ತುಮಕೂರು : 

      ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಲತಾ ರವಿಕುಮಾರ್‍ರವರ ವಿರುದ್ಧ ಸೋಮವಾರ ನಡೆದ ಅವಿಶ್ವಾಸ ನಿರ್ಣಯ ಸಭೆಯನ್ನು ಕೋರಂ ಕೊರತೆಯಿಂದ ಜನವರಿ 25ಕ್ಕೆ ಮುಂದೂಡಲಾಗಿದೆ.

      ಜಿಲ್ಲಾ ಪಂಚಾಯಿತಿಯಲ್ಲಿ 57 ಸದಸ್ಯರಿದ್ದು, ಕಾಂಗ್ರೇಸ್ 23,ಬಿಜೆಪಿ 19,ಜೆಡಿಎಸ್ 14 ಮತ್ತು ಪಕ್ಷೇತರ ಓರ್ವ ಸದಸ್ಯರಿದ್ದು, ಕೇವಲ ಎರಡು ಜನರು ಮಾತ್ರ ಅವಿಶ್ವಾಸ ನಿರ್ಣಯ ಸಭೆಗೆ ಹಾಜರಾಗಿದ್ದು,ಬಹುಮತಕ್ಕೆ ಅಗತ್ಯವಿದ್ದ 29 ಸದಸ್ಯರು ಸಭೆಗೆ ಹಾಜರಾಗದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಿ, ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.

       ಜನವರಿ 18ರ ಬೆಳಗ್ಗೆ 10 ಗಂಟೆಗೆ ಸಭೆ ನಿಗಧಿಯಾಗಿದ್ದು, ಸಭೆ ಆರಂಭವಾಗಿ ಅರ್ಧಗಂಟೆ ಕಳೆದರೂ ಹೊಯ್ಸಳಕಟ್ಟೆ ಕ್ಷೇತ್ರದ ಸದಸ್ಯ ಮಹಾಲಿಂಗಯ್ಯ ಮತ್ತು ಇನ್ನೋರ್ವ ಸದಸ್ಯರನ್ನು ಹೊರತು ಪಡಿಸಿ, ಉಳಿದ ಸದಸ್ಯರು ಹಾಜರಾಗಿರಲಿಲ್ಲ. ಹಾಗಾಗಿ ಜನವರಿ 25ಕ್ಕೆ ಸಭೆಯನ್ನು ನಿಗಧಿಪಡಿಸಿ, ಸಭೆಯನ್ನು ಮುಂದೂಡಲಾಯಿತು.

       ವಿಶ್ವಾಸ ನಿರ್ಣಯ ಸಭೆಯನ್ನು ಮುಂ ದೂಡಿದ ನಂತರ ಜಿ.ಪಂ.ಅಧ್ಯಕ್ಷ ಶ್ರೀಮತಿ ಲತಾ ರವಿಕುಮಾರ್ ತಮ್ಮ ಕಚೇರಿಯಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಸದಸ್ಯರು ನನ್ನ ಮೇಲೆ ವಿಶ್ವಾಸವಿಟ್ಟು ಇಂದಿನ ಅವಿಶ್ವಾಸ ನಿರ್ಣಯ ಸಭೆಗೆ ಗೈರು ಹಾಜರಾಗುವ ಮೂಲಕ ನನಗೆ ನೈತಿಕ ಬೆಂಬಲ ನೀಡಿದ್ದಾರೆ.ಅದಕ್ಕಾಗಿ ಎಲ್ಲಾ ಸದಸ್ಯರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ.ಪ್ರಾದೇಶಿಕ ಆಯುಕ್ತರು ಕರೆದಿರುವ ಜನವರಿ 25ರ ಸಭೆಯಲ್ಲಿಯೂ ಸದಸ್ಯರು ಇದೇ ರೀತಿ ಒಮ್ಮತದಿಂದ ನನ್ನನ್ನು ಬೆಂಬಲಿಸಬೇಕೆಂದು ಮನವಿ ಮಾಡುತ್ತೇನೆ.ಅವಿಶ್ವಾಸ ನಿರ್ಣಯ ಸಭೆಯ ನೊಟೀಷ್ ಬಂದ ನಂತರ ನಾನೇ ಖುದ್ದಾಗಿ ಎಲ್ಲಾ ಸದಸ್ಯರು ದೂರವಾಣಿ ಕರೆ ಮಾಡಿ,ಮನವಿ ಮಾಡಿದ್ದೇನೆ ಎಂದರು.

      ಕಳೆದ ಶಿರಾ ಉಪಚುನಾವಣೆಯಲ್ಲಿ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು,ತಾಂತ್ರಿಕ ಕಾರಣದಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದಿಲ್ಲ. ಮುಂದಿನ ದಿನಗಳಲ್ಲಿ ಪಡೆಯಲಿದ್ದೇನೆ.ಅವಿಶ್ವಾಸ ನಿರ್ಣಯ ಸಭೆಗೆ ಸದಸ್ಯರು ಗೈರು ಹಾಜರಾಗುವ ಹಿಂದೆ ಕುದುರೆ ವ್ಯಾಪಾರ ನಡೆದಿದೆ ಎಂಬುದು ಶುದ್ದ ಸುಳ್ಳು. ಸದಸ್ಯರಿಗೆ ಕಳೆದ ನಾಲ್ಕುವರೆ ವರ್ಷದಲ್ಲಿ ನಾನು ಮಾಡಿರುವ ಅಭಿವೃದ್ದಿ ಕಾರ್ಯಕ್ರಮಗಳು ಹಾಗೂ ಸದಸ್ಯರೊಂದಿಗಿನ ಭಾಂಧವ್ಯ ಅವರು ನನ್ನ ಪರವಾಗಿ ನಿಲ್ಲುವಂತೆ ಮಾಡಿದೆ ಎಂದು ಶ್ರೀಮತಿ ಲತಾ ರವಿಕುಮಾರ್ ತಿಳಿಸಿದರು.

       ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಮತಿ ಶಾಂತಲ ರಾಜಣ್ಣ ಮಾತನಾಡಿ,ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ವಿರುದ್ದ ಕರೆದಿದ್ದ ಅವಿಶ್ವಾಸ ನಿರ್ಣಯ ಸಭಗೆ ಹಾಜರಾಗದಂತೆ ಪಕ್ಷದವತಿಯಿಂದ ವಿಪ್ ಜಾರಿಯಾಗಿತ್ತು.ಅಲ್ಲದೆ ಮುಂದಿನ ಮೂರು ತಿಂಗಳಿಗೆ ಮತ್ತೊಬ್ಬ ಅಧ್ಯಕ್ಷರ ಆಯ್ಕೆ ಅವಶ್ಯಕವೇ ಎಂಬ ಹಿನ್ನೆಲೆಯಲ್ಲಿ ಇಂದಿನ ಸಭೆಗೆ ಹಾಜರಾಗಿಲ್ಲ.ಜನವರಿ 25 ರಂದು ನಡೆಯುವ ಸಭೆಯಲ್ಲಿಯೂ ಇದೇ ರೀತಿಯ ಪ್ರಕ್ರಿಯೆ ಮುಂದೂವರೆಯುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದರು.

(Visited 9 times, 1 visits today)