ತುಮಕೂರು: ನವರಾತ್ರಿ ಪ್ರಯುಕ್ತ ಅಕ್ಟೋಬರ್ ೧೧ ರಿಂದ ೨೧ರವರೆಗೆ ಆಚರಿಸಲಾಗುವ ದಸರಾ ಉತ್ಸವದಲ್ಲಿ ಪೂಜಾ ಕೈಂಕರ್ಯಗಳನ್ನು ಆಗಮ ರೀತಿಯಲ್ಲಿ ನಡೆಸಲು ನಿರ್ಣಯ ಕೈಗೊಳ್ಳಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯದ ಸಭಾಂಗಣದಲ್ಲಿ ಬುಧವಾರ ಸಂಜೆ ಧಾರ್ಮಿಕ ಪೂಜಾ ವಿಧಿವಿಧಾನಗಳ ಕುರಿತು ಜರುಗಿದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಯಿತು.
ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಅವರು, ದಸರಾ ಉತ್ಸವದ ಅಂಗವಾಗಿ ಏರ್ಪಡಿಸಲಾಗುವ ಎಲ್ಲಾ ಪೂಜಾ ಕಾರ್ಯಕ್ರಮಗಳು ವ್ಯವಸ್ಥಿತವಾಗಿರಬೇಕು. ಯಾವುದೇ ಲೋಪಗಳಿಗೆ ಅವಕಾಶ ನೀಡದಂತೆ ಅಗತ್ಯ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳು ಹಾಗೂ ಜಿಲ್ಲೆಯಲ್ಲಿರುವ ವಿವಿಧ ದೇವಾಲಯಗಳ ಆಗಮಿಕರು ಹಾಗೂ ಅರ್ಚಕರಿಗೆ ತಿಳಿಸಿದರು.
ದಸರಾ ಉತ್ಸವದ ಪ್ರಯುಕ್ತ ನಿರ್ಮಿಸಲಾಗುವ ಧಾರ್ಮಿಕ ಮಂಟಪದಲ್ಲಿ ಕಳೆದೆರಡು ವರ್ಷಗಳಲ್ಲಿ ನಡೆಸಿದಂತೆ ಈ ವರ್ಷವೂ ಪೂಜಾ ಕಾರ್ಯಗಳನ್ನು ನಡೆಸಬೇಕೆಂದು ತಿಳಿಸಿದರು.
ಧಾರ್ಮಿಕ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗುವ ದೇವಿಗೆ ಪ್ರತಿದಿನ ವಿಶೇಷ ರೀತಿಯ ಅಲಂಕಾರ ಮಾಡಬೇಕು. ಅಲಂಕಾರಕ್ಕೆ ಪ್ಲಾಸ್ಟಿಕ್ ಹಾರಗಳನ್ನು ಬಳಸಬಾರದು. ಪೂಜೆ, ಹೋಮ, ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆಯನ್ನು ನಿಗದಿತ ಸಮಯದಲ್ಲಿ ನಡೆಸಬೇಕು. ಭಕ್ತರಿಗೆ ಅನುಕೂಲವಾಗುವಂತೆ ಪ್ರಸಾದ ಹಾಗೂ ಲಘು ಉಪಹಾರದ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ದಸರಾ ಉತ್ಸವದ ಅಂಗವಾಗಿ ನಡೆಯಲಿರುವ ಭೂಮಿ ಪೂಜೆ, ಧ್ವಜಪೂಜೆ, ಮಂಟಪ ಪೂಜೆ, ಧ್ವಜಾರೋಹಣ, ಆಗಮ ರೀತ್ಯಾ ದುರ್ಗಾಷ್ಟಮಿ ಪೂಜೆ, ಮಹಾನವಮಿ ಪೂಜೆ, ವಿಜಯ ದಶಮಿ, ಶಮೀ ಪೂಜೆ, ಬನ್ನಿ ಪೂಜೆ, ದೇವರ ಉತ್ಸವ, ಧ್ವಜಾ ಅವರೋಹಣ ಸೇರಿದಂತೆ ಪ್ರತಿ ದಿನ ಬೆಳಗ್ಗೆ ಗಣಪತಿ ಪೂಜೆ, ಪುಣ್ಯಾಹ ವಾಚನ, ಗಣಪತಿ ಮತ್ತು ದುರ್ಗಾ ಹೋಮ, ನವದುರ್ಗಾ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ತಹಸೀಲ್ದಾರ್ ರಾಜೇಶ್ವರಿ, ಪಿ.ಗೊಲ್ಲಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಅರ್ಚಕರು ಹಾಗೂ ಅರ್ಚಕರ ಸಂಘದ ಅಧ್ಯಕ್ಷ ರಾಮತೀರ್ಥನ್ ಸೇರಿದಂತೆ ವಿವಿಧ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
(Visited 1 times, 1 visits today)



