ತುಮಕೂರು :

     ಎಟಿಎಂ ಕೇಂದ್ರವೊಂದಕ್ಕೆ ನುಗ್ಗಿರುವ ಕಳ್ಳರು ಹಣದ ಸಮೇತ ಎಟಿಎಂ ಯಂತ್ರವನ್ನು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದಿನ ಹೆಗ್ಗೆರೆಯಲ್ಲಿ ನಡೆದಿದೆ.

      ನಗರದ ಹೊರವಲಯದ ಹೆಗ್ಗೆರೆಯಲ್ಲಿರುವ ಇಂಡಿಯನ್ ಓವರ್‍ಸಿಸ್ ಬ್ಯಾಂಕ್‍ನ ಎಟಿಎಂ ಕೇಂದ್ರದಲ್ಲಿ ಈ ಕಳ್ಳತನ ನಡೆದಿದೆ.
ಮಧ್ಯರಾತ್ರಿ ನಾಲ್ಕು ಚಕ್ರದ ವಾಹನದ ಬಂದಿರುವ ಕಳ್ಳರು ಎಟಿಎಂ ಕೇಂದ್ರಕ್ಕೆ ನುಗ್ಗಿ ಚಾಣಾಕ್ಷತನದಿಂದ ಹಣದ ಸಮೇತವೇ ಎಟಿಎಂ ಯಂತ್ರವನ್ನು ಕದ್ದೊಯ್ದಿದ್ದಾರೆ.

      ಈ ಬ್ಯಾಂಕ್ ಬಳಿಯೇ ಎಟಿಎಂ ಕೇಂದ್ರ ಹಾಗೂ ಜಿಮ್ ಕೇಂದ್ರ ಇದೆ. ಇಂದು ಮುಂಜಾನೆ ಜಿಮ್ ಕೇಂದ್ರಕ್ಕೆ ಬಂದ ಸ್ಥಳೀಯರು ಎಟಿಎಂ ಕೇಂದ್ರದಲ್ಲಿ ಎಟಿಎಂ ಯಂತ್ರ ಕಳುವಾಗಿರುವುದನ್ನು ಗಮನಿಸಿ ಪೊಲೀಸರಿಗೆ ದೂರವಾಣಿ ಕರೆ ಮಾಡಿ ಸುದ್ದಿ ಮುಟ್ಟಿಸಿದ್ದಾರೆ.

      ಘಟನೆಯ ಸುದ್ದಿ ತಿಳಿದ ಕೂಡಲೇ ಗ್ರಾಮಾಂತರ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಲಕ್ಷ್ಮಯ್ಯ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಎಟಿಎಂ ಕೇಂದ್ರದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಮಧ್ಯರಾತ್ರಿ ನಾಲ್ಕು ಚಕ್ರದ ವಾಹನದಲ್ಲಿ ಬಂದಿರುವ ಕಳ್ಳರು ಹಣದ ಸಮೇತ ಎಟಿಎಂ ಯಂತ್ರವನ್ನು ಕದ್ದೊಯ್ದಿದ್ದಿರುವುದು ಸಿಸಿ ಟಿವಿ ದೃಶ್ಯದಲ್ಲಿ ಕಂಡು ಬಂದಿದೆ. ಆದರೆ ಸೆರೆಯಾಗಿರುವ ದೃಶ್ಯಗಳು ಸರಿಯಾಗಿ ಕಾಣುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

     ಎಟಿಎಂ ಕೇಂದ್ರದಲ್ಲಿ ಕಳ್ಳತನವಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಬ್ಯಾಂಕ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಎಟಿಎಂ ಯಂತ್ರದಲ್ಲಿ 83 ಸಾವಿರ ರೂ. ನಗದು ಇತ್ತು ಎಂದು ತಿಳಿಸಿದ್ದಾರೆ.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಪೊಲೀಸರು ಎಟಿಎಂ ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.

ವಿಶೇಷ ತಂಡ ರಚನೆ :

     ನಗರ ಸೇರಿದಂತೆ ಜಿಲ್ಲೆಯಾದ್ಯಂತ ಎಟಿಎಂ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಎಟಿಎಂ ಕಳವು ಮಾಡಿರುವ ಖದೀಮರ ಪತ್ತೆಗಾಗಿ ಡಿವೈಎಸ್ಪಿ ತಿಪ್ಪೇಸ್ವಾಮಿ, ಸಿಪಿಐ ರಾಮಕೃಷ್ಣ ಹಾಗೂ ಪಿಎಸ್‍ಐ ಲಕ್ಷ್ಮಯ್ಯ ನೇತೃತ್ವದಲ್ಲಿ ವಿಶೇಷ ತಂಡವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ ರಚಿಸಿದ್ದಾರೆ.

(Visited 12 times, 1 visits today)