ಚಿಕ್ಕನಾಯಕನಹಳ್ಳಿ:

     ಒಂದು ಕೆರೆ ಇಡೀ ಊರಿನ ಜೀವನಾಡಿ, ಕೆರೆಯೊಂದರ ಅಸ್ತಿತ್ವ ಮರೆಯಾಗುತ್ತಾ ಹೋದಂತೆ ಊರಿನ Àಬದುಕು ಚೈತನ್ಯರಹಿತವಾಗುತ್ತಾ ಹೋಗಲಿದೆ. ಇಂತಹ ಕೆರೆಗೆ ಕಾಯಕಲ್ಪ ಸ್ಪರ್ಷವಾಗುತ್ತಿದ್ದು ಪಟ್ಟಣದ ಮೆರಗನ್ನು ಹೆಚ್ಚಿಸುವ ಆಶಾಕಿರಣವೊಂದು ಒಡಮೂಡುತ್ತಿದೆ.

      ಹೇಮಾವತಿಯೇ ಆಸರೆ: ಸುಮಾರು 25ವರ್ಷದ ಹಿಂದೆ ಪ್ರತಿವರ್ಷ ಪಟ್ಟಣದ ಕೆರೆಗೆ ಅಷ್ಟಿಷ್ಟು ಮಳೆ ನೀರು ಸಂಗ್ರಹವಾಗುತ್ತಾ ಇದ್ದ ಕಾರಣ ಕೆಲವೇ ಸಂಖ್ಯೆಯಲ್ಲಿದ್ದ ಕೊಳವೆಬಾವಿಗಳಿಂದ ದಿನನಿತ್ಯ ಕುಡಿಯುವ ನೀರು ಕೊಳಾಯಿಮೂಲಕ ಪಟ್ಟಣದ ಮನೆಮನೆಗೆ ಸರಬರಾಜಾಗುತ್ತಿತ್ತು. ಎಂತಹ ಕಡುಬೇಸಿಗೆಯಲ್ಲೂ ಪಟ್ಟಣದಲ್ಲಿ ಕುಡಿಯುವ ನೀರನ ಕೊರತೆಯುಂಟಾಗುತ್ತಿರಲಿಲ್ಲ.

      ಆದರೆ ವರ್ಷ ಕಳೆದಂತೆ ಮಳೆಗಾಲ ಕಮ್ಮಿಯಾಗಿ ಕೆರೆಗೆ ನೀರು ಹರಿಯುವದೇ ಅಪರೂಪವೆನಿಸುತ್ತಾ ಕೊನೆಗೆ ಕೆರೆ ಬಹುತೇಕ ಖಾಲಿಯಾಗಿ ಬಟಾಬಯಲಾಗುತ್ತಿದ್ದಂತಯೇ ಪಟ್ಟಣದಲ್ಲಿ ಕುಡಿಯುವ ನೀರಿನ ಹಾಹಾಕಾರ ಬೇಸಿಗೆ ಸಂದರ್ಭದಲ್ಲಿ ಮುಗಿಲು ಮಟ್ಟುತ್ತಿತ್ತು. ಈ ಸಮಸ್ಯೆ ನಿವಾರಣೆಗೆ ಹಲವರ ಪ್ರಯತ್ನದಿಂದ ಹೇಮಾವತಿ ನಾಲೆಯಿಂದ ಪೈಪ್‍ಲೈನ್ ಮೂಲಕ ಇಲ್ಲಿನ ಕೆರೆಗೆ ಕುಡಿಯುವ ಉದ್ದೇಶಕ್ಕಾಗಿ ನೀರನ್ನು ಹರಿಸುವ ಯೋಜನೆ ಜಾರಿಗೆ ಬಂದ ಕಾರಣ ಅಲ್ಲಿಂದ ಈವರೆಗೂ ಬೇಸಿಗೆÀಯಲ್ಲಿ ಬಹುತೇಕ ಹೇಮಾವತಿ ನೀರನ್ನೇ ನಂಬಿ ಬದುಕುವಂತಾಗಿದೆ

      ಜಲ ಸಂಗ್ರಹಗಾರವೇ ಇಲ್ಲದ ಕೆರೆ:

       ಹೇಮಾವತಿ ಯೋಜನೆ ಜಾರಿಗೊಂಡ ನಂತರ ಪಟ್ಟಣದ ಕೆರೆ ಕರ್ನಾಟಕ ಜಲಮಂಡಳಿಯ ವ್ಯಾಪ್ತಿಗೆ ಒಳಪಟ್ಟಿತು. ಬೇಸಿಗೆ ಸಂದರ್ಭದಲ್ಲಿ ನಾಲೆಯಿಂದ ಪೈಪ್‍ಲೈನ್ ಮೂಲಕ ಇಲ್ಲಿನ ಕೆರೆಗೆ ಹರಿದುಬರುತ್ತಿದ್ದ ನೀರನ್ನು ಸಂಗ್ರಹಿಸಲು ಸುಮಾರು 20ವರ್ಷದಿಂದ ಕೆರೆಯೊಳಗೆ ಯಾವುದೇ ಕಾಮಗಾರಿ ನಡೆಸದ ಕಾರಣ ಸುಮಾರು ಮೂರು ತಿಂಗಳು ಹರಿದ ನೀರು ಕೆರೆಯಲ್ಲಿ ಒಂದು ತಿಂಗಳಮಟ್ಟಿಗೂ ನಿಲ್ಲದೆ ಇಂಗಿಹೋಗುತ್ತಿತ್ತು. ಇದಕ್ಕೆ ಪೂರಕವೆಂಬಂತೆ ಕೆರೆ ಹಿಂದಿನ ತೋಟದವರು ಬೇಸಿಗೆಯಲ್ಲಿ ನಿರಂತರವಾಗಿ ತಮ್ಮಕೊಳವೆಬಾವಿಯಲ್ಲಿ ನೀರುಹೊಡೆಯುತ್ತಿದ್ದಕಾರಣ ಕೆರೆಯಲ್ಲಿ ಸಂಗ್ರವಾಗಿದ್ದ ನೀರು ಬೇಗನೆ ಕಮ್ಮಿಯಾಗುತ್ತಿತ್ತು. ಇದರಿಂದ ಯೋಜನೆಯ ಉದ್ದೇಶವೇ ಮಣ್ಣುಪಾಲಾಗುತ್ತಾ ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಲೆದೋರುತ್ತಿತ್ತು.

ಕಾಯಕಲ್ಪಕ್ಕೆ ಅಂಕಿತ:

      ಈಗ ಪಟ್ಟಣದ ಕೆರೆಯ ಚಿತ್ರಣೆವೇ ಬದಲಾಗುತ್ತಿದೆ. ಕರ್ನಾಟಕ ಜಲಮಂಡಳಿಯಿಂದ 1.73ಲಕ್ಷದಲ್ಲಿ ಕೆರೆಯಲ್ಲಿ ನೀರನ್ನು ಸಂಗ್ರಹಿಸುವ ಉದ್ದೇಶದಿಂದ 96 ಸಾವಿರ ಕ್ಯುಬಿಕ್ ಚದರ ಮೀಟರ್‍ನಲ್ಲಿ ಸಂಗ್ರಹಾಗಾರ ಸಿದ್ದವಾಗುತ್ತಿದೆ. ಕಳೆದ ಮೂರು ತಿಂಗಳಿಂದ ಐದಾರು ಜೆಸಿಬಿಗಳು, ಟಿಪ್ಪರ್‍ಗಳು ಹಾಗೂ ಟ್ರಾಕ್ಟರ್‍ಗಳಿಂದ ಎಡಬಿಡದೆ ಕಾಮಗಾರಿ ನಡೆಸಲಾಗುತ್ತಿದೆ. ಜಾಲಿ ಇನ್ನಿತರ ಗಿಡಗಳಿಂದ ತುಂಬಿಹೋಗಿದ್ದ ಕೆರೆಲ್ಲಿ ಅವೆಲ್ಲವನ್ನೂ ನಿವಾರಿಸಿ ಕೆರೆಯೊಳಗೆ ಒಂದು ಮೀಟರ್ ಆಳದಷ್ಟು ಮಣ್ಣನ್ನು ತೆಗೆಯಲಾಗಿದೆ. ನಂತರ ಕೆರೆಯಲ್ಲಿಯೇ ಸಿಗುವ ನೀರನ್ನು ಹಿಡಿದಿಡುವ ಜೇಡಿಮಣ್ಣನ್ನು ಒಂದು ಅಡಿಯಷ್ಟು ತಳಪಾಯಾದಂತೆ ಹಾಕಿ ದಮ್ಮಸ್ ಮಾಡಲಾಗಿದೆ. ಸದರಿ ಜೇಡಿಮಣ್ಣನ್ನು ಎಸ್.ಐ.ಟಿಗೆ ಪರೀಕ್ಷೆಗೆ ಕಳುಹಿಸಿ ಅಲ್ಲಿಂದ ಬಂದ ವರದಿಯತೆ ಈ ಜೇಡಿಯನ್ನು ತಳಭಾಗಕ್ಕೆ ಹಾಕಲಾಗುತ್ತಿದೆ. ಇದು ನೀರನ್ನು ಇಂಗಿಸಲು ಬಿಡದ ಕಾರಣ ಹಲವು ದಿನಗಳ ಕಾಲ ನೀರು ಕೆರೆಯಲ್ಲಿ ಉಳಿಯಲಿದೆ. ಹಾಗೂ ಜಾಕ್‍ವೆಲ್ ಮೂಲಕ ಕುಡಿಯುವ ನೀರನ್ನು ಶುದ್ದೀಕರಿಸಿ ಬಳಸಬಹುದಾಗಿದೆ. ಈಗಾಗಲೇ ಬಹುತೇಕ ಕಾಂಗಾರಿ ಮುಗಿಯುತ್ತಿದ್ದು ತಿಂಗಳೊಳಗೆ ಅಂತ್ಯವಾಗಲಿದೆ. ಇದು ಪೂರ್ಣಗೊಂಡರೆ ಅಂದಾಜು 96ಲಕ್ಷಲೀ. ನೀರು ಸಂಗ್ರಹಕ್ಕೆ ಈ ಜಲಾಗಾರ ಸಿದ್ದಗೊಳ್ಳಲಿದೆ.
ತೆಗೆದ ಮಣ್ಣನ್ನು ರಸ್ತೆಗೆ ಬಳಕೆ: ಸಾವಿರಾರು ಟ್ರಾಕ್ಟರ್‍ನಷ್ಟು ಮಣ್ಣು ಕೆರೆಯಿಂದ ಎತ್ತುವಳಿಯಾಗಿದ್ದು ಬಹುತೇಕ ಮಣ್ಣನ್ನು ಹೊಸ ಏರಿಯೊಂದನ್ನು ಕೆರೆಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದೆ. ಹೆಚ್ಚುಮಳೆಯಾದಾಗ ಜೋಗಿಹಳ್ಳಿ ಕಡೆಯಿಂದ ಹಳ್ಳದ ಮೂಲಕ ಬರುವ ನೀರು ಸರಾಗವಾಗಿ ಕೆರೆಗೆ ಹರಿಯಲು ಈ ಹೊಸಏರಿಗೆ ಹೊಂದಿಕೊಂಡಂತೆ ದೊಡ್ಡ ಸೇತುವೆ ನಿರ್ಮಾಣವಾಗುತ್ತಿದೆ. ಪಟ್ಟಣದಿಂದ ಕೆರೆಯ ಇನ್ನೊಂದು ಭಾಗಕ್ಕೆ ವಾಹನ ಹಾಗೂ ಜನಸಂಚಾರಕ್ಕೆ ಯೋಗ್ಯವೆನಿಸುವ ರಸ್ತೆಯನ್ನು ನಿರ್ಮಿಸಲಾಗಿದ್ದು ಇದರ ಉದ್ದ 350 ಮೀಟರ್ ಹಾಗೂ ಅಗಲ 5 ಮೀಟರ್‍ಇದೆ.

 ಸಚಿವರ ಮಹತ್ವಾಕಾಂಕ್ಷೆ:

      ಕೆರೆಗೆ ಕಾಯಕಲ್ಪ ಹಾಗೂ ಕೆರೆಗೆ ಅಡ್ಡಲಾಗಿ ರಸ್ತೆ ನಿರ್ಮಿಸಿ, ಕೆರೆಯ ಮೇಲ್ಬಾಗದ ಸರ್ಕಾರಿ ಜಾಗದಲ್ಲಿ ಪಟ್ಟಣದಲ್ಲಿರುವ ನಿವೇಶನ ಹಾಗೂ ಮನೆರಹಿತ ಬಡವರಿಗೆ ಸರ್ಕಾರದ ಯೋಜನೆಯಲ್ಲಿ ಮನೆ ನಿರ್ಮಿಸಿಕೊಳ್ಳಲು ಅವಕಾಶ ನೀಡುವುದು ಸಚಿವರ ದೂರದೃಷ್ಠಿ ಯೋಜನೆಯಾಗಿದ್ದು, ಅದು ಈಡೇರುವ ಕಾಲ ಸನ್ನಿಹಿತವಾಗಿದೆ. ಸುಮಾರು 600 ಕ್ಕೂ ಹೆಚ್ಚು ಮಂದಿಗೆ ನಿವೇಶನ ನೀಡಬಹುದಾಗಿದೆ ಎಂದು ಅಂದಾಜಿಸಲಾಗಿದೆ.

ಕಾಯಕಲ್ಪಕ್ಕೆ ಇನ್ನೂ ಬೇಕಿದೆ:

      ಕೆರೆಯನ್ನು ಜನಸ್ನೇಹಿಗೊಳಿಸಲು ಇನ್ನೂ ಹಲವು ಕೆಲಸಗಳು ಬಾಕಿಯಿದೆ. 43 ಎಕರೆಯಲ್ಲಿ ಆಗಿರುವ ಕೆರೆಯ ಒತ್ತುವರಿ ನಿವಾರಣೆ, ಕೆರೆಏರಿಯಲ್ಲಿ ಬೆಳೆದ ಗಿಡಗಂಟೆ ತೆರವು, ಬಯಲು ಬಹಿರ್ದೆಸೆಗೆ ಕಡಿವಾಣ, ಕೆರೆಯಸುತ್ತಲೂ ಉತ್ತಮ ಫೆನ್ಸಿಂಗ್, ಕೆರೆ ಏರಿಯನ್ನು ವಾಕಿಂಗ್ ಪಾಥ್ ಆಗಿ ಪರಿವರ್ತನೆ, ನೀರು ನಿಲುಗಡೆಯಾದರೆ ಬೋಟಿಂಗ್ ವ್ಯವಸ್ಥೆ ಇತ್ಯಾದಿ ಹಲವು ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಬಹುದಾಗಿದೆ.

 

(Visited 20 times, 1 visits today)