ಸಿರಾ:

      ಕಾಂಗ್ರೆಸ್-ಜೆಡಿಎಸ್ ಭದ್ರಕೋಟೆಯನ್ನು ನುಚ್ಚುನೂರು ಮಾಡಿ ಸಿರಾದಲ್ಲಿ ಬಿಜೆಪಿ ಗೆಲುವು ಸಾಧಿಸುವುದು ನಿಶ್ಚಿತ. ಬಿಜೆಪಿ ಗೆಲ್ಲುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಘಂಟಾಘೋಷವಾಗಿ ಹೇಳಿದರು.ಸಿರಾ ತಾಲ್ಲೂಕಿನ ಮದಲೂರಿನಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮದಲೂರು ಕೆರೆಗೆ ಕೆನಾಲ್ ನಿರ್ಮಾಣಕ್ಕೆ ಅನುದಾನ ನೀಡಿದ್ದೇ ನಾನು. ಇನ್ನು 6 ತಿಂಗಳೊಳಗೆ ಕೆರೆ ತುಂಬಿಸಿ, ನಾನೇ ಉದ್ಘಾಟಿಸುತ್ತೇನೆ. ಇದುವರೆಗೂ ಯಡಿಯೂರಪ್ಪ ನೀಡಿದ್ದ ಭರವಸೆಗಳ್ಯಾವೂ ಹುಸಿಯಾಗಿಲ್ಲ ಎಂದರು.

      ಸಿರಾದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ವಿಶ್ವಾಸವಿದೆ. ಹೇಮಾವತಿಯಿಂದ ಮದಲೂರು ಕೆರೆಗೆ ನೀರು, ಬಗರ್ ಹುಕುಂ ಸಾಗುವಳಿ ಚೀಟಿ ವಿತರಣೆ, ಕುಂಚಿಟಿಗ ಸಮಾಜವನ್ನು 2ಎಗೆ ಸೇರಿಸುವ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದರು.

      ಭದ್ರ ಮೇಲ್ದಂಡೆ ಯೋಜನೆಯಿಂದ ಸಿರಾ ತಾಲ್ಲೂಕಿನ 60 ಕೆರೆಗಳನ್ನು ತುಂಬಿಸುವ ಕಾರ್ಯ ಮಾಡುತ್ತೇವೆ ಎಂದ ಅವರು, ಕಿಸಾನ್ ಸನ್ಮಾನ್ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ರೈತರಿಗೆ ವಾರ್ಷಿಕ ಒಟ್ಟು 10 ಸಾವಿರ ರೂ. ಸಹಾಯಧನ ನೀಡ ಲಾಗುತ್ತಿದೆ ಎಂದರು.

      ಮಹಿಳಾ ಸಬಲೀಕರಣ, ಸ್ತ್ರೀಶಕ್ತಿ ಸಂಘಗಳ ಬಲವರ್ಧನೆ ಮಾಡ ಲಾಗುವುದು. ರಾಜ್ಯ ದಲ್ಲಿರುವ ಬಡವರಿಗೆ ಮನೆ, ನಿವೇಶನ ನೀಡಬೇಕೆಂಬುದು ಸರ್ಕಾರದ ಆಶಯವಾಗಿದೆ ಎಂದರು.

      ಮದ್ದನಕ್ಕಹಳ್ಳಿಯಲ್ಲಿ ಭೋವಿ ಸಮುದಾಯದ ಕಲ್ಲುಗಣಿ ಸಮಸ್ಯೆ ಬಗೆಹರಿಸುವಂತೆ ಸಮಾವೇಶದಲ್ಲಿ ಕೇಳಿ ಬಂದ ಮನವಿಗಳಿಗೆ
ತಕ್ಷಣ ಸ್ಪಂದಿಸಿದ ಯಡಿಯೂರಪ್ಪನವರು, ಗಮನಹರಿಸುವುದಾಗಿ ಹೇಳಿದರು.

      ಮುಂದಿನ ಎರಡೂವರೆ ವರ್ಷದಲ್ಲಿ ರಾಜ್ಯವನ್ನು ಅಭಿವೃದ್ಧಿಯಲ್ಲಿ ಮಾದರಿ ರಾಜ್ಯವನ್ನಾಗಿಸುವ ಸಂಕಲ್ಪ ಹೊಂದಿದ್ದೇವೆ. ಹಾಗೆಯೇ ಸಿರಾ ತಾಲ್ಲೂಕನ್ನು ಶಿಕಾರಿಪುರದಂತೆ ಮಾದರಿ ತಾಲ್ಲೂಕು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಪ್ರತಿಯೊಬ್ಬರು ಸ್ವಾಭಿಮಾನದಿಂದ ಬದುಕುವಂತೆ ಮಾಡುವ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆಗಾರಿಕೆಯನ್ನು ಮತದಾರರು ತೆಗೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.


ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮಾತನಾಡಿ, ರೈತರ ಆದಾಯ ದ್ವಿಗುಣಗೊಳಿಸುವ ಹಾಗೂ ವಿಶ್ವ ಗುರುವಾಗುವ ನಿಟ್ಟಿನಲ್ಲಿ ಹೊಸ ಶಿಕ್ಷಣ ಪದ್ಧತಿಯನ್ನು ಜಾರಿಗೊಳಿಸಲು ಪ್ರಧಾನಿ ಮೋದಿ ಅವರು ಚಿಂತನೆ ನಡೆಸಿದ್ದಾರೆ ಎಂದರು.
ರೈತರ ಬೆಳೆಯನ್ನು ರೈತನೇ ಸ್ವಾತಂತ್ರ್ಯವಾಗಿ ಮಾರಾಟ ಮಾಡುವ ನಿಟ್ಟಿನಲ್ಲಿ ಕಾಯ್ದೆಗಳಿಗೆ ತಿದ್ದುಪಡಿ ಮಾಡುವ ಮೂಲಕ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕುವ ಅವಕಾಶವನ್ನು ನೀಡಲಾಗಿದೆ ಎಂದರು.

      ಯಡಿಯೂರಪ್ಪ ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ರಾಜೇಶ್ ಗೌಡ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದ ಅವರು, ಕುಂಚಿಟಿಗ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಪ್ರಯತ್ನವನ್ನು ಈಗಾಗಲೇ ಪ್ರಾರಂಭಿಸಿರುವುದಾಗಿ ಅವರು ಹೇಳಿದರು.
ಸಚಿವ ಶ್ರೀರಾಮುಲು ಮಾತನಾಡಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸಿರಾ ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಆದರೆ ಗೆಲುವು ಸಾಧಿಸುವುದು ಬಿಜೆಪಿ. ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ವಿಜಯೇಂದ್ರ ಅವರು ಹೋಗುತ್ತಿದ್ದಾರೆ. ಹಿಂದೂ ಸಾಮ್ರಾಟ ಶಿವಾಜಿ ಅವರಂತೆ ವಿಜಯೇಂದ್ರ ಅವರು ಉಪಚುನಾವಣೆಗಳಲ್ಲಿ ಬಿಜೆಪಿಗೆ ಗೆಲುವು ತಂದು ಕೊಡುತ್ತಿದ್ದಾರೆ ಎಂದು ಹೇಳಿದರು.

      ಸಿರಾ ಉಪಚುನಾವಣೆಯಲ್ಲಿ ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲು ಹೊರಟಿದ್ದಾರೆ. ಮುಖ್ಯಮಂತ್ರಿ ಸ್ಥಾನ ಮ್ಯೂಸಿಕಲ್ ಚೇರ್ ಆಟ ಅಲ್ಲ ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಇಂದಿಲ್ಲಿ ಛೇಡಿಸಿದರು.

     ಸಿದ್ದರಾಮಯ್ಯನವರದು ಬರೀ ಬೆನ್ನಿಗೆ ಚೂರಿ ಹಾಕುವ ಕೆಲಸ. ಜೆಡಿಎಸ್‍ನಿಂದ ರಾಜಕೀಯಕ್ಕೆ ಬಂದು ಈಗ ಆ ಪಕ್ಷಕ್ಕೆ ಮೋಸ ಮಾಡಿದ್ದಾರೆ. ದೇವೇಗೌಡರನ್ನು ತುಮಕೂರು ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಸಿ ಸೋಲಿಸುವ ಮೂಲಕ ಚೂರಿ ಹಾಕಿದ್ದಾರೆ. ಹೀಗಾಗಿ ಇವರಿಗೆ ಚೂರಿ ಸಿದ್ದರಾಮಣ್ಣ ಎಂದು ಹೆಸರಿಡಬೇಕು ಎಂದರು.
ಸಿರಾ ತಾಲ್ಲೂಕು ಮದಲೂರಿನಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಬಂಡೆ ಅಲಿಯಾಸ್ ಕಲ್ಲು ಶಿವಕುಮಾರ್ ಅವರು ಸಹ ಮುಖ್ಯಮಂತ್ರಿಯಾಗಲು ಹೊರಟಿದ್ದಾರೆ. ಮುಖ್ಯಮಂತ್ರಿ ಸ್ಥಾನ ಎನ್ನುವುದು ಮ್ಯೂಸಿಕಲ್ ಚೇರ್ ಆಟ ಅಲ್ಲ ಎನ್ನವುದನ್ನು ಈ ಇಬ್ಬರು ಅರಿತುಕೊಳ್ಳಬೇಕು ಎಂದು ಹೇಳಿದರು.

      ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಕೆ.ಆರ್. ಪೇಟೆ ಮಾದರಿ ಬಗ್ಗೆ ವಿಪಕ್ಷಗಳು ಟೀಕೆ ಮಾಡುತ್ತವೆ. ಬಹಿರಂಗವಾಗಿ ಸವಾಲು ಹಾಕುತ್ತೇನೆ, ಕೆ.ಆರ್.ಪೇಟೆಗೆ ಬರಲಿ ಅಭಿವೃದ್ಧಿ ಎಂದರೆ ಏನು ಎನ್ನುವುದನ್ನು ತೋರಿಸುತ್ತೇನೆ ಎಂದರು.

      ಸಿರಾ ಕ್ಷೇತ್ರದಲ್ಲಿರುವ ಬಡವರು, ಹಿಂದುಳಿದವರ ಕಣ್ಣೀರು ಒರೆಸುವ ಕೆಲಸವನ್ನು ಬಿಜೆಪಿ ಮಾಡಲಿದೆ. ಬಿಜೆಪಿಯ ಎಲ್ಲ ಮುಖಂಡರು ಒಗ್ಗಟ್ಟಾಗಿ ಕಾಂಗ್ರೆಸ್ ಸವಾಲು ಸ್ವೀಕರಿಸಿದ್ದೇವೆ ಎಂದು ಹೇಳಿದರು.

      ಸಿರಾದಲ್ಲಿ ಬದಲಾವಣೆಯನ್ನು ತರುತ್ತೇವೆ, ರಾಜೇಶ್‍ಗೌಡ ಅವರನ್ನು ಗೆಲ್ಲಿಸುವ ಮೂಲಕ ಇತಿಹಾಸ ಸೃಷ್ಠಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸುರೇಶ್‍ಗೌಡ ಮಾತನಾಡಿ, ಮದಲೂರು ಕೆರೆಗೆ ನೀರು ಹರಿಸುವುದಾಗಿ ಹೇಳಿ ಸಚಿವರಾದವರು ಭರವಸೆ ಈಡೇರಿಸಿಲ್ಲ. ಆರು ತಿಂಗಳಲ್ಲಿ ಹೇಮಾವತಿ ನೀರು ಮದಲೂರು ಕೆರೆಗೆ ಹರಿಯುವ ಮೂಲಕ ರೈತರ ಸಮಸ್ಯೆ ಬಗೆಹರಿಸಲಿದ್ದೇವೆ ಎಂದರು.

     ಮೂವತ್ತು ವರ್ಷಗಳಿಂದ ಬಗರ್ ಹುಕುಂ ಸಾಗುವಳಿ ಚೀಟಿ ನೀಡದೇ ಶೋಷಣೆ ಮಾಡಲಾಗುತ್ತಿದ್ದು, ರೈತರಿಗೆ ಶೀಘ್ರ ಸಾಗುವಳಿ ಚೀಟಿ ನೀಡಲು ಕ್ರಮ ವಹಿಸಬೇಕು ಹಾಗೂ ದೇಗುಲಗಳ ಅಭಿವೃದ್ಧಿ ಮಾಡಲು ಅನುದಾನ ಬಿಡುಗಡೆ ಮಾಡುವ ಮೂಲಕ ಹಿಂದುಗಳ ಸಂಘಟನೆಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.

      ಸಿರಾ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ 20 ಸಾವಿರ ಮತಗಳ ಅಂತರದಿಂದ ಗೆಲ್ಲಲಿದೆ. ನ.10 ರಂದು ನಡೆಯಲಿರುವ ಮತ ಎಣಿಕೆಯಲ್ಲಿ ವಿಜಯೋತ್ಸವ ಆಚರಿಸಲಿದ್ದೇವೆ. ಕಾರ್ಯಕರ್ತರ ಉತ್ಸಾಹ ನೋಡಿದರೆ ಬಿಜೆಪಿ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಿರಾ ಕೋಟೆಯಲ್ಲಿ ಬಿಜೆಪಿ ಬಾವುಟ ಹಾರಲಿದೆ ಎಂದು ಹೇಳಿದರು.

      ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ನಾರಾಯಣಗೌಡ, ಸಂಸದರಾದ ನಾರಾಯಣಸ್ವಾಮಿ, ಪ್ರತಾಪ್ ಸಿಂಹ, ಮುನಿಸ್ವಾಮಿ, ಪಿ.ಸಿ.ಮೋಹನ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಶಾಸಕರಾದ ಜ್ಯೋತಿಗಣೇಶ್, ಬಿ.ಸಿ.ನಾಗೇಶ್, ಪೂರ್ಣಿಮಾ ಶ್ರೀನಿವಾಸ್, ತಿಪ್ಪಾರೆಡ್ಡಿ, ಬಸವರಾಜ ಬಂಡಿಮಠ, ಎಂ.ಟಿ.ಬಿ.ನಾಗರಾಜ್, ಚಂದ್ರಪ್ಪ, ಸತೀಶ್ ರೆಡ್ಡಿ, ರಾಜುಗೌಡ, ಪ್ರೀತಂಗೌಡ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಸುನೀಲ್ ವಲ್ಲ್ಯಾಪುರೆ, ಭಾರತಿಶೆಟ್ಟಿ, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಗೀತಾ ವಿವೇಕಾನಂದ, ಚಿದಾನಂದಗೌಡ, ಮಾಜಿ ಸಚಿವ ಕಟ್ಟಾಸುಬ್ರಮಣ್ಯನಾಯ್ಡು, ಡಾ.ಹುಲಿನಾಯ್ಕರ್, ಮುಖಂಡರಾದ ಬಿ.ಕೆ.ಮಂಜುನಾಥ್, ಎಂ.ಬಿ. ನಂದೀಶ್, ಎಸ್.ಆರ್.ಗೌಡ, ತಿಪ್ಪೇಸ್ವಾಮಿ, ರಘುಕೌಟಿಲ್ಯ, ಜಿ.ಪಂ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿ.ಪಂ.ಸದಸ್ಯ ವೈ.ಎಚ್.ಹುಚ್ಚಯ್ಯ, ಮೂರ್ತಿ ಮೇಷ್ಟ್ರು, ಶ್ರೀರಂಗಯಾದವ್, ಮಾರಪ್ಪ, ರಂಗಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.

(Visited 13 times, 1 visits today)