ಪಾವಗಡ: ಕನ್ನಡ ಚಿತ್ರರಂಗದ ತುಪ್ಪದ ಬೆಡಗಿ ಖ್ಯಾತಿಯ ನಟಿ ರಾಗಿಣಿ ಅವರು ಗಡಿನಾಡು ಪಾವಗಡಕ್ಕೆ ಭೇಟಿ ನೀಡಿ, ತಾವು ನಾಯಕಿಯಾಗಿ ಅಭಿನಯಿಸಿರುವ ಸರ್ಕಾರಿ ನ್ಯಾಯಬೆಲೆ ಅಂಗಡಿ ಚಿತ್ರದ ಪ್ರದರ್ಶನವನ್ನು ಅಭಿಮಾನಿಗಳೊಂದಿಗೆ ವೀಕ್ಷಿಸಿ ಗಮನ ಸೆಳೆದರು.
ಪಟ್ಟಣದ ಅಲಂಕಾರ್ ಚಿತ್ರಮಂದಿರಕ್ಕೆ ಆಗಮಿಸಿದ ನಟಿ ರಾಗಿಣಿ ಅವರಿಗೆ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತ ಕೋರಿದರು. ಬಳಿಕ ಅಭಿಮಾನಿಗಳೊಂದಿಗೆ ಕುಳಿತು ಚಿತ್ರ ವೀಕ್ಷಿಸಿದ ಅವರು, ಸಿನಿಮಾ ಮುಗಿದ ನಂತರ ಅಭಿಮಾನಿಗಳೊಂದಿಗೆ ಸಂವಾದ ನಡೆಸಿ, ಸೆಲ್ಫಿ ತೆಗೆಸಿಕೊಂಡು ಅವರ ಅಭಿಮಾನಕ್ಕೆ ಸ್ಪಂದಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಾಗಿಣಿ, ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘ ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಆಧರಿಸಿ ಸಮಾಜಮುಖಿ ಹಾಗೂ ಅರ್ಥಪೂರ್ಣ ಚಿತ್ರವನ್ನು ನಿರ್ಮಿಸಲಾಗಿದೆ. ಉತ್ತಮ ಸಂದೇಶ ಹೊಂದಿರುವ ಇಂತಹ ಸಿನಿಮಾಗಳಿಗೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಗಡಿ ಭಾಗದ ಜನರ ಪ್ರೀತಿ ಮತ್ತು ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಉತ್ತಮ ಕಥಾಹಂದರ ಹೊಂದಿರುವ ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕರಾದ ಬಾಮಾ ಹರೀಶ್, ಚೆಲುವಮೂರ್ತಿ, ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ, ತಾಲ್ಲೂಕು ಅಧ್ಯಕ್ಷ ನಾಗರಾಜು, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಲಕ್ಷ÷್ಮಣ ಗೌಡ, ಕಾರ್ಯದರ್ಶಿ ರಾಮಕೃಷ್ಣಪ್ಪ, ಗೋವಿಂದರೆಡ್ಡಿ, ಸುಬ್ಬರಾಯಪ್ಪ, ಯತೀಶ್ ಕುಮಾರ್, ಯೋಗೀಶ್, ಸೂರಪ್ಪ, ಕದರಪ್ಪ, ಸುಬ್ರಮಣಿ ಸೇರಿದಂತೆ ತಾಲ್ಲೂಕಿನ ನ್ಯಾಯಬೆಲೆ ಅಂಗಡಿ ಮಾಲೀಕರು ಹಾಗೂ ಚಿತ್ರಾಭಿಮಾನಿಗಳು ಉಪಸ್ಥಿತರಿದ್ದರು.
(Visited 1 times, 1 visits today)



