ತುಮಕೂರು: ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಐಇಇಇ ವಿದ್ಯಾರ್ಥಿ ಘಟಕ (ಐಇಇಇ ಎಸ್ಎಸ್ಐಟಿ ಎಸ್ಬಿ) ಹಾಗೂ ಮಹಿಳಾ ಇಂಜಿನಿಯರ್ಗಳ ವಿಭಾಗದ ವತಿಯಿಂದ ಅಕ್ಟೋಬರ್ ೧೭ರಂದು ಐಇಇಇ ದಿನಾಚರಣೆ-೨೦೨೬ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. “ಉತ್ತಮ ನಾಳೆಗಾಗಿ ತಂತ್ರಜ್ಞಾನದ ಸದ್ಬಳಕೆ” ಎಂಬ ಆಶಯದೊಂದಿಗೆ ನಡೆದ ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನ, ನಾವೀನ್ಯತೆ ಮತ್ತು ಉದ್ಯಮಶೀಲತೆಯ ಮಹತ್ವವನ್ನು ಪರಿಚಯಿಸಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಪಾನ್ನ ಟೋಕಿಯೋ ಮೂಲದ ಡಾಮಸ್.ಕಸ್ ಸಂಸ್ಥೆಯ ಸಂಸ್ಥಾಪಕರಾದ ಡಾ. ಅಕಿಹಿಕೊ ಕೆನ್ ಸುಗಿಯಾಮಾ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಸೇರಿದಂತೆ ನವೀನ ತಂತ್ರಜ್ಞಾನಗಳ ಬೆಳವಣಿಗೆ ಹಾಗೂ ಅವುಗಳ ಪರಿಣಾಮಕಾರಿ ಬಳಕೆಯನ್ನು ಮಾಡಿಕೊಳ್ಳಬೇಕಾದ ಅಗತ್ಯತೆಯನ್ನು ಒತ್ತಿ ಹೆಳಿದರು.
ತಂತ್ರಜ್ಞಾನವನ್ನು ಕಲಿಯುವುದಷ್ಟೇ ಸಾಕಾಗುವುದಿಲ್ಲ. ಅದನ್ನು ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮತ್ತು ಮಾನವ ಕಲ್ಯಾಣಕ್ಕೆ ಬಳಸಬೇಕು. ಹೊಸ ಆಲೋಚನೆಗಳನ್ನು ಗುರುತಿಸುವುದು, ಸಮಸ್ಯೆಗಳಿಗೆ ವಿಭಿನ್ನ ಪರಿಹಾರಗಳನ್ನು ರೂಪಿಸುವುದು, ತಾಂತ್ರಿಕ ಜ್ಞಾನವನ್ನು ಪ್ರಾಯೋಗಿಕವಾಗಿ ಬಳೆಸುವುದನ್ನು ಕಲಿತುಕೊಳ್ಳಬೇಕು ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು ತಮ್ಮದೇ ಆದ ನವೀನ ಆಲೋಚನೆಗಳಿಗೆ ರೂಪ ನೀಡಿ, ತಂತ್ರಜ್ಞಾನ ಆಧಾರಿತ ಉದ್ಯಮಗಳನ್ನು ಪ್ರಾರಂಭಿಸುವ ದಿಸೆಯಲ್ಲಿ ಚಿಂತಿಸಬೇಕು ಎಂದು ಡಾ. ಅಕಿಹಿಕೊ ಕೆನ್ ಸುಗಿಯಾಮಾ ಅವರು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂ. ನಾಡಕಟ್ಟಿ ಅವರು ವಹಿಸಿದ್ದರು. ಬೆಂಗಳೂರು ವಿಭಾಗದ ಮಹಿಳಾ ಇಂಜಿನಿಯರ್ಗಳ ವಿಭಾಗದ ಅಧ್ಯಕ್ಷರಾದ ಡಾ. ಪುಷ್ಪಾ ಸಿ. ಎನ್., ಐಇಇಇ ಬೆಂಗಳೂರು ವಿಭಾಗದ ಖಜಾಂಚಿ ಡಾ. ಅಶ್ವಿನಿ ಅಪ್ಪಾಜಿ ಹಾಗೂ ಐಇಇಇ ಸಂಕೇತ ಸಂಸ್ಕರಣಾ ವಿಭಾಗದ ಬೆಂಗಳೂರು ವಿಭಾಗದ ಅಧ್ಯಕ್ಷರಾದ ಡಾ. ಸನೀಶ್ ಕ್ಲೀಟಸ್, ಐಇಇಇ ಎಸ್ಎಸ್ಐಟಿ ಎಸ್ಬಿ ಘಟಕದ ಸಲಹೆಗಾರರಾದ ಡಾ. ಎಂ. ಸಿ. ಚಂದ್ರಶೇಖರ ಹಾಗೂ ಕಾರ್ಯಕ್ರಮದ ಸಂಚಾಲಕರಾದ ಡಾ. ಶಾರದಾ ಗುಪ್ತಾ ,ವಿವಿಧ ಐಇಇಇ ವಿಭಾಗಗಳ ಅಧ್ಯಾಪಕ ಸಲಹೆಗಾರರು ಮತ್ತು ವಿದ್ಯಾರ್ಥಿ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ತಾಂತ್ರಿಕ ಶಿಕ್ಷಣ, ವೃತ್ತಿಪರ ಕೌಶಲ್ಯಗಳ ಅಭಿವೃದ್ಧಿ, ಸಂಶೋಧನೆ ಮತ್ತು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಐಇಇಇ ಸಂಸ್ಥೆಯ ಪಾತ್ರ ಮಹತ್ವದ್ದಾಗಿದೆ ಎಂಬುದನ್ನು ಕಾರ್ಯಕ್ರಮವು ಮತ್ತೊಮ್ಮೆ ಸಾರಿತು. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಉತ್ಸಾಹದಿಂದ ಭಾಗವಹಿಸಿದ ಈ ಕಾರ್ಯಕ್ರಮವು ಜಾಗತಿಕ ತಂತ್ರಜ್ಞಾನ ಬೆಳವಣಿಗೆಗಳ ಅರಿವು ಮೂಡಿಸುವುದರ ಜೊತೆಗೆ, ಸಂಶೋಧನೆ, ನಾವೀನ್ಯತೆ ಮತ್ತು ನವೋದ್ಯಮಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡುವ ಸ್ಫೂರ್ತಿಯನ್ನು ನೀಡಿತು.
(Visited 1 times, 1 visits today)



