ಕೊರಟಗೆರೆ: ವಿಬಿ-ಜಿ ರಾಮ್ ಜಿ ಯೋಜನೆಯಡಿ ಗ್ರಾಮೀಣ ನಿರುದ್ಯೋಗಿಗಳಿಗೆ ವರ್ಷಕ್ಕೆ ೧೨೫ ದಿನಗಳ ಕಾಲ ಸ್ಥಳೀಯವಾಗಿ ಅಕುಶಲ ಕೆಲಸ ನೀಡಲಾಗುತ್ತದೆ ಎಂದು ತಾಲ್ಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕರಾದ ಎಂ.ಬಿ.ಗುರುಮೂರ್ತಿ ತಿಳಿಸಿದರು.
ತಾಲೂಕಿನ ಅಕ್ಕಿರಾಂಪುರ ಗ್ರಾ.ಪಂ ಆವರಣದಲ್ಲಿ ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್ ಯೋಜನೆಯಡಿ ಕೂಲಿ ಆಧಾರಿತ ಕಾಮಗಾರಿಗಳ ಅಭಿಯಾನದ ಅಂಗವಾಗಿ ಜಾಗೃತಿ ಜಾಥಾ ಹಾಗೂ ಮನೆ ಮನೆ ಭೇಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಭಾಗದ ಜನತೆ ವಲಸೆ ಹೋಗಬಾರದು ಎನ್ನವ ಉದ್ದೇಶದಿಂದ ಸ್ಥಳೀಯವಾಗಿ ಉದ್ಯೋಗ ನೀಡುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿಬಿ-ಜಿ ರಾಮ್ ಜಿ ಯೋಜನೆಯಡಿ ದಿನಕ್ಕೆ ೩೮೨ ರೂ.ಗಳ ಕೂಲಿ ಹಣ ನೀಡಲಾಗುವುದು. ಪ್ರತಿ ಕುಟುಂಬ ವರ್ಷಕ್ಕೆ ೧೨೫ ದಿನ ಕೂಲಿ ಕೆಲಸ ಮಾಡುವುದರಿಂದ ವರ್ಷಕ್ಕೆ ೪೭೭೫೦ ರೂ.ಗಳ ಆದಾಯವನ್ನು ಸ್ಥಳೀಯವಾಗಿಯೇ ಗಳಿಸಬಹುದು. ಅಲ್ಲದೆ ಕೂಲಿ ಆಧಾರಿತ ಹಾಗೂ ಕೃಷಿ, ತೋಟಗಾರಿಕೆ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬನೆಯ ಜೀವನ ಸಾಗಿಸಬಹುದು ಎಂದು ತಿಳಿಸಿದರು.
ತಾಲೂಕು ಯೋಜನಾಧಿಕಾರಿ ಮಧುಸೂದನ್ ಮಾತನಾಡಿ, ವಿಬಿ-ಜಿ ರಾಮ್ ಜಿ ಯೋಜನೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಗ್ರಾಮೀಣ ಭಾಗದ ಜನತೆ ಕೂಲಿ ಕೆಲಸಕ್ಕಾಗಿ ವಲಸೆ ಹೋಗದಂತೆ ತಡೆದು, ಅವರಿಗೆ ಸ್ಥಳೀಯವಾಗಿಯೇ ಉದ್ಯೋಗ ಕಲ್ಪಿಸುವಲ್ಲಿ ಈ ಯೋಜನೆ ಸಹಕಾರಿಯಾಗಿದೆ. ಗ್ರಾಮೀಣ ಭಾಗದ ಜನತೆ ಈ ಯೋಜನೆಯಡಿ ದೊರಕುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕಿವಿಮಾತು ಹೇಳಿದರು.
ಪಿಡಿಒ ರಮೇಶ್ ಮಾತನಾಡಿ, ಜುಲೈ ೧ ರಿಂದ ವಿಬಿ-ಜಿ ರಾಮ್ ಜಿ ಯೋಜನೆ ಜಾರಿಗೆ ಬಂದಿದ್ದು, ಈ ಹಿಂದೆ ಇದ್ದ ಕೂಲಿ ದರ ರೂ. ೩೭೦/-ಅನ್ನು ರೂ.೩೮೨/- ಕ್ಕೆ ಹೆಚ್ಚಿಸಲಾಗಿದೆ. ಹಾಗಾಗಿ ಪ್ರತಿ ಕುಟುಂಬ ಕೆಲಸಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗದೆ ಸ್ಥಳೀಯವಾಗಿಯೇ ಆದಾಯ ಗಳಿಸಬಹುದು ಎಂದು ತಿಳಿಸಿದರು.
ಇದೇ ವೇಳೆ ಅಕ್ಕಿರಾಂಪುರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ನರಸಪ್ಪ, ತಾಂತ್ರಿಕ ಸಂಯೋಜಕರಾದ ರಮ್ಯ.ಟಿ.ಆರ್., ತಾಂತ್ರಿಕ ಸಹಾಯಕರಾದ ಹರ್ಷಿತಾ.ಎಸ್.ವಿ., ಬಿಎಫ್ಟಿ ಶಿವರಾಮ್ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.
(Visited 1 times, 1 visits today)





