ತುಮಕೂರು: ರಾಜ್ಯದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಪರಿಸ್ಥಿತಿ ಇರುವಾಗ ಕಾವೇರಿ ನೀರು ಪ್ರಾಧಿಕಾರ ತಮಿಳು ನಾಡಿಗೆ ೧೫ ದಿನಗಳ ಕಾಲ ಪ್ರತಿದಿನ ೩೫೦೦ ಕ್ಯೂಸೆಕ್ ನೀರು ಹರಿಸಬೇಕೆಂಬ ಆದೇಶ ಅಮಾನವೀಯ. ಸರ್ಕಾರ ಯಾವುದೇ ಕಾರಣಕ್ಕೂ ನೀರು ಬಿಡಬಾರದು ಎಂದು ಒತ್ತಾಯಿಸಿ ವಿಜಯಸೇನೆ ಜಿಲ್ಲಾ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ವಿಜಯಸೇನೆಯ ಆಟೋ ಘಟಕ ಕಾರ್ಯಕರ್ತರು ಆಟೋಗಳನ್ನು ಪ್ರತಿಭಟನೆಗೆ ತಂದಿದ್ದರು. ಈ ವೇಳೆ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಕೆ. ಗಂಗಾಧರ್, ಈಗಾಗಲೇ ರಾಜ್ಯ ಸರ್ಕಾರವು ೧೧ ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆ ಎಂದು ಘೋಷಿಸಿದೆ, ಕೆ.ಆರ್.ಎಸ್‌ನಲ್ಲಿ ಶೇಕಡ ೩೩ರಷ್ಟು ಮಾತ್ರ ನೀರಿದೆ. ಹೀಗಿರುವಾಗ ತಮಿಳುನಾಡಿಗೆ ನೀರು ಹರಿಸಬೇಕು ಎಂದು ಹೇಳಿರುವುದು ಸರಿಯಲ್ಲ ಎಂದರು.
ಕಾವೇರಿ ವಿಚಾರದಲ್ಲಿ ಸ್ವಾತಂತ್ರ‍್ಯ ಪೂರ್ವದಿಂದಲೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಇದೆ, ಪ್ರಸ್ತುತ ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರುಸುತ್ತಿರುವ ಹೊತ್ತಿನಲ್ಲಿ ತಮಿಳುನಾಡು ಭಾಗದ ಬೆಳೆಗಳಿಗೆ ಪ್ರತಿನಿತ್ಯ ೩೫೦೦ ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಿರುವುದು ದುರಾದೃಷ್ಟಕರ. ಕುಡಿಯುವ ನೀರು ಮೊದಲ ಆದ್ಯತೆಯಾಗಿದ್ದು ಈಗಾಗಲೇ ಬೆಳದ ಬೆಳೆಗಳು ಒಣಗುತ್ತಿದ್ದು, ಕುಡಿಯುವ ನೀರಿಗೂ ಆಹಾಕಾರ ಸೃಷ್ಟಿಯಾಗಿದೆ ಕೆ.ಆರ್.ಎಸ್ ಬರಿದಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ನೀರು ಬಿಡುವ ಅದೇಶವನ್ನು ಹೊರಡಿಸಿರುವುದು ಅವೈಜ್ಞಾನಿಕವಾಗಿದೆ. ಕಾವೇರಿ ಹೆಸರಿನಲ್ಲಿ ರಚನೆಯಾಗಿರುವ ಪ್ರಾಧಿಕಾರ, ಸಮಿತಿಗಳ ಆದೇಶಗಳು ರಾಜ್ಯದ ಪಾಲಿಗೆ ಮರಣಶಾಸನವಾಗಿದೆ ಎಂದು ಗಂಗಾಧರ್ ಆಕ್ರೋಶವ್ಯಕ್ತಪಡಿಸಿದರು.
ನಂತರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು.
ವಿಜಯಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್, ಉಪಾಧ್ಯಕ್ಷ ನಯನ್‌ಕುಮಾರ್, ಆಟೋ ಘಟಕ ಜಿಲ್ಲಾಧ್ಯಕ್ಷ ತಿಪ್ಪೇಶ್, ನಗರ ಅಧ್ಯಕ್ಷ ರಾಕೇಶ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಕೆ. ರುದ್ರೇಶ್, ಕಾರ್ಯಾಧ್ಯಕ್ಷ ಎಸ್. ರುದ್ರೇಶ್, ಪ್ರಧಾನ ಕಾರ್ಯದರ್ಶಿ ಯೋಗೀಶ್, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಯಾಸ್ಮೀನ್ ತಾಜ್, ನಗರ ಅಧ್ಯಕ್ಷೆ ಕಾವ್ಯ ಶಿವಶಂಕರ್, ಮುಖಂಡರಾದ ಮೋಹನ್, ತಿಮ್ಮರಾಜು, ಪವನ್, ಅಂಬಿಕಾ ಮಹೇಶ್, ಕನ್ನಿಕಾಂಬ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

(Visited 1 times, 1 visits today)