ಸಿರಾ: ಸಚಿವ ಸಂಪುಟದ ಎರಡನೇ ಪಟ್ಟಿಯಲ್ಲೂ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಶಾಸಕ ಟಿ.ಬಿ. ಜಯಚಂದ್ರ ನೀಡಿರುವ ರಾಜೀನಾಮೆ ಸುಳಿವು ಕಾಂಗ್ರೆಸ್ ವಲಯದಲ್ಲಿ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಅದರ ಪರಿಣಾಮ ಶಿರಾ ಮತ್ತು ಹಿರಿಯೂರು ಭಾಗದ ರಾಜಕೀಯ ಸಮೀಕರಣಗಳ ಮೇಲೂ ಬೀಳುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ಐದು ದಶಕಗಳಿಗೂ ಹೆಚ್ಚು ಕಾಲ ರಾಜಕೀಯ ಜೀವನದಲ್ಲಿ ಸಕ್ರಿಯರಾಗಿರುವ ಜಯಚಂದ್ರ ಅವರು ಪಕ್ಷನಿಷ್ಠೆ, ಪ್ರಾಮಾಣಿಕತೆ ಹಾಗೂ ಜನಪರ ಆಡಳಿತಕ್ಕೆ ಹೆಸರುವಾಸಿಯಾಗಿದ್ದಾರೆ ತುಮಕೂರು ಜಿಲ್ಲೆಯ. ಶಿರಾ, ಸೇರಿದಂತೆ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರಿಂದ ಅವರನ್ನು ಬರದ ನಾಡಿನ ಭಗೀರಥ ಎಂದು ಬೆಂಬಲಿಗರು ಗೌರವದಿಂದ ಕರೆಯುತ್ತಾರೆ.
ಕುಂಚಿಟಿಗ ಹಾಗೂ ಕಾಡುಗೊಲ್ಲ ಸಮುದಾಯಗಳಲ್ಲಿ ಪ್ರಭಾವಿ ನಾಯಕರೆಂದು ಪರಿಗಣಿಸಲ್ಪಡುವ ಜಯಚಂದ್ರ ಅವರಿಗೆ ಸಚಿವ ಸ್ಥಾನ ದೊರೆಯದಿರುವುದು ಈ ಸಮುದಾಯಗಳ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಶಿರಾ ಹಾಗೂ ಹಿರಿಯೂರು ತಾಲ್ಲೂಕುಗಳಲ್ಲಿ ಈ ಎರಡು ಸಮುದಾಯಗಳು ಗಮನಾರ್ಹ ಮತಬ್ಯಾಂಕ್ ಹೊಂದಿರುವುದರಿAದ, ಜಯಚಂದ್ರ ಅವರ ಮುಂದಿನ ರಾಜಕೀಯ ನಿರ್ಧಾರ ಕಾಂಗ್ರೆಸ್ ಪಕ್ಷದ ಸಂಘಟನಾ ಬಲ ಮತ್ತು ಮತಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಯಚಂದ್ರ, ಸಮುದಾಯದ ಹಿರಿಯರು, ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ. ಅಗತ್ಯವಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರವನ್ನೂ ಪರಿಗಣಿಸುತ್ತೇನೆ ಎಂದು ಹೇಳಿದ್ದರು.
ಜಯಚಂದ್ರ ಅವರ ಹೇಳಿಕೆ ಕೇವಲ ಸಚಿವ ಸ್ಥಾನ ಸಿಗದ ಅಸಮಾಧಾನದ ಪ್ರತಿಕ್ರಿಯೆಯಾಗಿ ಉಳಿಯುತ್ತದೆಯೇ ಅಥವಾ ರಾಜ್ಯ ರಾಜಕಾರಣದಲ್ಲಿ ಹೊಸ ರಾಜಕೀಯ ಬೆಳವಣಿಗೆಗಳಿಗೆ ನಾಂದಿ ಹಾಡುತ್ತದೆಯೇ ಎಂಬುದರ ಬಗ್ಗೆ ಈಗ ವ್ಯಾಪಕ ಚರ್ಚೆ ನಡೆಯುತ್ತಿದೆ.

(Visited 1 times, 1 visits today)