ತುಮಕೂರು:

      ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಮೊಟ್ಟ ಮೊದಲನೇ ಬಾರಿಗೆ ವರ್ಲ್ಡ್ ಫಸ್ಟ್ ಸೆನ್ಸಾರ್ ಸ್ಯಾನಿಟೈಸರ್ ಎಟಿಎಂ ಆರಂಭಿಸಿದೆ.

       ನಗರದ ಜೆ.ಸಿ. ರಸ್ತೆಯಲ್ಲಿರುವ ಟಿಎಂಸಿಸಿ ಬ್ಯಾಂಕ್‌ನ ಕೇಂದ್ರ ಕಚೇರಿಯಲ್ಲಿ ಈ ಸೆನ್ಸಾರ್ ಸ್ಯಾನಿಟೈಸರ್ ಎಟಿಎಂ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಇಂದಿಲ್ಲಿ ಉದ್ಘಾಟಿಸಿದರು.

      ನಂತರ ಮಾತನಾಡಿದ ಅವರು, ಟಿಎಂಸಿಸಿ ಬ್ಯಾಂಕ್ ಹಲವು ತಂತ್ರಜ್ಞಾನಗಳನ್ನು ಬಳಸಿಕೊಂಡು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿದೆ. ಕೊರೊನಾ ಸಂಕಷ್ಟದ ಕಾಲದಲ್ಲೂ ಗ್ರಾಹಕರ ಆರೋಗ್ಯ ದೃಷ್ಠಿಯಿಂದ ಸೆನ್ಸಾರ್ ಸ್ಯಾನಿಟೈಸರ್ ಎಟಿಎಂ ಕೇಂದ್ರವನ್ನು ಆರಂಭಿಸುವ ಮೂಲಕ ಮತ್ತೊಂದು ಹೊಸ ಹೆಜ್ಜೆ ಇಟ್ಟಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

      ಟಿಎಂಸಿಸಿ ಬ್ಯಾಂಕ್ ಅಧ್ಯಕ್ಷ ಎನ್.ಎಸ್. ಜಯಕುಮಾರ್ ಮಾತನಾಡಿ, ಪ್ರಸ್ತುತ ಕೊರೊನಾ ಸೋಂಕು ಹರಡುವ ಭೀತಿ ಎಲ್ಲೆಡೆ ಆವರಿಸಿರುವುದರಿಂದ ಬ್ಯಾಂಕ್‌ಗಳಿಗೆ ಗ್ರಾಹಕರು ಬರಲು ಬಹಳ ಯೋಚನೆ ಮಾಡುತ್ತಿದ್ದಾರೆ. ಹಾಗಾಗಿ ನಾವು ಹೊಸ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಯಾವುದೇ ಆತಂಕ ಇಲ್ಲದೆ ಗ್ರಾಹಕರು ಎಟಿಎಂಗೆ ಬಂದು ಹಣ ಡ್ರಾ ಮಾಡಿಕೊಂಡು ಹೋಗುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದೇವೆ ಎಂದರು.

      ತುಮಕೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಸೆನ್ಸಾರ್ ಸ್ಯಾನಿಟೈಸರ್ ಎಟಿಎಂ ಕೇಂದ್ರವನ್ನು ಟಿಎಂಸಿಸಿ ಆರಂಭಿಸಿದ್ದು, ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಬ್ಯಾಂಕ್ ಅಭಿವೃದ್ಧಿ ಪಥದತ್ತ ಸಾಗಲು ಗ್ರಾಹಕರೇ ಪ್ರೇರಣೆ. ಅವರ ಉತ್ತೇಜನದಿಂದ ಬ್ಯಾಂಕ್ ಮತ್ತಷ್ಟು ಪ್ರಗತಿಯತ್ತ ಸಾಗಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು. ರಾಷ್ಟ್ರೀಯ ಬ್ಯಾಂಕ್‌ಗಳಿಗೆ ಸರಿ ಸಮಾನಾಗಿ ಟಿಎಂಸಿಸಿ ಬ್ಯಾಂಕ್ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ. ನಮಗೆ ಗ್ರಾಹಕರ ಹಿತಕಾಪಾಡುವುದೇ ಮುಖ್ಯ ಗುರಿಯಾಗಿದೆ ಎಂದರು.

      ಈ ಸಂದರ್ಭದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಬ್ಯಾಂಕ್ ಉಪಾಧ್ಯಕ್ಷ ಶ್ರೀಕರ ಹಾಗೂ ನಿರ್ದೇಶಕರುಗಳು, ಸಿಇಓ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

(Visited 41 times, 1 visits today)