ಹುಳಿಯಾರು: ದಶಕಗಳಿಂದ ತ್ಯಾಜ್ಯದ ಕೂಪವಾಗಿ ಮಾರ್ಪಟ್ಟು, ದುರ್ನಾಥ ಬೀರುತ್ತಿದ್ದ ಹುಳಿಯಾರು ಕೆರೆಗೆ ಕೊನೆಗೂ ಮುಕ್ತಿ ಸಿಗುವ ಕಾಲ ಸನ್ನಿಹಿತವಾಗಿದೆ. ಕೆರೆಯ ದುಸ್ಥಿತಿಯ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಹಾಗೂ ಸಾರ್ವಜನಿಕರ ದೂರಿನನ್ವಯ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಉಪ ಲೋಕಾಯುಕ್ತರು ತೀವ್ರ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ಎಚ್ಚೆತ್ತ ಸಣ್ಣ ನೀರಾವರಿ ಇಲಾಖೆಯು ಕಳೆದ ಎರಡು ದಿನಗಳಿಂದ ಹಿಟಾಚಿ ಯಂತ್ರದ ಮೂಲಕ ಕೆರೆ ಅಂಗಳವನ್ನು ಕ್ಲೀನ್ ಮಾಡಲು ಮುಂದಾಗಿದೆ.
ಕಲ್ಮಶವಾಗಿದ್ದ ಕೆರೆ: ಸಾರ್ವಜನಿಕರ ಆಕ್ರೋಶ: ಹುಳಿಯಾರು ಪಟ್ಟಣದ ಜೀವನಾಡಿಯಾಗಿದ್ದ ಈ ಇತಿಹಾಸ ಪ್ರಸಿದ್ಧ ಕೆರೆಯು ಇತ್ತೀಚಿನ ವರ್ಷಗಳಲ್ಲಿ ಸಂಪೂರ್ಣವಾಗಿ ಕಸದ ತೊಟ್ಟಿಯಾಗಿ ಮಾರ್ಪಟ್ಟಿತ್ತು. ಪಟ್ಟಣದ ಹೋಟೆಲ್‌ಗಳು, ಕೋಳಿ ಅಂಗಡಿಗಳು, ತರಕಾರಿ ಮಾರುಕಟ್ಟೆಯ ತ್ಯಾಜ್ಯಗಳನ್ನೆಲ್ಲಾ ನೇರವಾಗಿ ಕೆರೆಗೆ ಸುರಿಯಲಾಗುತ್ತಿತ್ತು. ಇದರ ಜೊತೆಗೆ, ಕೆರೆ ಅಂಗಳದ ಫುಟ್‌ಪಾತ್ ವ್ಯಾಪಾರಿಗಳು ಪಾನಿಪುರಿ, ಗೋಬಿ, ಟೀ ಹಾಗೂ ತಿಂಡಿ ಸೇರಿದಂತೆ ತಮ್ಮ ಅಂಗಡಿಯ ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯಗಳನ್ನು ಕೆರೆಯೊಳಗೆ ಎಸೆಯುತ್ತಿದ್ದರು. ಇದರಿಂದ ಕೆರೆಯ ನೀರು ಸಂಪೂರ್ಣ ಕಲ್ಮಶಗೊಂಡು, ಜಲಚರಗಳು ಸತ್ತು ಹೋಗುವ ಭೀತಿ ಎದುರಾಗಿತ್ತು. ಕೆರೆ ಏರಿ ಮೇಲೆ ನಿತ್ಯ ಓಡಾಡುವ ಶಾಲಾಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ದುರ್ನಾಥದಿಂದಾಗಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಷ್ಟಾದರೂ ಸ್ಥಳೀಯ ಪಟ್ಟಣ ಪಂಚಾಯಿತಿ ಮಾತ್ರ ಕಣ್ಣು ಮುಚ್ಚಿ ಕುಳಿತಿತ್ತು. ಕೊನೆಗೆ ಇದೇ ಕೆರೆಗೆ ಅಪಾಯಕಾರಿ ವೈದ್ಯಕೀಯ (ಔಷಧಿ) ತ್ಯಾಜ್ಯಗಳನ್ನು ಸುರಿಯುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ÷್ಯ ವಹಿಸಿದ್ದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಅಧಿಕಾರಿಗಳಿಗೆ ಉಪ ಲೋಕಾಯುಕ್ತರ ಚಾಟಿ!: ಹಿಂದೆ ಹುಳಿಯಾರು ಪಟ್ಟಣಕ್ಕೆ ಭೇಟಿ ನೀಡಿದ್ದ ಉಪ ಲೋಕಾಯುಕ್ತರಾದ ವೀರಣ್ಣ ಅವರು, ಕೆರೆ ಹಾಗೂ ಬಸ್ ನಿಲ್ದಾಣವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಪಟ್ಟಣ ಪಂಚಾಯಿತಿಗೆ ಕಡಕ್ ಸೂಚನೆ ನೀಡಿದ್ದರು. ಆದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಬಗ್ಗೆ ಪತ್ರಿಕೆಗಳಲ್ಲಿ ಸರಣಿ ವರದಿಗಳು ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಲೋಕಾಯುಕ್ತರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು.
ಸಣ್ಣ ನೀರಾವರಿ ಇಲಾಖೆ, ಪಟ್ಟಣ ಪಂಚಾಯಿತಿ, ಆರೋಗ್ಯ ಇಲಾಖೆ ಹಾಗೂ ತಾಲೂಕು ಆಡಳಿತಕ್ಕೆ ತಕ್ಷಣವೇ ನೋಟಿಸ್ ಜಾರಿ ಮಾಡಿದ್ದಲ್ಲದೆ, ಸಣ್ಣ ನೀರಾವರಿ ಇಲಾಖೆ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳನ್ನು ಕಚೇರಿಗೆ ಕರೆಸಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಲೋಕಾಯುಕ್ತರ ಈ ಖಡಕ್ ಕ್ರಮಕ್ಕೆ ಬೆದರಿದ ಅಧಿಕಾರಿಗಳು ಈಗ ಯುದ್ಧೋಪಾದಿಯಲ್ಲಿ ಕೆರೆ ಸ್ವಚ್ಛತೆಗೆ ಮುಂದಾಗಿದ್ದಾರೆ.
ಎರಡು ದಿನಗಳಿಂದ ಮುಂದುವರಿದ ಸ್ವಚ್ಛತಾ ಕಾರ್ಯ: ಲೋಕಾಯುಕ್ತರ ಬಿಸಿ ತಟ್ಟುತ್ತಿದ್ದಂತೆ ಕಾರ್ಯಪ್ರವೃತ್ತವಾಗಿರುವ ಸಣ್ಣ ನೀರಾವರಿ ಇಲಾಖೆಯು, ಕಳೆದ ಎರಡು ದಿನಗಳಿಂದ ಹಿಟಾಚಿ ಯಂತ್ರಗಳನ್ನು ಬಳಸಿ ಕೆರೆ ಅಂಚಿನಲ್ಲಿ ದಶಕಗಳಿಂದ ಸಂಗ್ರಹವಾಗಿದ್ದ ಹೋಟೆಲ್, ತರಕಾರಿ ತ್ಯಾಜ್ಯ ಹಾಗೂ ಟನ್‌ಗಟ್ಟಲೆ ಪ್ಲಾಸ್ಟಿಕ್ ಕಸವನ್ನು ತೆರವುಗೊಳಿಸುತ್ತಿದೆ. ಅಲ್ಲದೆ ಬಳ್ಳಾರಿ ಜಾಲಿ ಗಿಡಗಳನ್ನು ಕಿತ್ತೆಸೆಯುತ್ತಿದೆ. ಸದ್ಯ ಕೆರೆ ಅಂಗಳ ಸಾರ್ವಜನಿಕರು ನಿಟ್ಟುಸಿರು ಬಿಡುವಂತೆ ಸ್ವಚ್ಛಗೊಳ್ಳುತ್ತಿದೆ.

(Visited 1 times, 1 visits today)