ಹುಳಿಯಾರು:

      ಹೆದ್ದಾರಿ ನಿರ್ಮಾಣದ ನೆಪದಲ್ಲಿ ಹಾಲಿ ರಸ್ತೆಯನ್ನು ನಿರ್ಲಕ್ಷ್ಯ ಮಾಡಿರುವುದರಿಂದ ರಾಷ್ಟ್ರೀಯ ಹೆದ್ದಾರಿ 150 ಎ ನ ಹುಳಿಯಾರು ಪಟ್ಟಣದಲ್ಲಿ ಸಂಪೂರ್ಣ ಹದಗೆಟ್ಟಿದ್ದು ಇಲ್ಲಿನ ಗುಂಡಿಗಳು ಮೃತ್ಯುವಿಗೆ ಆಹ್ವಾನ ನೀಡುವಂತಿದೆ.

      ಇಲ್ಲಿನ ಎಪಿಎಂಸಿಯಿಂದ ಆರಂಭವಾಗಿ ರಾಮಗೋಪಾಲ್ ಸರ್ಕಲ್ ಬಾಲಾಜಿ ಥಿಯೇಟರ್ ವರೆವಿಗೂ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯಲ್ಲಿನ ಗುಂಡಿಗಳಿಂದಾಗಿ ವಾಹನ ಚಾಲಕರು ಈ ಹೆದ್ದಾರಿಯ ರಸ್ತೆಯಲ್ಲಿ ಪ್ರಯಾಣಿಸಲು ಹರಸಾಹಸ ಪಡುವಂತಾಗಿರುವುದು ನಿತ್ಯದ ಚಿತ್ರಣವಾಗಿದೆ.

      ಅತಿ ಹೆಚ್ಚು ವಾಹನ ದಟ್ಟಣೆಯಿರುವ ಈ ಹೆದ್ದಾರಿಯಲ್ಲಿ ನಿತ್ಯವೂ ನೂರಾರು ಬಸ್, ಲಾರಿಗಳು ಸಂಚರಿಸುವ ಪ್ರಮುಖ ರಸ್ತೆ ಇದಾಗಿದ್ದು ಇಲ್ಲಿ ಗುಂಡಿಗಳದ್ದೇ ಕಾರುಬಾರಾಗಿದೆ. ರಸ್ತೆಯು ಗುಂಡಿಗಳಿಂದ ತುಂಬಿದ್ದು ಚರಂಡಿ ನೀರು ಕೂಡ ರಸ್ತೆಯ ಮೇಲೆ ಹರಿಯುವುದರಿಂದ ಗುಂಡಿಗಳು ನೀರಿನಿಂದ ತುಂಬಿ ವಾಹನ ಸವಾರರಿಗೆ ಕಾಣದಂತಾಗಿ ನಿತ್ಯ ಸವಾರರು ಬಿದ್ದೇಳುವ ಪ್ರಸಂಗ ಜರುಗುತ್ತಲೇ ಇದೇ.

      ವಾಹನ ಸವಾರರನ್ನು ಮೃತ್ಯುಕೂಪಕ್ಕೆ ಆಹ್ವಾನಿಸುವ ಈ ರಸ್ತೆಯಲ್ಲಿ ರಸ್ತೆ ಉಬ್ಬಿನ ಬಗ್ಗೆಯಾಗಲಿ, ಗುಂಡಿಗಳ ಬಗ್ಗೆಯಾಗಲಿ ಯಾವುದೇ ಸೂಚನಾ ಫಲಕವೂ ಹಾಕಲಾಗಿಲ್ಲ. ಕಳೆದೊಂದು ವಾರದಿಂದ ಚರಂಡಿ ನೀರು ಕೂಡ ಇದರಲ್ಲಿ ತುಂಬಿರುತ್ತದೆ. ಹಗಲಿನ ವೇಳೆ ಹೇಗೋ ಗುಂಡಿಗಳು ಕಾಣುವುದರಿಂದ ತಪ್ಪಿಸಲು ಹೆಣಗಾಡುವ ಪ್ರಯಾಣಿಕರು, ರಾತ್ರಿ ವೇಳೆ ಕಾಣದ ಗುಂಡಿಗಳಲ್ಲಿ ಬಿದ್ದು ಗಾಯಗೊಳ್ಳುತ್ತಿದ್ದಾರೆ.
ಜಿಲ್ಲಾ ಪಂಚಾಯಿತಿ ಸದಸ್ಯರ ಮನೆ ಎದುರೇಯಿರುವ ಗುಂಡಿಯಲ್ಲಿ ಸಾಕಷ್ಟು ಮಂದಿ ಬಿದ್ದೇಳುತ್ತಿದ್ದು ಅವರಿಂದಲೂ ಈ ಗುಂಡಿ ಮುಚ್ಚಿಸಲು ಸಾಧ್ಯವಾಗದಿರುವುದು ಜನಪ್ರತಿನಿಧಿಗಳ ಅಧಿಕಾರ ವ್ಯಾಪ್ತಿಯನ್ನು ಪ್ರಶ್ನಿಸುವಂತಾಗಿದೆ. ರಸ್ತೆ ನಿರ್ಮಾಣದ ಉದ್ದೇಶವೇನೋ ಸರಿ. ಆದರೆ ನಿರ್ಮಾಣ ಸ್ಥಗಿತವಾಗಿ ತಿಂಗಳುಗಳೇ ಉರುಳಿದರೂ ಸಹ ಹಾಳಾದ ರಸ್ತೆಯನ್ನು ಸರಿಪಡಿಸಲು ಇವರು ಮುಂದಾಗುತ್ತಿಲ್ಲ. ಅಲ್ಲದೇ ರಸ್ತೆ ನಿರ್ಮಾಣಕ್ಕೂ ಮುಂಚೆ ಹಾಲಿ ಇರುವ ರಸ್ತೆಯನ್ನು ದುರಸ್ತಿ ಪಡಿಸಿ ಗುಂಡಿಗಳಿಗೆ ಡಾಂಬರ್ ಹಾಕಿ ಓಡಾಡುವ ಮಟ್ಟಕ್ಕೆ ತರಬೇಕಾಗಿದ್ದು ನಿರ್ಲಕ್ಷ್ಯ ದೋರಣೆ ತಾಳಿದ್ದಾರೆ.

      ಇಲ್ಲಿ ನಿತ್ಯ ಬಿದ್ದವರನ್ನು ಎದುರುಗಡೆ ಇರುವ ಆಟೊಮೊಬೈಲ್ ಶಾಪ್, ಟೀ ಅಂಗಡಿಯವರು ಆಸ್ಪತ್ರೆಗೆ ಕಳುಹಿಸುವುದೇ ಕೆಲಸವಾಗಿದೆ. ಈ ಬಗ್ಗೆ ಹೆದ್ದಾರಿ ಇಲಾಖೆಗೆ ದೂರು ನೀಡಿದರೂ ಪ್ರಯೋಜವಾಗಿಲ್ಲ. ಪ್ರತಿಭಟನೆ ಮಾಡಲು ಮುಂದಾದಾಗಲೆಲ್ಲ ಪೊಲೀಸಿನವರು ಜನರನ್ನು ಸುಮ್ಮನೆ ಮಾಡುತ್ತಿದ್ದಾರೆಯೇ ಹೊರತು ಸಂಬಂಧ ಪಟ್ಟವರನ್ನು ಕರೆಸಲು ಮುಂದಾಗುತ್ತಿಲ್ಲ. ಪ್ರಶ್ನಿಸಿದವರನ್ನೇ ಮಣ್ಣು ತುಂಬಲು ಹೇಳುವ ಪೋಲಿಸರು ಗುಂಡಿ ಬಿದ್ದ ಜಾಗದಲ್ಲಿ ಬ್ಯಾರಿಕೇಡ್ ಇಡಲು ಸಹ ಮುಂದಾಗುತ್ತಿಲ್ಲ.

      ರಸ್ತೆಯಲ್ಲಿ ಬಡಾವಣೆಯ ಚರಂಡಿ ನೀರು ಹರಿಯುತ್ತಿದ್ದರೂ ಸಹ ಈ ಬಗ್ಗೆ ಪಟ್ಟಣ ಪಂಚಾಯಿತಿಯವರು ಮೌನ ವಹಿಸಿದ್ದಾರೆ. ಚರಂಡಿ ನೀರು ಸದಾ ಹರಿಯುವುದರಿಂದ ರಸ್ತೆ ಹಾಳಾಗುತ್ತಿದ್ದು ವಾಹನ ಸವಾರರಂತೂ ಸರ್ಕಸ್ ಮಾಡುತ್ತಾ ಸಾಗಬೇಕಾಗಿದೆ. ಅಪಘಾತವಾದಗಲೆಲ್ಲಾ ಅಲ್ಲಿನ ನಿವಾಸಿಗಳೇ ಕಲ್ಲುಗಳನ್ನು ಇಟ್ಟು ಎಚ್ಚರಿಕೆ ಸಂದೇಶ ನೀಡುವಂತಾಗಿದೆ. ಒಟ್ಟಾರೆ ಇಲ್ಲಿ ನಿತ್ಯ ಸಣ್ಣಪುಟ್ಟ ಅಪಘಾತಗಳು ಸಂಭವಿಸುವುದು ಮಾಮೂಲಿಯಾಗಿದೆ.

      ರಸ್ತೆ ಆರಂಭಕ್ಕೂ ಮುನ್ನ ರಸ್ತೆಯ ಕುಳಿತ ಧೂಳು ಕುಡಿಯುತ್ತಿದ್ದ ಜನ ಇದೀಗ ಚರಂಡಿ ವಾಸನೆಯನ್ನು ಸಹಿಸಬೇಕಾದ ಪರಿಸ್ಥಿತಿ ಇದೆ. ಈಗಲಾದರೂ ಹೆದ್ದಾರಿ ಪ್ರಾಧಿಕಾರದವರು, ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು ಗುತ್ತಿಗೆದಾರರಿಗೆ ಹೇಳಿ ಬಾಯ್ಬಿಟ್ಟಿರುವ ಗುಂಡಿಯನ್ನು ಮುಚ್ಚಿಸಿ ರಸ್ತೆ ಸುಸ್ಥಿಯಲ್ಲಿಟ್ಟಲ್ಲಿ ಪ್ರಯಾಣಿಕರು ಸುಗಮವಾಗಿ ಸಂಚರಿಸಲು ಅನುಕೂಲವಾಗುತ್ತದೆ.

 
      ಹೊಸದಾಗಿ ಹೆದ್ದಾರಿ ನಿರ್ಮಾಣ ಮಾಡುತ್ತಿರುವ ನೆಪದಲ್ಲಿ ಇಲ್ಲಿನ ರಸ್ತೆಗಳನ್ನು ನಿರ್ಲಕ್ಷಿಸಿ ಹಾಳುಗೆಡವಿದ್ದು ಯಮಕಂಟಕವಾಗಿರುವ ಈ ರಸ್ತೆ ಗಳನ್ನು ದುರಸ್ತಿ ಮಾಡಲು ಯಾರೂ ಗುತ್ತಿಗೆದಾರರು ಮುಂದಾಗುತ್ತಿಲ್ಲ ಇದೇ ರಸ್ತೆಯಲ್ಲಿಯೇ ಶಾಸಕರು ಹುಳಿಯಾರಿಗೆ ಬಂದು ಹೋಗುತ್ತಿದ್ದರು ಕಣ್ಣು ಮುಚ್ಚಿಕೊಂಡು ಇಲ್ಲಿಂದ ಹಾದು ಹೋಗುತ್ತಾರೆಯೇ ಹೊರತು ಈ ಬಗ್ಗೆ ಸಂಬಂಧಪಟ್ಟವರಿಗೆ ಯಾವುದೇ ಸೂಚನೆಯನ್ನು ನೀಡುತ್ತಿಲ್ಲ.ಮತ ಕೇಳುವ ಇವರು ಮತದಾರರಿಗೆ ಸೌಕರ್ಯ ಕೊಡುವ ಬಗ್ಗೆ ಅಸ್ಥೆವಹಿಸದಿರುವುದು ದುರಂತ

-ಜಾಕೀರ್,ಟೀ ಅಂಗಡಿ ಮಾಲಿಕ

      ರಸ್ತೆಯ ಬಗ್ಗೆ ಸಮಸ್ಯೆಯಾದಾಗಲೆಲ್ಲಾ ಹೆದ್ದಾರಿ ಇಲಾಖೆಯವರಿಗೆ ತಿಳಿಸುತ್ತಾ ಬಂದಿದ್ದೇನೆ.ಈಗಲೂ ಸಹ ಅವರಿಗೇ ಗುಂಡಿಗಳನ್ನು ಮುಚ್ಚಿ ದುರಸ್ತಿ ಮಾಡುವಂತೆ ಹೇಳಿದರೂ ಸಹ ಗಮನಹರಿಸುತ್ತಿಲ್ಲ.ಹೆದ್ದಾರಿ ಪ್ರಾಧಿಕಾರದವರು ಜನಪ್ರತಿನಿಧಿಗಳಿಗೇ ಬೆಲೆ ಕೊಡದಿದ್ದರೆ ಹೇಗೆ

-ವೈಸಿ ಸಿದ್ದರಾಮಯ್ಯ,ಜಿಲ್ಲಾ ಪಂಚಾಯಿತಿ ಸದಸ್ಯ

      ಗುಂಡಿ ಗೊಟರುಗಳಿಂದ ತುಂಬಿರುವ ಹೆದ್ದಾರಿಯ ದುರಸ್ತಿ ಮಾಡಬೇಕಾದ ಗುತ್ತಿಗೆದಾರರು ಇದಕ್ಕೂ ತಮಗೆ ಸಂಬಂಧವೇ ಇಲ್ಲವೆನ್ನುವಂತೆ ವರ್ತಿಸುತ್ತಿದ್ದು, ಅಪಘಾತದಲ್ಲಿ ಪ್ರಾಣಾಪಾಯವಾದರೆ ಯಾರು ಹೊಣೆ

 ಇಲಾಹಿ,ಲಾರಿ ಮಾಲೀಕರು.

      ರಸ್ತೆಯ ಗುಂಡಿಗಳಿಂದಾಗಿ ವಾಹನ ಚಾಲಕರು ಅಪಘಾತಕ್ಕೆ ತುತ್ತಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದೆ. ಶಾಸಕರು ಈಗಲಾದರೂ ಈ ಬಗ್ಗೆ ಗಮನ ಹರಿಸಿ ಹದಗೆಟ್ಟಿರುವ ರಸ್ತೆಯ ಗುಂಡಿಯನ್ನು ಕೂಡಲೇ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಬೇಕು ಹಾಗೂ ನಿಂತು ಹೋಗಿರುವ ಹೆದ್ದಾರಿ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸುವಂತೆ ಸೂಚಿಸಬೇಕು

ಭಟ್ಟರಹಳ್ಳಿ ಮಲ್ಲಿಕಾರ್ಜುನ್,

ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ರಾಜ್ಯಕಾರ್ಯದರ್ಶಿ

(Visited 64 times, 1 visits today)
FacebookTwitterInstagramFacebook MessengerEmailSMSTelegramWhatsapp