ಹುಳಿಯಾರು: ರಾಜ್ಯದ ನಾನಾ ಕಡೆಗಳಲ್ಲಿ ಪಡಿತರ ವಿತರಣೆಗೆ ಎದುರಾಗಿರುವ ಸರ್ವರ್ ಸಮಸ್ಯೆ ಮುಂದುವರಿದಿದ್ದು, ಫಲಾನುಭವಿಗಳು ಪರದಾಡುವಂತಾಗಿದೆ. ಅಂತೆಯೇ, ಹುಳಿಯಾರು ಹೋಬಳಿಯ ಗೌಡಗೆರೆ ಸೊಸೈಟಿಯಲ್ಲೂ ಇದೇ ರೀತಿಯ ತಾಂತ್ರಿಕ ತೊಂದರೆ ಎದುರಾಗಿದ್ದು, ಪಡಿತರ ಚೀಟಿದಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಕಳೆದ ತಿಂಗಳೂ ಸಹ ಪಡಿತರ ವಿತರಣೆಗೆ ಸತಾಯಿಸುತ್ತಿರುವ ಸರ್ವರ್ ಸಮಸ್ಯೆಹೀ ತಿಂಗಳೂ ಕಾಡುತ್ತಿದ್ದು ಗೌಡಗೆರೆ ಸೊಸೈಟಿ ವ್ಯಾಪ್ತಿಗೆ ಬರುವ ಕೆ.ಸಿ.ಪಾಳ್ಯ, ಗೌಡಗೆರೆ, ಕುರಿಹಟ್ಟಿ ಮತ್ತು ಕಂಪನಹಳ್ಳಿ ಸೇರಿದಂತೆ ವಿವಿಧ ಹಳ್ಳಿಗಳ ಪಡಿತರ ಚೀಟಿದಾರರು ಅಕ್ಕಿ ಪಡೆಯಲು ಕಳೆದ ಎರಡು ದಿನಗಳಿಂದ ನ್ಯಾಯಬೆಲೆ ಅಂಗಡಿಯ ಮುಂದೆ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿ ಒನ್ ಟೈಮ್ ಬೆರಳಚ್ಚು ದೃಢೀಕರಣಕ್ಕೆ ಸರ್ವರ್ ನಿಧಾನವಾಗುತ್ತಿರುವುದರಿಂದ ಒಂದೇ ಒಂದು ಪಡಿತರ ಕಾರ್ಡ್ಗೆ ೧೦ ರಿಂದ ೧೫ ನಿಮಿಷ ಹಿಡಿಯುತ್ತಿದೆ. ಪರಿಣಾಮವಾಗಿ, ದಿನಕ್ಕೆ ಏಳೆಂಟು ಮಂದಿಯ ಬೆರಳಚ್ಚು ದೃಢೀಕರಣ ಆದರೆ ಹೆಚ್ಚು ಎನ್ನುವಂತಾಗಿದೆ. ಹಾಗಾಗಿ ಎರಡು ದಿನಗಳಿಂದ ನ್ಯಾಯಬೆಲೆ ಅಂಗಡಿಗಳ ಮುಂದೆ ಮುಂಜಾನೆಯಿAದಲೇ ನೂಕುನುಗ್ಗಲು ಉಂಟಾಗುತ್ತಿದೆ.
ಸರ್ವರ್ ಸಮಸ್ಯೆಯಿಂದಾಗಿ ಬೆಳಗ್ಗೆ ೬ ರಿಂದ ವಿತರಣೆ ಪ್ರಾರಂಭಿಸಿದರೆ, ೭.೩೦ ರ ವರೆಗೆ ಸಮಸ್ಯೆ ಇಲ್ಲದೆ ವಿತರಣೆ ಮಾಡಬಹುದು. ನಂತರ ಮತ್ತೆ ಸಮಸ್ಯೆ ಪ್ರಾರಂಭವಾಗಿ ಒಂದು ಕಾರ್ಡ್ ಎಂಟ್ರಿ ಮಾಡಿ ಹೆಬ್ಬೆಟ್ಟು ಪಡೆಯುವುದಕ್ಕೆ ಕನಿಷ್ಠ ಹತ್ತು ನಿಮಿಷವಾಗುತ್ತದೆ. ಹತ್ತು ಗಂಟೆ ನಂತರ ಸರ್ವರ್ ಕಾರ್ಯನಿರ್ವಹಿಸದ ಕಾರಣ ಎಲ್ಲವೂ ಸ್ಥಗಿತಗೊಂಡು ಅವ್ಯವಸ್ಥೆಯಾಗುತ್ತಿದೆ ಎಂದು ಪಡಿತರ ವಿತರಣಾ ಕೇಂದ್ರದ ಮಾಲೀಕರಾದ ರಾಮಚಂದ್ರಯ್ಯ ಹೇಳಿದ್ದಾರೆ.
ಈ ತಾಂತ್ರಿಕ ಸಮಸ್ಯೆಯಿಂದಾಗಿ ಕೂಲಿ ಕಾರ್ಮಿಕರು, ವಯೋವೃದ್ಧರು, ಅಂಗವಿಕಲರು ಹಾಗೂ ರೈತರು ತಮ್ಮ ನಿತ್ಯದ ಕೆಲಸ-ಕಾರ್ಯಗಳನ್ನು ಬಿಟ್ಟು ದಿನವಿಡೀ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ. ದೂರದ ಹಳ್ಳಿಗಳಿಂದ ಬಂದ ಜನರಿಗೆ ಸಕಾಲದಲ್ಲಿ ಪಡಿತರ ಸಿಗದೆ ಹತಾಶೆಯಿಂದ ವಾಪಸ್ ತೆರಳುತ್ತಿದ್ದಾರೆ. ಈ ಕುರಿತು ಸ್ಥಳೀಯ ನ್ಯಾಯಬೆಲೆ ಅಂಗಡಿಯವರು ಮೇಲಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿಯ ಗಮನಕ್ಕೆ ತಂದು ಚರ್ಚಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ದಿನಸಿ ಅಕ್ಕಿ ಪಡೆಯಲು ಎರಡು ದಿನಗಳಿಂದ ಬಂದು ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಸರ್ವರ್ ಸಿಗದೆ ವಾಪಸ್ ಹೋಗಿದ್ದೇನೆ. ಎರಡು ದಿನದ ಕೂಲಿ ಕೆಲಸವೇ ಹಾಳಾಗಿದೆ. ಕೂಲಿಗೆ ಹೋಗಿದ್ದರೆ ೨ ದಿನಗ ಕೂಲಿ ಹಣದಲ್ಲೇ ರೇಷನ್ ಖರೀದಿಸಬಹುದಿತ್ತು ಎಂದು ಅನ್ನಿಸುತ್ತಿದೆ. ಸಂಬAಧಪಟ್ಟ ಅಧಿಕಾರಿಗಳು ಕೂಡಲೆ ಈ ಸರ್ವರ್ ದೋಷವನ್ನು ಸರಿಪಡಿಸಿ, ಸುಲಭವಾಗಿ ಪಡಿತರ ಸಿಗುವಂತೆ ವ್ಯವಸ್ಥೆ ಮಾಡಬೇಕು ಎಂದು ಗ್ರಾಹಕ ಕುರಿಹಟ್ಟಿ ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ.
ಪ್ರತಿ ತಿಂಗಳೂ ಇದೇ ಸಮಸ್ಯೆ ಪುನರಾವರ್ತನೆಯಾಗುತ್ತಿದ್ದು ಕೂಡಲೇ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ತಾಂತ್ರಿಕ ಕ್ರಮ ಕೈಗೊಳ್ಳಬೇಕು ಎಂದು ಗೌಡಗೆರೆ ಸೊಸೈಟಿ ವ್ಯಾಪ್ತಿಯ ಗ್ರಾಮಸ್ಥರು ತೀವ್ರವಾಗಿ ಆಗ್ರಹಿಸಿದ್ದಾರೆ.
(Visited 1 times, 1 visits today)





