ತುಮಕೂರು:

      ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಬಿಜೆಪಿ ಮುಖಂಡನ ದುಬಾರಿ ಬೆಲೆಯ ಡೆವಿಡ್‍ಸನ್ ಬೈಕ್ ಮೇಲೆ ಕುಳಿತು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಬಗ್ಗೆ ಮುಕ್ತ ಅಭಿಪ್ರಾಯ ವ್ಯಕ್ತಪಡಿಸಿದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿರುವುದನ್ನು ಕೈಬಿಡಬೇಕು ಎಂದು ಪ್ರಗತಿಪರ ಚಿಂತಕ ಸಿ.ಯತಿರಾಜ್ ಒತ್ತಾಯಿಸಿದರು.

      ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ವಕೀಲ ಪ್ರಶಾಂತ್ ಭೂಷಣ್ ಮೇಲಿನ ನ್ಯಾಯಾಂಗ ನಿಂದನೆ ವಾಪಸ್ ಪಡೆಯಿರಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಿರಿ ಎಂಬ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಡಿದರು.

      ದೇಶದಲ್ಲಿ ಕೋವಿಡ್ ನೆಪಮಾಡಿಕೊಂಡು ಜನಪರ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಕೃಷಿ, ರೈತರು, ಕಾರ್ಮಿಕರನ್ನು ದಿವಾಳಿ ಮಾಡುವಂತಹ ಕೆಲಸ ನಡೆಯುತ್ತಿದೆ. ಇಂತಹ ಸಾಂಕ್ರಾಮಿಕ ರೋಗ ನ್ಯಾಯಾಂಗಕ್ಕೂ ಹಬ್ಬುತ್ತಿದೆ. ಪ್ರಶಾಂತ್ ಭೂಷಣ್ ಅವರ ಅಭಿಪ್ರಾಯವನ್ನು ತಪ್ಪು ವ್ಯಾಖ್ಯಾನ ಮಾಡಿ ನ್ಯಾಯಾಂಗ ನಿಂದನೆಗೆ ಗುರಿಪಡಿಸುವುದು ಸರಿಯಲ್ಲ. ಪ್ರಜಾಸತ್ತಾತ್ಮಕ ಟೀಕೆಗಳನ್ನು ಸಹಿಸಿಕೊಳ್ಳಬೇಕು ಎಂದು ಹೇಳಿದರು.

       ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ ಸುಪ್ರೀಂಕೋರ್ಟ್ ಪೂರ್ವಗ್ರಹಪೀಡಿತವಾಗಿ ಪ್ರಶಾಂತ್ ಭೂಷಣ್ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿರುವುದು ಸರಿಯಾದ ಕ್ರಮವಲ್ಲ. ಇದು ಖಂಡನೀಯ ಎಂದು ತಿಳಿಸಿದರು.

     ಜನಸಂಗ್ರಾಮ ಪರಿಷತ್ ಮುಖಂಡ ಪಂಡಿತ್ ಜವಾಹರ್ ಮಾತನಾಡಿ, ಸಮಸ್ಯೆಗಳ ಕುರಿತು ಮನವಿಗಳನ್ನು ಸಲ್ಲಿಸಿದರೆ ಸುಪ್ರೀಂಕೋರ್ಟ್ ತಿರಸ್ಕರಿಸುತ್ತದೆ. ಸಮಸ್ಯೆ ಏನೆಂದೂ ಕೇಳುವ ಗೋಜಿಗೆ ಹೋಗುತ್ತಿಲ್ಲ. ಹಾಗೆಯೇ ಈಗಿನ ಸರ್ಕಾರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನ ಮಾಡುತ್ತಿಷೆ. ನ್ಯಾಯಾಂಗವೂ ಅದೇ ಹಾದಿಯಲ್ಲಿ ನಡೆಯುತ್ತಿರುವುದು ಕಳವಳಕಾರಿ ಸಂಗತಿ ಎಂದರು.

      ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ ಕೊಲೆಗಡುಕರು, ಬಂಡವಾಳಗಾರರು ನ್ಯಾಯಾಂಗ ನಿಂದನೆ ಮಾಡುತ್ತಲೇ ಇದ್ದಾರೆ. ಇಂತಹ ಪ್ರಕರಣಗಳಲ್ಲಿ ಗೌರವಾನ್ವಿತ ನ್ಯಾಯಾಲಯ ಕರ್ತವ್ಯವನ್ನು ಮರೆತಿದೆ. ಗುತ್ತಿಗೆ ಕಾರ್ಮಿಕರಿಗೆ ಸಮಾನ ವೇತನ ನೀಡಬೇಕೆಂದು ತೀರ್ಪು ನೀಡಿದೆ. ಪಾಲನೆಯಾಗುತ್ತಿಲ್ಲ. ಸುಪ್ರೀಂಕೋರ್ಟ್ ತೀರ್ಪುಗಳ ವಿರುದ್ಧವಾಗಿ ನಡೆದುಕೊಳ್ಳುವ ಬಂಡವಾಳಗಾರರು ಮತ್ತು ಆಡಳಿತಗಾರರ ಪರವಾಗಿ ನ್ಯಾಯಾಂಗ ಕೆಲಸ ಮಾಡುವುದು ಸರಿಯಲ್ಲ ಎಂದು ಹೇಳಿದರು.

       ಪಿಕೆಎಸ್ ಜಿಲ್ಲಾ ಸಂಚಾಲಕ ಎಸ್.ಎನ್.ಸ್ವಾಮಿ ಮಾತನಾಡಿ ದೇಶದಲ್ಲಿ ಗಂಭೀರ ಪರಿಸ್ಥಿತಿ ಇದೆ. ಆಡಳಿತ ವರ್ಗ ಮತ್ತು ಬಂಡವಾಳಶಾಹಿ ವ್ಯವಸ್ಥೆ ಬಡವರನ್ನು ಶೋಷಿಸುತ್ತಿದೆ. ನಾವು ಇಂತಹ ವ್ಯವಸ್ಥೆ ವಿರುದ್ದ ಹೋರಾಟ ನಡೆಸಬೇಕು ಎಂದರು.ಎಐಟಿಯುಸಿ ಪ್ರಧಾನಕಾರ್ಯದರ್ಶಿ ಗಿರೀಶ್, ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಎ.ನರಸಿಂಹಮೂರ್ತಿ, ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ಎಐಯುಟಿಯುಸಿ ಮಂಜುಳ, ನಾವು ಭಾರತೀಯರು ಸಂಘಟನೆಯ ತಾಜುದ್ದೀನ್ ಷರೀಫ್ ಮಾತನಾಡಿ ಪ್ರಶಾಂತ್ ಭೂಷಣ್ ಮೇಲಿನ ನ್ಯಾಯಾಂಗ ನಿಂದನೆ ಪ್ರಕರಣವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

       ಸಮುದಾಯದ ಜಿಲ್ಲಾ ಕಾರ್ಯದರ್ಶಿ ಕೆ.ಈ.ಸಿದ್ದಯ್ಯ ಮಾತನಾಡಿ ಸರ್ಕಾರಿ ನೌಕರು, ನ್ಯಾಯಾಧೀಶರು, ಪೊಲೀಸರಿಗೆ ನೀತಿ ಸಂಹಿತೆ ಇರುತ್ತದೆ. ಅದರಂತೆ ನ್ಯಾಯಾಧೀಶರು ರಾಜಕೀಯ, ಸಾಮಾಜಿಕ ಮತ್ತು ಹಣಕಾಸು ಮತ್ತು ಸಂಬಂಧಿರ ಜೊತೆ ಹೆಚ್ಚು ಬೆರೆಯುವ ಹಾಗಿಲ್ಲ. ಅದರಂತೆ ಮುಖ್ಯನ್ಯಾಯಮೂರ್ತಿಗಳು ಬಿಜೆಪಿ ಮುಖಂಡನ ಮಾಲಿಕತ್ವದ ಬೈಕ್ ಮೇಲೆ ಕುಳಿತಿರುವುದು ನ್ಯಾಯದಾನ ಮಾಡುವ ಸಂದರ್ಭದಲ್ಲಿ ಪಕ್ಷಪಾತಕ್ಕೆ ಅವಕಾಶವಾಗುತ್ತದೆ. ನೀತಿ ಸಂಹಿತೆಯನ್ನು ಉಲ್ಲಂಘಿಸಿದಂತಾಗಿದೆ ಎಂದರು.

       ಪ್ರಾಂತ ರೈತ ಸಂಘದ ಸಂಚಾಲಕ ಬಿ.ಉಮೇಶ್ ಮಾತನಾಡಿ ಸುಪ್ರೀಂಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ವೈಯಕ್ತಿಕ ಹಿತಕ್ಕಾಗಿ ಹೋರಾಡುತ್ತಿಲ್ಲ. ಹಣ ಮಾಡಲು ಅಲ್ಲ.; ಆದರೂ ನ್ಯಾಯಾಂಗ ನಿಂದನೆಯಲ್ಲಿ ಸಿಲುಕಿಸಿರುವುದು ಸರಿಯಲ್ಲ. ಈ ಪ್ರಕರಣದಲ್ಲಿ ಪ್ರಧಾನಿ ಮಧ್ಯಪ್ರವೇಶ ಮಾಡಬೇಕಿತ್ತು. ಆದರೆ ಮಾಡಿಲ್ಲ ಎಂದು ಟೀಕಿಸಿದರು.

      ಸಭೆಯಲ್ಲಿ ಪ್ರಾಂತ ರೈತ ಸಂಘದ ಸಂಚಾಲಕ ಸಿಅಜ್ಜಪ್ಪ, ಎಐಎಂಎಸ್‍ಎಸ್ ಜಿಲ್ಲಾಧ್ಯಕ್ಷೆ ಕಲ್ಯಾಣಿ, ಎಐಡಿಎಸ್‍ಓ ಅಶ್ವಿನಿ, ಆವಿಷ್ಕಾರದ ಮುತ್ತುರಾಜು, ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಅರುಣ್ ಇದ್ದರು.

(Visited 13 times, 1 visits today)
FacebookTwitterInstagramFacebook MessengerEmailSMSTelegramWhatsapp