ಕೊರಟಗೆರೆ:
ಜನರಿಂದಲೇ ಜನಪ್ರತಿನಿಧಿ ಮತ್ತು ಸರಕಾರ ರಚನೆ ಆಗೋದು.. ಸರಕಾರದಿಂದ ರೈತರ ಆಯ್ಕೆ ಎಂದಿಗೂ ಆಗೋದಿಲ್ಲ.. ರೈತರ ಜೊತೆ ಚರ್ಚಿಸಿ ಅವರ ಅನುಮತಿ ಪಡೆಯದೇ ಭೂಮಿ ವಶಕ್ಕೆ ಪಡೆಯುವುದು ಸೂಕ್ತವಲ್ಲ.. ರೈತರು ಹೆದರಬೇಡಿ ನಿಮ್ಮ ಜೊತೆ ಶ್ರೀಮಠ ಮತ್ತು ನಾನು ಎಂದಿಗೂ ಇರುತ್ತೇನೆ ಎಂದು ಸೂಕ್ತವಲ್ಲ ಎಂದು ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಂಜಾವಧೂತ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಕೋಳಾಲ ಹೋಬಳಿ ವ್ಯಾಪ್ತಿಯ ಸುಂಕದಹಳ್ಳಿ ಗ್ರಾಮದಲ್ಲಿ ಎತ್ತಿನಹೊಳೆ ಯೋಜನೆಯ ಬಫರ್ ಡ್ಯಾಂ ನಿರ್ಮಾಣದಿಂದ ಮನೆ ಮತ್ತು ಜಮೀನು ಕಳೆದುಕೊಳ್ಳುವ ರೈತರ ಮನವಿ ಆಲಿಸಿದ ನಂತರ ಬುಧವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.
ದೇವರಾಯನದುರ್ಗ ಬೇಟ್ಟದಲ್ಲಿ ಎತ್ತಿನಹೊಳೆ ಯೋಜನೆಯ ಬಫರ್ ಡ್ಯಾಂ ನಿರ್ಮಿಸಲು ಸರಕಾರ ಸೂಕ್ತ ನಿರ್ಧಾರ ಕೈಗೊಂಡು ಕೇಂದ್ರ ಸರಕಾರದ ಮನವೊಲಿಸುವ ಪ್ರಯತ್ನ ಮಾಡಬೇಕು. ದೇವರಾಯನದುರ್ಗದಿಂದ ಕೋಳಾಲ ವ್ಯಾಪ್ತಿಯ ಬೈರಗೊಂಡ್ಲು ಗ್ರಾಮಕ್ಕೆ ಬಫರ್ ಡ್ಯಾಂ ವರ್ಗಾವಣೆಯ ಹಿಂದಿನ ಮರ್ಮವೇನು ಎಂಬುದನ್ನು ತಿಳಿಸಬೇಕಾಗಿದೆ. ಕೋಳಾಲ ವ್ಯಾಪ್ತಿಯ 22ಗ್ರಾಮಗಳ ಸಾವಿರಾರು ರೈತರ ಮೇಲೆ ಜನಪ್ರತಿ ಮತ್ತು ಅಧಿಕಾರಿಗಳ ದಬ್ಬಾಳಿಕೆಯನ್ನು ನಾನು ಸಹಿಸುವುದಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಕೋಳಾಲ ವ್ಯಾಪ್ತಿಯ ರೈತರು ಮತ್ತು ಜೀವ ಸಂಕುಲವನ್ನು ಒಕ್ಕಲೇಬ್ಬಿಸುವ ಕೆಲಸವನ್ನು ಸರಕಾರದ ಜನಪ್ರತಿನಿಧಿ ಮತ್ತು ಅಧಿಕಾರಿ ವರ್ಗ ತಕ್ಷಣ ಕೈಬೀಡಬೇಕು. ರೈತರ ಭಾವನೆಗಳಿಗೆ ವಿರೋಧವಾಗಿ ಯಾರು ಸಹ ಅಧಿಕಾರ ಚಲಾವಣೆ ಮಾಡುವುದು ಸೂಕ್ತವಲ್ಲ. ರೈತರು ಹೆದರುವ ಅಗತ್ಯವಿಲ್ಲ. ಕೊರಟಗೆರೆ ಶಾಸಕ ಮತ್ತು ರಾಜ್ಯದ ಡಿಸಿಎಂ ರೈತರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದಲ್ಲಿ ನಮ್ಮ ರೈತರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ನಾನು ಜೊತೆ ಆಗಿ ಇರುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಕೋಳಾಲ ಜಿಪಂ ಸದಸ್ಯ ಶಿವರಾಮಯ್ಯ ಮಾತನಾಡಿ ಎತ್ತಿನಹೊಳೆ ಯೋಜನೆಗೆ ನಮ್ಮ ವಿರೋಧವಿಲ್ಲ. ನಮ್ಮ ರೈತರ ಅನುಮತಿ ಇಲ್ಲದೇ ಬಲವಂತದಿಂದ ಅಧಿಕಾರಿ ವರ್ಗ ದಬ್ಬಾಳಿಕೆ ಮಾಡಿ ಕೃಷಿ ಭೂಮಿ ಕಸಿದುಕೊಳ್ಳುತ್ತಿದ್ದಾರೆ. ಕೋಳಾಲ ವ್ಯಾಪ್ತಿಯ 10ಕೀಮೀ ದೂರದ ಅರಣ್ಯ ಪ್ರದೇಶದಲ್ಲಿ ಬಫರ್ ಡ್ಯಾಂ ನಿರ್ಮಿಸಲು ಅವಕಾಶವಿದೆ. ಸರಕಾರ ಮತ್ತು ಅಧಿಕಾರಿ ವರ್ಗ ಕೂಡಲೇ ಸ್ಥಳ ಪರಿಶೀಲನೆ ನಡೆಸಬೇಕು. ಕೋಳಾಲದ ರೈತರನ್ನು ಉಳಿಸಿ ನೀರಾವರಿ ಯೋಜನೆ ರೂಪಿಸಿ ರೈತರ ಆಸ್ತಿ ಮತ್ತು ಮನೆಯನ್ನು ಉಳಿಸಿ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಚಿನ್ನಹಳ್ಳಿ ಗ್ರಾಪಂ ಅಧ್ಯಕ್ಷ ವಾಸುದೇವ್ ಮಾತನಾಡಿ ಎತ್ತಿನಹೊಳೆ ಯೋಜನೆ ಪ್ರಾರಂಭದ ದಿನದಿಂದ ಕೋಳಾಲ ಮತ್ತು ಚಿನ್ನಹಳ್ಳಿ ಗ್ರಾಪಂ ವ್ಯಾಪ್ತಿಯ 30ಕ್ಕೂ ಹೆಚ್ಚು ಗ್ರಾಮದ ಸಾವಿರಾರು ರೈತರ ನೆಮ್ಮದಿ ಹಾಳಾಗಿದೆ. ಕಳೆದ ಆರು ತಿಂಗಳಿಂದ 25ಕ್ಕೂ ಹೆಚ್ಚು ರೈತರು ಯೋಚನೆಯಿಂದಲೇ ತಮ್ಮ ಪ್ರಾಣವನ್ನು ಬಿಟ್ಟಿದ್ದಾರೆ. ನಮ್ಮ ಗ್ರಾಮ, ನಮ್ಮ ಜನರನ್ನು ಬಿಟ್ಟು ನಾವು ಎಲ್ಲಿಗೂ ಸಹ ಹೋಗುವ ಪ್ರಶ್ನೆಯೇ ಇಲ್ಲ. ನಮ್ಮ ಒಂದು ಅಡಿ ಭೂಮಿಯು ಕೊಡಲ್ಲ ಸರಕಾರದ ಒಂದು ಪೈಸೆ ಅನುಧಾನವು ನಮಗೆ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.
      ಸುದ್ದಿಗೋಷ್ಟಿಯಲ್ಲಿ ತಾಪಂ ಸದಸ್ಯ ಬೋರಣ್ಣ, ಮಾಜಿ ತಾಪಂ ಅಧ್ಯಕ್ಷ ಹನುಮಂತರಾಯಪ್ಪ, ಎಪಿಎಂಸಿ ಅಧ್ಯಕ್ಷ ವೆಂಕಟೇಶಮೂರ್ತಿ, ಕೋಳಾಲ ಗ್ರಾಪಂ ಸದಸ್ಯರಾದ ಶ್ರೀನಿವಾಸ್, ಕುಮಾರ್, ಸರೋಜಮ್ಮ, ರೈತ ಮುಖಂಡರಾದ ಹನುಮಂತರಾಯಪ್ಪ, ಬಾಬು, ರಂಗಪ್ಪ, ದೇವರಾಜು, ಶಿವಣ್ಣ, ಜಗನ್ನಾಥ್, ಬಸವರಾಜು, ಮಂಜುನಾಥ್, ಪ್ರಕಾಶ್, ಅಶ್ವತ್ಥಯ್ಯ, ಈಶ್ವರಯ್ಯ ಸೇರಿದಂತೆ ಇತರರು ಇದ್ದರು.
 
 


