ತುಮಕೂರು:

      ತುಮಕೂರು ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಮಾಡುವಲ್ಲಿ ಜಿಲ್ಲಾ ಪೊಲೀಸ್ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದು, ಪೊಲೀಸ್ ಇಲಾಖೆಯಲ್ಲಿ ಹಂತ ಹಂತವಾಗಿ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಗೃಹ ಸಚಿವರ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದರು.

      ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿಂದು ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.  

      ತುಮಕೂರು ಜಿಲ್ಲೆಯು ಬೆಂಗಳೂರಿಗೆ ಹತ್ತಿರವಿರುವ ಜಿಲ್ಲೆಯಾಗಿರುವುದರಿಂದ ಇಲ್ಲಿ ಕೋವಿಡ್-19 ನಿಯಂತ್ರಣ ದೊಡ್ಡ ಸವಾಲಾಗಿತ್ತು. ಕೊರೊನಾ ನಿಯಂತ್ರಣ ಸಮಯದಲ್ಲಿ ತುಮಕೂರು ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ವೀಕ್ಷಿಸಿದ್ದೇನೆ. ಕೋವಿಡ್-19 ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಂಟೈನ್ಮೆಂಟ್ ವಲಯ, ಚೆಕ್‍ಪೋಸ್ಟ್ ನಿರ್ವಹಣೆ, ಕ್ವಾರೆಂಟೈನ್ ಸಮಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಕಡಿಮೆಯಿದ್ದು, ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

      ಲಾಕ್‍ಡೌನ್ ಸಮಯದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಿತ್ತು. ಲಾಕ್‍ಡೌನ್ ಸಡಿಲಿಕೆಯಾದ ನಂತರ ಅಪರಾಧ ಪ್ರಕರಣಗಳು ಮರುಕಳಿಸುತ್ತವೆ. ಕೋವಿಡ್-19 ನಿಯಂತ್ರಣ ಸಮಯದಲ್ಲಿ ಇದ್ದ ರೀತಿಯಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಬೇಕು ಎಂದು ಪೊಲೀಸರಿಗೆ ಸೂಚಿಸಲಾಗಿದೆ ಎಂದರು. ಕೊಲೆ, ಅತ್ಯಾಚಾರ ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಬೇಗ ಆಗಬೇಕು. ಬೆಂಗಳೂರು ಸಮೀಪವಿರುವುದರಿಂದ ಗಾಂಜಾ, ಡ್ರಗ್ಸ್ ಮಾರಾಟವು ನಡೆಯುತ್ತದೆ ಈ ಬಗ್ಗೆ ವಿಶೇಷವಾಗಿ ಎಚ್ಚರವಹಿಸಬೇಕು ಕಂಪ್ಲೇಂಟ್‍ಗಾಗಿ ಕಾಯದೇ ರೈಡ್ ಮಾಡುವ ಕೆಲಸ ಮಾಡಬೇಕು. ಪ್ರಕರಣದಲ್ಲಿ ಕಿಂಗ್‍ಪಿನ್ ಇದ್ದರೆ ಅವರನ್ನು ಪತ್ತೆ ಹಚ್ಚಬೇಕು. ವಿಶೇಷವಾಗಿ ಕೋವಿಡ್ ಸಮಯದಲ್ಲಿಯೂ ಜೂಜು, ಮಟ್ಕಾ ರೈಡ್ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸರ ಕಾರ್ಯವನ್ನು ಶ್ಲಾಘಿಸಿದರು.

      ಪಿಎಸ್‍ಐ ಹುದ್ದೆಗಳ ನೇಮಕಾತಿ ಹಾಗೂ ಪೊಲೀಸ್ ಕಟ್ಟಡಗಳ ನಿರ್ಮಾಣ ಮಾಡಬೇಕೆಂಬುದು ನಮ್ಮ ಗಮನದಲ್ಲಿದೆ. ಹಣಕಾಸಿನ ತೊಂದರೆಯಿದ್ದರೂ ಸಹ ಮುಂದಿನ ದಿನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು. ಕೊರಟಗೆರೆ ಹತ್ತಿರವಿರುವ ಕೆಎಸ್‍ಆರ್‍ಪಿ ಕ್ಯಾಂಪ್ ನಿರ್ಮಾಣ ಕಾರ್ಯ ಕುಂಠಿತವಾಗಿದ್ದು, ಇದನ್ನು ಚುರುಕುಗೊಳಿಸಲು ಸೂಚಿಸಲಾಗಿದೆ. ಪೇಜ್-1 ಮತ್ತು ಪೇಜ್-2 ನಿಗಧಿತ ಸಮಯದಲ್ಲಿ ಪೂರ್ಣಗೊಳಿಸಲು ನಿರ್ದೇಶನ ನೀಡಲಾಗಿದೆ ಎಂದರು.

      ತುಮಕೂರು ನಗರ ಕೇಂದ್ರದಲ್ಲಿ ಇಲಾಖೆಗೆ ಸಂಬಂಧಿಸಿದ ಕಟ್ಟಡಗಳ ನಿರ್ಮಾಣವನ್ನು ಹಂತ-ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು. ಪೊಲೀಸ್ ಠಾಣೆಗಳಿಗೆ ಹೊಸ ರೂಪ ಕೊಡುವುದಕ್ಕೆ ಕ್ರಮವಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

(Visited 6 times, 1 visits today)