ತುಮಕೂರು: ಇತಿಹಾಸದ ಅನೇಕ ದಾಖಲೆಗಳು ಹಾಗೂ ಪುರಾತನ ವಸ್ತುಗಳು ಅಳಿವಿನಂಚಿನಲ್ಲಿವೆ. ಪೂಜೆ, ಪುನಸ್ಕಾರ ಸೇರಿದಂತೆ ವಿವಿಧ ಆಚರಣೆಗಳ ಹೆಸರಿನಲ್ಲಿ ಅವುಗಳ ಐತಿಹಾಸಿಕ ಮಹತ್ವ ಅರಿಯದೆ ನಾಶಪಡಿಸುತ್ತಿದ್ದೇವೆ. ಇದು ಆತಂಕಕಾರಿ ಬೆಳವಣಿಗೆ. ಇತಿಹಾಸ ಮರೆತರೆ ಸಂಸ್ಕೃತಿ, ಪರಂಪರೆಯ ಅಸ್ತಿತ್ವಕ್ಕೇ ಧಕ್ಕೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ಡಾ. ಎಚ್.ಎಸ್. ಮೋಹನ ಹೇಳಿದರು.
ತುಮಕೂರು ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಮೈಸೂರಿನ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಹಾಗೂ ಸಂಶೋಧನಾ ವಿಭಾಗ ಮತ್ತು ಹಳೆಯ ವಿದ್ಯಾರ್ಥಿಗಳ ವೇದಿಕೆಯ ಸಂಯುಕ್ತಾಶ್ರಯದಲ್ಲಿ ನ. 05 ಗುರುವಾರದಂದು ಆಯೋಜಿಸಿದ್ದ ಪ್ರಾಚ್ಯ ಪ್ರಜ್ಞೆ ಮತ್ತು ವಿಶ್ವವಿದ್ಯಾನಿಲಯಗಳ ಜ್ಞಾನದ ನಡೆ ಗ್ರಾಮೀಣ ಶಾಲೆಗಳ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಕಾಲದಲ್ಲಿ ಚರಿತ್ರೆಯನ್ನು ಅರ್ಥೈಸಿಕೊಳ್ಳುವ ದೃಷ್ಟಿಕೋನ ಬದಲಾಗಬೇಕಿದೆ. ನಮ್ಮ ಪರಂಪರೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಅಗತ್ಯವಿದೆ. ಕೆಲವೊಮ್ಮೆ ತಪ್ಪು ಕಲ್ಪನೆಗಳನ್ನೇ ಇತಿಹಾಸವೆಂದು ನಂಬಿ, ನೈಜ ಇತಿಹಾಸವನ್ನು ನಿರ್ಲಕ್ಷಿಸುತ್ತೇವೆ. ಹೀಗಾಗಿ ಹಿಂದಿನ ಘಟನೆಗಳು, ದಾಖಲೆಗಳು ಹಾಗೂ ಪುರಾತನ ವಸ್ತುಗಳ ಮಹತ್ವದ ಬಗ್ಗೆ ಪ್ರತಿಯೊಬ್ಬರೂ ಅರಿವು ಹೊಂದಬೇಕು ಎಂದು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ನರಸಿಂಹಮೂರ್ತಿ ಮಾತನಾಡಿ ಸಮಾಜದ ಜ್ಞಾನ ಸಂಪತ್ತು ಹೆಚ್ಚಬೇಕಾದರೆ ಮೊದಲು ನಮ್ಮ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಅರಿವು ಬೆಳೆಸಿಕೊಳ್ಳಬೇಕು. ಇತಿಹಾಸದ ಪ್ರಜ್ಞೆ ಜ್ಞಾನವಂತರಾಗಲು ಅಗತ್ಯವಾಗಿದ್ದು, ನಮ್ಮ ಪೂರ್ವಜರ ಬದುಕು, ಸಾಧನೆ ಹಾಗೂ ಮಾನವೀಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇತಿಹಾಸ ಮರೆತರೆ ಸಂಸ್ಕೃತಿ, ಪರಂಪರೆಯ ಅಸ್ತಿತ್ವಕ್ಕೆ ಧಕ್ಕೆ ಎಂದು ಹೇಳಿದರು.
ಕಾಯಕವೇ ಕೈಲಾಸ ಎಂದು ಸಾರಿದ ಬಸವಣ್ಣನವರ ತತ್ವವನ್ನು ಸ್ಮರಿಸುವುದರೊಂದಿಗೆ ನಮ್ಮತನವನ್ನು ಅರಿತುಕೊಳ್ಳಬೇಕು. ನಮ್ಮ ಇತಿಹಾಸ ಕೇವಲ ಹಿಂದಿನ ಘಟನೆಗಳ ದಾಖಲೆಯಲ್ಲ, ಅದು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಮಾನವೀಯ ಮೌಲ್ಯಗಳನ್ನು ತಿಳಿಸಿಕೊಡುವ ಜ್ಞಾನದ ಭಂಡಾರವಾಗಿದೆ. ನಮ್ಮ ಬೇರುಗಳ ಅರಿವಿದ್ದಾಗ ಮಾತ್ರ ಮುಂದಿನ ಪೀಳಿಗೆಗೆ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಹಸ್ತಾಂತರಿಸಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಅಧ್ಯಕ್ಷ ಪೆÇ್ರ. ಎಲ್.ಪಿ. ರಾಜು ಮಾತನಾಡಿ, ಇತಿಹಾಸವನ್ನು ಅಧ್ಯಯನ ಮಾಡಿದಾಗ ರಾಜತಂತ್ರ, ಕುತಂತ್ರ ಮತ್ತು ರಾಜಕೀಯದ ವಿವಿಧ ಆಯಾಮಗಳನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಇತಿಹಾಸದಿಂದ ನಾವು ಯಾವ ಮೌಲ್ಯಗಳನ್ನು ಗ್ರಹಿಸಿಕೊಳ್ಳಬೇಕು ಎಂಬ ವಿವೇಚನೆ ಬೆಳೆಸಿಕೊಳ್ಳಬೇಕು. ಜ್ಞಾನವಂತರಾಗಿ ರಾಜಕೀಯ ಕುತಂತ್ರಗಳಿಗಿಂತ ಇತಿಹಾಸದ ನೈಜ ಸಂಗತಿಗಳು ಹಾಗೂ ಮೌಲ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ನಂತರ ‘ಪುರಾತತ್ವ ಪರಿಚಯ’, ‘ಕಲೆ ಮತ್ತು ವಾಸ್ತುಶಿಲ್ಪ’ ಹಾಗೂ ‘ಭಾರತದ ಚರಿತ್ರೆಯ ಒಳಸುಳಿಗಳು’ ವಿಷಯಗಳ ಕುರಿತು ವಿಚಾರ ಸಂಕಿರಣಗಳು ನಡೆದವು.
ಶಾಲಾ ಶಿಕ್ಷಣ ಇಲಾಖೆಯ ಪರಿವೀಕ್ಷಕರು ಹಾಗೂ ನೋಡಲ್ ಅಧಿಕಾರಿ ಮಂಜುನಾಥ್ ಪಿ., ಪ್ರಾಥಮಿಕ ಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಉಮೇಶ್, ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪೆÇ್ರ. ಎಂ. ಕೊಟ್ರೇಶ್, ಡಾ. ಶ್ರೀನಿವಾಸ್, ಪೆÇ್ರ. ಪ್ರಿಯಾ ಠಾಕೂರ್, ಚಿಕ್ಕಣ್ಣ ಉಪಸ್ಥಿತರಿದ್ದರು.
(Visited 1 times, 1 visits today)



