ಚಿಕ್ಕನಾಯಕನಹಳ್ಳಿ:

      ಕೃಷಿ ಇಲಾಖೆಯಲ್ಲಿ ರೈತ ಅನುವುಗಾರರ ಸೇವೆಯನ್ನು ಮುಂದುವರೆಸಿ, ಮಾಸಿಕ ರೂ.ಹತ್ತು ಸಾವಿರ ಗೌರವಧನ ನೀಡಬೇಕೆಂದು ರೈತ ಅನುವುಗಾರರ ಸಂಘ ಒತ್ತಾಯಿಸಿದೆ.

      ಈ ಹಿಂದೆ ಬಿ.ಎಸ್. ಯಡಿಯೂರಪ್ಪನವರ ಸರ್ಕಾರದಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಳ್ಳಿಗಳ ಪ್ರತಿಯೊಬ್ಬ ರೈತರಿಗೂ ತಾಂತ್ರಿಕ ಮಾಹಿತಿಗಳನ್ನು ನೀಡಲು, ಸರ್ಕಾರದ ಯೋಜನೆಗಳು ಹಾಗೂ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ರೈತ ಅನುವುಗಾರರ ಸೇವೆಯನ್ನು ನೇಮಕ ಮಾಡಲಾಗಿತ್ತು. ಇಲಾಖೆ ಹಾಗೂ ರೈತರ ನಡುವೆ ಭೂಚೇತನ ಯೋಜನೆಯಡಿ ಪ್ರತಿ 500 ಹೆಕ್ಟರ್ ಗೆ ಒಬ್ಬರಂತೆ ನೇಮಕಮಾಡಲಾಗಿತ್ತು. ರಾಜ್ಯದಾದ್ಯಂತ ಇಂತಹ 6000 ರೈತ ಅನುವುಗಾರರು ( ತಾಂತ್ರಿಕ ಉತ್ತೇಜಕರು) ಸೇವೆಯಲ್ಲಿದ್ದರು. ಕಳೆದ 12 ವರ್ಷಗಳಿಂದ ಕೃಷಿ ಇಲಾಖೆಯನ್ನೆ ನಂಬಿ ಬದುಕುತ್ತಿದ್ದರು. ಆದರೆ ಈಗ ಇವರ ಸೇವೆಯನ್ನು ಪರಿಗಣಿಸುತ್ತಿಲ್ಲ. ಸರ್ಕಾರವನ್ನೆ ನಂಬಿರುವ ಅನುವುಗಾರರ ಸೇವೆಯನ್ನು ಪ್ರತಿ ಪಂಚಾಯಿತಿಗೊಬ್ಬರಂತೆ ಪರಿಗಣಿಸಿ ಮಾಸಿಕ ರೂ.10 ಸಾವಿರ ಗೌರವ ಧನ ನಿಗಧಿಗೊಳಿಸಬೇಕೆಂದು ಅನುವುಗಾರರ ಸಂಘದ ಸದಸ್ಯರು ತಹಸೀಲ್ದಾರ್ ಹಾಗೂ ಸಹಾಯಕ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ಸಂಘದ ಅಧ್ಯಕ್ಷ ಜಿ.ಆರ್. ಸೀನಪ್ಪ ಹಾಗೂ ಉಪಾಧ್ಯಕ್ಷ ಡಿ. ಉಮೇಶ್ ಮುಂತಾದವರಿದ್ದರು.

(Visited 29 times, 1 visits today)