ತುಮಕೂರು: ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ಶ್ರೀರಾಮ್ ಸೇವಾ ಸಂಕಲ್ಪ ಯೋಜನೆಯಡಿ ಶನಿವಾರ ನಗರದ ಗಾಜಿನಮನೆಯಲ್ಲಿ ನಡೆದ ಸಮಾರಂಭದಲ್ಲಿ ಲಾರಿ ಮಾಲೀಕರು, ಚಾಲಕರು, ಕ್ಲೀನರ್‌ಗಳ ೧೫೦೦ ಮಕ್ಕಳಿಗೆ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಿಸಲಾಯಿತು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಶ್ರೀರಾಮ್ ಫೈನಾನ್ಸ್ನ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀಧರ ಮಠ ಅವರು ಮಾತನಾಡಿ, ಟ್ರಕ್ ಚಾಲಕರು ಮತ್ತು ಕ್ಲೀನರ್‌ಗಳು ಯಾವಾಗಲೂ ಒಂದು ಊರಿನಿಂದ ಇನ್ನೊಂದು ಊರಿಗೆ ಪ್ರಯಾಣ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಅವರು ತಮ್ಮ ಕುಟುಂಬದ ಹಾಗೂ ಮಕ್ಕಳ ಶಿಕ್ಷಣದ ಬಗ್ಗೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಶ್ರೀರಾಮ್ ಫೈನಾನ್ಸ್ ಅವರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಿಸುತ್ತಾ ನೆರವಾಗುತ್ತಾ ಬಂದಿದೆ. ಈ ವರ್ಷ ದೇಶಾದ್ಯಂತ ಸುಮಾರು ಎರಡು ಲಕ್ಷ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಗುತ್ತಿದೆ ಎಂದು ಹೇಳಿದರು.
ನಿರ್ಮಾಣ ಉಪಕರಣಗಳು, ಕೃಷಿ ಉಪಕರಣಗಳು, ಚಿನ್ನದ ಸಾಲಗಳು, ವೈಯಕ್ತಿಕ ಸಾಲಗಳು, ಇತ್ಯಾದಿಗಳಿಗೆ ಹಣಕಾಸು ಒದಗಿಸುವ ಶ್ರೀರಾಮ್ ಫೈನಾನ್ಸ್, ೨೦೧೩ ರಲ್ಲಿ ಶ್ರೀ ರಾಮ್ ಫೌಂಡೇಶನ್ ಎಂಬ ಚಾರಿಟೇಬಲ್ ಸಂಸ್ಥೆ ಸ್ಥಾಪಿಸಿ ಇದರ ಮುಖಾಂತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಕಿವುಡ ಮಕ್ಕಳ ಶಾಲೆ ನಡೆಸುವುದು, ವೃದ್ದಾಶ್ರಮಗಳನ್ನು ನಡೆಸುವುದು ಮತ್ತು ಪರಿಸರ ಸಂರಕ್ಷಣೆಗೆ ಗಿಡಗಳನ್ನು ನೆಡವುದು, ಹಾಗೂ ರಸ್ತೆ ಬದಿಯ ಸಣ್ಣವ್ಯಾಪಾರಿಗಳಿಗೆ ಛತ್ರಿ ಸೌಲಭ್ಯ ಕಲ್ಪಿಸುವುದು ಹಾಗೂ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳುವುದು ಹಾಗೂ ಚಾಲಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಹಾಯ ಹಾಗೂ ಅಂಧ ಮಕ್ಕಳಿಗೆ ಸಹಾಯ ಇದೇ ರೀತಿಯ ಸಾಮಾಜಿಕ ಸೇವೆಯನ್ನು ಮಾಡುತ್ತಾ ಬಂದಿದೆ ಎಂದು ತಿಳಿಸಿದರು.
ಟ್ರಕ್ ಡ್ರೈವರ್‌ಗಳು ಮತ್ತು ಕ್ಲೀನರ್‌ಗಳ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಲು ಮತ್ತು ಮೇಲ್ವಿಚಾರಣೆ ಮಾಡಲು ಶ್ರೀರಾಮ್ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ೮ ರಿಂದ ೧೨ ನೇ ತರಗತಿಯವರೆಗೆ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ವಿದ್ಯಾರ್ಥಿಗಳು ೭ ನೇ ತರಗತಿಯಲ್ಲಿ ಶೇಕಡ ೬೦ಕ್ಕಿಂಥಾ ಹೆಚ್ಚಿನ ಅಂಕ ಪಡೆದಿರಬೇಕು. ೮ ನೇ ತರಗತಿಯಲ್ಲಿ ಓದುತ್ತಿರಬೇಕು. ವಿದ್ಯಾರ್ಥಿ ಪೋಷಕರು ವಾಹನ ಮಾಲೀಕರಾಗಿರಬೇಕು ಅಥವಾ ವಾಹನ ಚಾಲನಾ ಪರವಾನಿಗೆ ಪತ್ರವನ್ನು ಹೊಂದಿರಬೇಕು. ೮ ನೇ ತರಗತಿಯಿಂದ ೧೦ ನೇ ತರಗತಿಯವರೆಗೆ ೪ ಸಾವಿರಗಳನ್ನು ಪ್ರತಿವರ್ಷ ಕೊಡಲಾಗುತ್ತದೆ. ಪ್ರತಿವರ್ಷವೂ ಶೇಕಡ ೬೦ಕ್ಕಿಂತ ಹೆಚ್ಚಿನ ಫಲಿತಾಂಶ ಪಡೆದಿರಬೇಕು. ೧೧ ರಿಂದ ೧೨ ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿವರ್ಷ ೪,೫೦೦ ರೂ.ಗಳನ್ನು ನೀಡಲಾಗುತ್ತದೆ. ಒಮ್ಮೆ ೮ನೇ ತರಗತಿಗೆ ಆಯ್ಕೆಯಾದ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯರಿಗೆ ಪಿಯುಸಿ ವರೆಗೂ ನಿರಂತರವಾಗಿ ಪ್ರತಿವರ್ಷವೂ ವಿದ್ಯಾರ್ಥಿ ವೇತನ ನೀಡುತ್ತೇವೆ ಹಾಗೂ ಪ್ರತಿವರ್ಷವೂ ೬೦ರಷ್ಟು ಅಂಕ ಪಡೆದು ವಿದ್ಯಾರ್ಥಿಗಳು ತೇರ್ಗಡೆಯಾಗಿರಬೇಕು ಎಂದು ಶ್ರೀಧರ ಮಠ ಹೇಳಿದರು.
ಅಡಿಷನಲ್ ಎಸ್.ಪಿ. ಪುರುಷೋತ್ತಮ್ ಮಾತನಾಡಿ, ಲಾರಿ ಚಾಲಕರು, ಕ್ಲೀನರ್‌ಗಳ ಕಾರ್ಯ ಕಷ್ಟಕರವಾದದ್ದು, ತಮ್ಮ ಪ್ರಯಾಣದ ವೇಳೆ ಕುಟುಂಬದ ಬಗ್ಗೆ ಗಮನಹರಿಸಲಾಗುವುದಿಲ್ಲ. ಇಂತಹವರ ಮಕ್ಕಳಿಗೆ ಶ್ರೀರಾಮ್ ಫೈನಾನ್ಸ್ನವರು ವಿದ್ಯಾರ್ಥಿವೇತನ ನೀಡಿ ನೆರವಾಗುತ್ತಿರುವುದು ಉತ್ತಮ ಕಾರ್ಯ. ಆದರೆ ಇದರ ಜೊತೆಗೆ ಮಕ್ಕಳ ಹೆಸರಿನಲ್ಲಿ ಹಣ ಠೇವಣಿ ಇಡುವ ಮೂಲಕ ಅವರ ಭವಿಷ್ಯದ ವಿದ್ಯಾಭ್ಯಾಸಕ್ಕೆ ನೆರವಾಗುವ ಯೋಜನೆಯನ್ನೂ ಜಾರಿಗೆ ತರುವಂತೆ ಸಲಹೆ ಮಾಡಿದರು.
ಸಂಸ್ಥೆಯ ಜೋನಲ್ ಬಿಸಿನೆಸ್ ಹೆಡ್ ಹೆಚ್. ಚನ್ನನಗೌಡ, ತಜ್ಞವೈದ್ಯ ಡಾ. ಮುರಳಿಧರ, ಸಂಸ್ಥೆಯ ವ್ಯವಹಾರ ಘಟಕ ಮುಖ್ಯಸ್ಥ ಪಿ.ಜಿ. ವಿಜಯಕುಮಾರ್, ಝೋನಲ್ ಸೇಲ್ಸ್ ಹೆಡ್ ಜೆ. ಪಂಚಾಕ್ಷರಪ್ಪ, ಝೋನಲ್ ಕಲೆಕ್ಷನ್ ಹೆಡ್ ಟಿ.ಆರ್. ರಾಘವೇಂದ್ರ, ಸ್ಟೇಟ್ ಬಿಸಿನೆಸ್ ಹೆಡ್ ಶ್ರೀಕಾಂತ್ ರಾವ್, ತುಮಕೂರು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಮುಜಂಬೀಲ್ ಪಾಷ, ರೀಜನಲ್ ಬಿಸಿನೆಸ್ ಹೆಡ್ ಹುಸೇನಪ್ಪ, ಕಲೆಕ್ಷನ್ ಹೆಡ್ ಟಿ. ಪ್ರವೀಣ್‌ಕುಮಾರ್, ಎಸ್.ಆರ್. ಪ್ರಸನ್ನಕುಮಾರ್, ಎ.ಶಿವಮೂರ್ತಿ ಮೊದಲಾದವರು ಭಾಗವಹಿಸಿದ್ದರು.
ಈ ವೇಳೆ ಲಾರಿ ಚಾಲಕರು, ಕ್ಲೀನರ್ ಕುಟುಂಬದ ಸದಸ್ಯರ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಸಿದ್ಧಗಂಗಾ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿದರು.

(Visited 1 times, 1 visits today)