ತಿಪಟೂರು :

      ಹೇಮಾವತಿ ನಾಲಾ ಅಚ್ಚುಕಟ್ಟು ಪ್ರದೇಶಕ್ಕೆ ಫೆಬ್ರವರಿ ಮೊದಲ ವಾರದಲ್ಲಿ ನೀರು ಬಿಡಲಾಗುವುದು, ಆದರೆ ಕೆರೆಗೆ ಮತ್ತು ಕಾಲುವೆಗೆ ಅಕ್ರಮವಾಗಿ ಪಂಪ್‍ಸೆಟ್ ಹಾಕಿ ನೀರು ಹೊಡೆದರೆ ಸಕ್ಷೆನ್ 36ರ ಅಡಿ ಸೂಕ್ತ ಕ್ರಮ ಜರುಗಿಸಲಾಗುವುದೆಂದು ಉಪವಿಭಾಗಾಧಿಕಾರಿ ಕೆ.ಆರ್.ನಂದಿನಿ ತಿಳಿಸಿದರು.

      ತಾಲ್ಲೂಕು ಕಛೇರಿಯಲ್ಲಿ ಕರೆದಿದ್ದ ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಮಾವತಿ ಎಂಜಿನಿಯರ್ಗಳ ಪ್ರಕಾರ ಅಚ್ಚುಕಟ್ಟು ಪ್ರದೇಶಕ್ಕೆ ನೀಡಬಹುದಾದ ನೀರಿನ ಪ್ರಮಾಣ ಸಾಸಲಹಳ್ಳಿ ಕೆರೆ 5.88 ಎಂ.ಟಿಎಫ್, ನೊಣವಿನಕೆರೆ 103.60, ಬಜಗೂರು 17.04 ಎಂ.ಟಿಎಫ್, ವಿಘ್ನಸಂತೆ 18.73 ಎಂ.ಟಿಎಫ್, ಮತ್ತು ಆಲ್ಬೂರು ಎಂ.ಟಿಎಫ್ ಕೆರೆಗಳಲ್ಲಿ ನೀರು ಬಳಸಬಹುದು. ಮತ್ತು ತುರುವೇಕೆರೆ ವಿಭಾಗದಲ್ಲಿ ಮಲ್ಲಾಘಟ್ಟ 212-72 ಎಂ.ಟಿಎಫ್, ತುರುವೇಕೆರೆ 67.19 ಎಂ.ಟಿಎಫ್, ಸಾರಿಗೇಹಳ್ಳಿ 59.81 ಎಂ.ಟಿಎಫ್, ಗೋಣಿ ತುಮಕೂರು 1.08 ಎಂ.ಟಿಎಫ್, ಕೊಂಡಜ್ಜಿ 9.98 ಎಂ.ಟಿಎಫ್, ಗಂಗನಘಟ್ಟ 2.45 ಎಂ.ಟಿಎಫ್, ಅಮ್ಮಸಂದ್ರ 6.90 ಎಂ.ಟಿಎಫ್, ಸಂಪಿಗೆ 21.79 ಎಂ.ಟಿಎಫ್, ವೀರಸಾಗರ 14.33 ಎಂ.ಟಿಎಫ್, ಸಂಪಿಗೆ ಹೊಸಹಳ್ಳಿ 13.99 ಎಂ.ಟಿಎಫ್ ನೀರಿನಲ್ಲಿ ರೈತರಿಗೆ ಅನುಕೂಲವಾಗುವಂತೆ 100 ದಿನಗಳಲ್ಲಿ ನೀರು ಕೊಡಲಾಗುವೆಂದು ತಿಳಿಸಿದರು.

      ಈ ನೀರಿನಲ್ಲಿ ರೈತರು ಅರೆ ನೀರಾವರಿ ಬೆಳೆಗಳನ್ನು ಬೆಳೆಯಬೇಕು ಹಾಗೂ ಕೂರಿಗೆ ಆದಾರಿತವಾಗಿ ಭತ್ತವನ್ನು ಬೆಳೆಯಬೇಕೆಂದು ತಿಳಿಸಿದಾಗ ನೋಣವಿನಕೆರೆ-ಆಲ್ಬೂರು ಅಚ್ಚುಕಟ್ಟು ಪ್ರದೇಶದ ಅಧ್ಯಕ್ಷ ಸ್ವಾಮಿ ಮಾತನಾಡಿ ನೀವು ಹೇಳಿದ ಹಾಗೆ ಕೂರಿಗೆ ಪದ್ದತಿಯಲ್ಲಿ ಮಾಡಲು ಹೋದರೆ ಉಪಕಾಲುವೆಗಳಲ್ಲಿ ನೀರೇ ಬರುವುದಿಲ್ಲ ಇನ್ನು ಈ ನೀರು ಕೊನೆಯ ಪ್ರದೇಶಕ್ಕೆ ನೀರು ತಲುಪುವುದಿಲ್ಲ ಆದ್ದರಿಂದ ಮೊದಲು ಕಾಲುವೆಗಳನ್ನು ಸರಿಪಡಿಸಿ ಆ ಮೇಲೆ ಈ ಯೋಜನೆಯನ್ನು ಜಾರಿಗೆ ತನ್ನಿ ಎಂದು ಹೇಮಾವತಿ ಎಂಜಿನಿಯರ್ಗಳನ್ನು ತರಾಟೆಗೆ ತೆಗೆದುಕೊಂಡರು.

      ಇದೇ ಸಂದರ್ಭದಲ್ಲಿ ತೋಟಗಾರಿಕೆ ಸಹಾಯಕ ನಿರ್ದೇಶಕ ನಂದೀಶ್ ಹನಿನೀರಾವರಿ ಮಾಡಿರುವ ತೆಂಗಿನ ಮರದ ಬುಡದಲ್ಲಿ ಹುರುಳಿ, ಅಲಸಂದೆ ಬೆಳೆಯುವುದರಿಂದ ತೆಂಗಿನ ಮರದ ಬುಡವು ತೇವಾಂಶದಿಂದ ಕೂಡಿದ್ದು ನೀರಿನ ಉಳಿತಾಯವಾಗುತ್ತದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಯಾಗಿ ಮಾಜಿ ಜಿ.ಪಂ ಸದಸ್ಯ ಉಗ್ರಪ್ಪ ನೀವು ಸಭೆಯಲ್ಲಿ ಹೇಳುವುದಲ್ಲ ರೈತರಿರುವಲ್ಲಿಗೆ ಬಂದು ತಿಳಿಸಿದರೆ ರೈತರಿಗೂ ಅನುಕೂಲವಾಗುತ್ತದೆ ಅದನ್ನು ಬಿಟ್ಟು ಸಭೆಯಲ್ಲಿ ತಿಳಿಸಲು ಬಂದಿದ್ದೀರಾ ರೈತರಿರುವಲ್ಲಿಗೆ ತೆರಳಿ ಮಾಹಿತಿನೀಡಿ ಎಂದು ಆಗ್ರಹಿಸಿದರು.ಸಭೆಯಲ್ಲಿ ರೈತರಾದ ಎ.ಸಿ.ನಂಜುಂಡಪ್ಪ, ವೇದಾನಂದ ಮತ್ತಿತರರು ಹಾಜರಿದ್ದರು.

(Visited 39 times, 1 visits today)
FacebookTwitterInstagramFacebook MessengerEmailSMSTelegramWhatsapp
FacebookTwitterInstagramFacebook MessengerEmailSMSTelegramWhatsapp