳ್ಳಿ: ಹುಳಿಯಾರು ರಾಜ್ಯ ಸರ್ಕಾರಿ ನೌಕರರು ಪ್ರತಿದಿನ ನಿಗದಿತ ಸಮಯಕ್ಕೆ ಕಚೇರಿಗೆ ಹಾಜರಾಗುವುದನ್ನು ಖಚಿತಪಡಿಸಿಕೊಳ್ಳಲು ಇ-ಆಡಳಿತ ಇಲಾಖೆಯು ಅಭಿವೃದ್ಧಿಪಡಿಸಿರುವ ನೂತನ “ಕರ್ನಾಟಕ ಆಧುನಿಕ ಹಾಜರಾತಿ ನಿರ್ವಹಣಾ ವ್ಯವಸ್ಥೆ” ಹಾಗೂ ‘ಕರ್ತವ್ಯ’ ಸಾಫ್ಟ್ವೇರ್ ಅಪ್ಲಿಕೇಶನ್ ಅನ್ನು ಹುಳಿಯಾರು ಪಟ್ಟಣ ಪಂಚಾಯಿತಿಯಲ್ಲೂ ಅನುಷ್ಠಾನಗೊಳಿಸಲಾಗುತ್ತಿದೆ.
ಈ ಕುರಿತು ಮಾಹಿತಿ ನೀಡಿರುವ ಹುಳಿಯಾರು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎಲ್.ವಿ. ಮಂಜುನಾಥ್ ಅವರು, ಕಚೇರಿಯ ಎಲ್ಲಾ ಸಿಬ್ಬಂದಿಗಳು ಪ್ರತಿದಿನ ಬೆಳಗ್ಗೆ ೧೦:೦೦ ಗಂಟೆಯೊಳಗೆ ಕಚೇರಿಗೆ ಕಡ್ಡಾಯವಾಗಿ ಬಂದು ಲಾಗಿನ್ ಆಗಬೇಕು” ಎಂದು ಕಡಕ್ ನಿರ್ದೇಶನ ನೀಡಿದ್ದಾರೆ. ನಿನ್ನೆ ಸೋಮವಾರವಷ್ಟೇ ತಾಲೂಕು ಕಚೇರಿಯಲ್ಲಿ ನಡೆದ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಈ ನೂತನ ತಂತ್ರಜ್ಞಾನದ ಕಡ್ಡಾಯ ಜಾರಿ ಬಗ್ಗೆ ಹಿರಿಯ ಅಧಿಕಾರಿಗಳಿಂದ ಸ್ಪಷ್ಟ ಮಾಹಿತಿ ನೀಡಲಾಗಿದೆ ಎಂದರು.
ಜಿಯೋ ಟ್ಯಾಗ್ ವ್ಯವಸ್ಥೆ; ಸುಳ್ಳು ಹಾಜರಾತಿಗೆ ಬ್ರೇಕ್: ‘ಕರ್ತವ್ಯ’ ಆಪ್ ಸಂಪೂರ್ಣವಾಗಿ ಜಿಯೋ ಟ್ಯಾಗಿಂಗ್ ತಂತ್ರಜ್ಞಾನದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಇದು ನೌಕರರ ಭೌತಿಕ ಉಪಸ್ಥಿತಿ ಮತ್ತು ಕಚೇರಿಯ ನಿಖರವಾದ ಭೌಗೋಳಿಕ ಸ್ಥಳವನ್ನು (ಲೋಕೇಶನ್) ಗುರುತಿಸುವುದರಿಂದ, ಸಿಬ್ಬಂದಿಗಳು ಕಚೇರಿಯಿಂದ ಹೊರಗಿದ್ದುಕೊಂಡು ಅಥವಾ ಎಲ್ಲೋ ಕುಳಿತು ಹಾಜರಾತಿ ದಾಖಲಿಸಲು ಸಾಧ್ಯವಾಗುವುದಿಲ್ಲ. ಇದು ಕೇವಲ ನೈಜ ಸಮಯವನ್ನು ಮಾತ್ರ ಸೆರೆಹಿಡಿಯುತ್ತದೆ. ಹೀಗಾಗಿ ಸಿಬ್ಬಂದಿಗಳು ಕಡ್ಡಾಯವಾಗಿ ಕಚೇರಿ ಆವರಣದಲ್ಲೇ ಇದ್ದು ಬೆಳಗ್ಗೆ ೧೦:೦೦ ಗಂಟೆಯ ಒಳಗೆ ಲಾಗಿನ್ ಆಗಬೇಕಿರುವುದು ಕಡ್ಡಾಯವಾಗಿದೆ.
ಪ್ರತಿದಿನ ಬೆಳಗ್ಗೆ ಸರಿಯಾಗಿ ೧೦:೧೫ ಗಂಟೆಗೆ ಕಚೇರಿಯ ಒಟ್ಟು ಹಾಜರಾತಿಯ ವಿವರಗಳು ಸ್ವಯಂಚಾಲಿತವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ರವಾನೆಯಾಗಲಿವೆ. ಇದರಿಂದಾಗಿ ಸಾರ್ವಜನಿಕ ಆಡಳಿತದಲ್ಲಿ ಮತ್ತಷ್ಟು ಪಾರದರ್ಶಕತೆ ಮತ್ತು ದಕ್ಷತೆ ಬರಲಿದ್ದು, ಸಿಬ್ಬಂದಿಗಳ ಸಮಯಪಾಲನೆ ಸುಧಾರಿಸಲಿದೆ ಎಂದು ಮಂಜುನಾಥ್ ಮಾಹಿತಿ ನೀಡಿದರು.
ಸದ್ಯಕ್ಕೆ ಬಯೋಮೆಟ್ರಿಕ್ ಮೂಲಕವೇ ಹಾಜರಾತಿ: ಈ ತಂತ್ರಜ್ಞಾನದ ಅಡಿಯಲ್ಲಿ ಪ್ರತಿಯೊಬ್ಬ ಉದ್ಯೋಗಿಯೂ ‘ಕರ್ತವ್ಯ’ ಆಪ್‌ನಲ್ಲಿ ನೋಂದಾಯಿಸಿಕೊಳ್ಳಬೇಕಿದೆ. ಆದರೆ ಪಟ್ಟಣ ಪಂಚಾಯಿತಿಯು ನಿಗಮ ಮಂಡಳಿ ವ್ಯಾಪ್ತಿಗೆ ಬರುವುದರಿಂದ, ಪ್ರಸ್ತುತ ಉದ್ಯೋಗಿಗಳ ಐಡಿ ಸಮಸ್ಯೆಯಿದೆ. ಸದ್ಯಕ್ಕೆ ಕಚೇರಿಯಲ್ಲಿ ಲಭ್ಯವಿರುವ ಬಯೋಮೆಟ್ರಿಕ್ ಸಾಧನದ ಮೂಲಕವೇ ಹೆಬ್ಬೆಟ್ಟು ಅಥವಾ ಮುಖ ಗುರುತಿಸುವಿಕೆ ಮೂಲಕ ಹಾಜರಾತಿ ದಾಖಲಿಸಲು ಸೂಚಿಸಲಾಗಿದೆ ಎಂದು ಮುಖ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ತಹಸಿಲ್ದಾರ್ ಮಮತಾ ಭೇಟಿ, ಚರ್ಚೆ: ಇಂದು ಹುಳಿಯಾರಿಗೆ ಆಗಮಿಸಿದ್ದ ತಹಸಿಲ್ದಾರ್ ಮಮತಾ ಅವರು ನಾಡಕಚೇರಿಯಲ್ಲಿ ನೂತನ ಹಾಜರಾತಿ ವ್ಯವಸ್ಥೆಯ ಅನುಷ್ಠಾನದ ಕುರಿತು ಪ್ರಮುಖ ಚರ್ಚೆ ನಡೆಸಿದ್ದು ಕಚೇರಿಯ ಪ್ರತಿಯೊಬ್ಬ ಸಿಬ್ಬಂದಿಯೂ ಕಡ್ಡಾಯವಾಗಿ ‘ಕರ್ತವ್ಯ’ ಆಪ್ ಅಡಿಯಲ್ಲಿಯೇ ಹಾಜರಾತಿಯನ್ನು ನೀಡುವ ಪ್ರಕ್ರಿಯೆಗೆ ಒಗ್ಗಿಕೊಳ್ಳಬೇಕು ಎಂದು ಅವರು ಇದೇ ವೇಳೆ ಸೂಚಿಸಿದ್ದಾರೆ ಎಂದು ಮಂಜುನಾಥ್ ಮಾಹಿತಿ ನೀಡಿದರು
ಇದರ ಕಟ್ಟುನಿಟ್ಟಿನ ಜಾರಿಯಿಂದ ಸಾರ್ವಜನಿಕರಿಗೆ ಕಚೇರಿ ಕೆಲಸಗಳಲ್ಲಿ ಇನ್ಮುಂದೆ ವಿಳಂಬವಿಲ್ಲದೆ ತಡೆರಹಿತ ಸೇವೆ ಸಿಗಲಿದೆ ಎಂದು ಮಂಜುನಾಥ್ ತಿಳಿಸಿದರು.

