ತುಮಕೂರು: ಕೃತಕ ಬುದ್ಧಿಮತ್ತೆ ಮತ್ತು ಸ್ವಯಂಚಾಲಿತ ರೋಬೋಟ್ ತಂತ್ರಜ್ಞಾನಗಳು ಭವಿಷ್ಯದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದು ಬೆಂಗಳೂರಿನ ಅಡ್ವಾನ್ಸ್ಡ್ ಮೆಕ್ಯಾನಿಕಲ್ ಸಿಸ್ಟಮ್ ಪ್ರೈವೇಟ್ ಲಿಮಿಟೆಡ್‍ನ ಉಪ ಪ್ರಧಾನ ವ್ಯವಸ್ಥಾಪಕ ಸಚಿನ್ ಗೋಟಾ ತಿಳಿಸಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ರೋಬೋಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ ವಿಭಾಗದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ‘ಎಐ ಆಧಾರಿತ ಸ್ವಯಂಚಾಲಿತ ರೋಬೋಟ್‍ಗಳು’ ಕುರಿತು ವಿಶೇಷ ತಾಂತ್ರಿಕ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸಚಿನ್ ಗೋಟಾ ಅವರು ಮಾತನಾಡಿ, ಮುಂದಿನ ಪೀಳಿಗೆಯ ಸ್ವಯಂಚಾಲಿತ ರೋಬೋಟಿಕ್ ವ್ಯವಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಆಗುವ ಬದಲಾವಣೆಗಳ ಕುರಿತು ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ರೋಬೋಟ್‍ಗಳು ಮಾನವನಿಗೆ ಸಹಾಯ ಮಾಡುವ ಸಾಧನಗಳಾಗಿದ್ದು, ನೀಡಲಾದ ಸೂಚನೆಗಳು ಮತ್ತು ತಂತ್ರಜ್ಞಾನದ ಆಧಾರದ ಮೇಲೆ ನಿರಂತರವಾಗಿ ಹಾಗೂ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತವೆ. ಕೃತಕ ಬುದ್ಧಿಮತ್ತೆಯ ಅಳವಡಿಕೆಯಿಂದ ರೋಬೋಟ್‍ಗಳ ನಿರ್ಧಾರ ತೆಗೆದುಕೊಳ್ಳುವ ಸಾಮಥ್ರ್ಯ ಮತ್ತು ಕಾರ್ಯಕ್ಷಮತೆ ಹೆಚ್ಚಾಗಿದೆ ಎಂದರು.
ರೋಬೋಟಿಕ್ಸ್ ತಂತ್ರಜ್ಞಾನವು ಕಳೆದ ಹಲವು ದಶಕಗಳಿಂದ ಮಹತ್ತರ ಬದಲಾವಣೆಗಳನ್ನು ಕಾಣುತ್ತಿದ್ದು, 1961ರಿಂದ 2021ರವರೆಗಿನ ರೋಬೋಟ್‍ಗಳ ಬೆಳವಣಿಗೆ ಆಧುನಿಕ ತಂತ್ರಜ್ಞಾನಕ್ಕೆ ಹೊಸ ದಿಕ್ಕು ನೀಡಿದೆ. ಆರೋಗ್ಯ ಕ್ಷೇತ್ರದಲ್ಲಿ ರೋಬೋಟ್‍ಗಳ ಬಳಕೆಯು ವೈದ್ಯಕೀಯ ಸಿಬ್ಬಂದಿಯ ಕೆಲಸದ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ರೋಗಿಗಳ ಆರೈಕೆಯನ್ನು ಸುಧಾರಿಸಲು ಸಹಕಾರಿಯಾಗಿದೆ. ದೇಹದ ತಪಾಸಣೆ, ರೋಗಿಗಳ ಸೇವೆ ಹಾಗೂ ವಿವಿಧ ವೈದ್ಯಕೀಯ ಕಾರ್ಯಗಳಲ್ಲಿ ರೋಬೋಟ್ ತಂತ್ರಜ್ಞಾನ ಬಳಕೆಯಾಗುತ್ತಿದೆ ಎಂದು ಅವರು ತಿಳಿಸಿದರು.
ಇದಲ್ಲದೆ, ಕಣ್ಗಾವಲು, ರಸ್ತೆ ಮೇಲ್ವಿಚಾರಣೆ, ಕೈಗಾರಿಕೆ, ವೈದ್ಯಕೀಯ, ಹೋಟೆಲ್ ಮತ್ತು ಆತಿಥ್ಯ ಹಾಗೂ ಸರ್ಕಾರ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಬಳಸಲಾಗುತ್ತಿರುವ ವಿವಿಧ ರೀತಿಯ ರೋಬೋಟ್‍ಗಳ ಕಾರ್ಯವೈಖರಿಯನ್ನು ವಿವರಿಸಿದರು. ತ್ರಿವಿಮಿತೀಯ ಮುದ್ರಣ ತಂತ್ರಜ್ಞಾನದಲ್ಲಿ ವಸ್ತುಗಳ ಪದರ ಜೋಡಣೆ ಮತ್ತು ದ್ರವ ಅಂಟು ವಸ್ತುಗಳನ್ನು ಘನೀಕರಿಸುವ ವಿಧಾನಗಳ ಬಗ್ಗೆಯೂ ಮಾಹಿತಿ ನೀಡಿದರು.
ಕೃತಕ ಬುದ್ಧಿಮತ್ತೆ ಮತ್ತು ಸ್ವಯಂಚಾಲಿತ ರೋಬೋಟ್ ತಂತ್ರಜ್ಞಾನಗಳು ಮಾನವನ ಕೆಲಸವನ್ನು ಸುಲಭಗೊಳಿಸುವುದರ ಜೊತೆಗೆ ಕೈಗಾರಿಕೆ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿವೆ. ವಿದ್ಯಾರ್ಥಿಗಳು ಇಂತಹ ಆಧುನಿಕ ತಂತ್ರಜ್ಞಾನಗಳ ಬಗ್ಗೆ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು.
ತಾಂತ್ರಿಕ ಉಪನ್ಯಾಸದಲ್ಲಿ ಡೀನ್ ಅಕಾಡೆಮಿಕ್ ಡಾ. ರೇಣುಕಾಲತಾ ಎಸ್., ರೋಬೋಟಿಕ್ಸ್ ಮತ್ತು ಎಐ ವಿಭಾಗದ ಮುಖ್ಯಸ್ಥರಾದ ಡಾ. ಸುಮನಾ ಎಲ್, ಕಾರ್ಯಕ್ರಮದ ಸಂಯೋಜಕರಾದ ಸಹಾಯಕ ಪ್ರಾಧ್ಯಾಪಕ ಯಶವಂತ್ ಕೆ.ಎಸ್. ಸೇರಿದಂತೆ ವಿಭಾಗದ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

(Visited 1 times, 1 visits today)