ಪ್ರಕೃತಿಯ ಮಡಿಲಿನ ರಮಣೀಯ ಸ್ಥಳವೊಂದು, ಬಯಲು ಪ್ರದೇಶದ ಕುರುಚಲು ಕಾಡುಗಳ ಸಮೂಹವೊಂದು, ಪ್ರಕೃತಿ ಪ್ರಿಯರಿಗೆ, ಚಾರಣಿಗರಿಗೆ, ಮನದ ನವೋಲ್ಲಾಸಕ್ಕೆ ಹೇಳಿ ಮಾಡಿಸಿದಂತಿದೆ. ಜನಪ್ರತಿನಿಧಿಗಳು ಈ ಕ್ಷೇತ್ರದ ಬಗ್ಗೆ ಸ್ವಲ್ಪ ಕಾಳಜಿ ವಹಿಸಿದರೂ ಸಾಕು ಇದು ಪ್ರವಾಸಿಗರ ಪ್ರೇಕ್ಷಣೀಯ ಸ್ಥಳವಾಗುತ್ತದೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ.

ಹೌದು, ನಾನು ಈಗ ಹೇಳ ಹೊರಟಿರುವುದು ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ಪಟ್ಟಣದಿಂದ 6.ಕಿ.ಮೀ. ದೂರ ಪೂರ್ವ ದಿಕ್ಕಿಗೆ ಸಂಚರಿಸಿದರೆ ಸಾಕು, ಅಲ್ಲೇ ಅನಾವರಣಗೊಳ್ಳುವುದು ಮದಲಿಂಗನ ಗುಡ್ಡ, ಕಡೇ ಕಲ್ಲು ಗುಡ್ಡ, ಸಿಡ್ಲೇ ಗುಡ್ಡ, ಹಬ್ಬಿಗೆ ಗುಡ್ಡ, ದೇವದಾರೆ ಗುಡ್ಡ, ಹೀಗೆ ಗುಡ್ಡಗಳ ಸಮೂಹದೊಂದಿಗೆ ಹಲಸಿನ ದೊಣೆ, ಅಕ್ಕನಾರ ಹಳ್ಳ ಹೀಗೆ ಮುಂತಾದ ಅತ್ಯದ್ಬುತವಾದ ಪ್ರೇಕ್ಷಣೀಯ ಸ್ಥಳಗಳು, ಪ್ರಕೃತಿಯ ಸೊಬಗಿನ ಅನಾವರಣ, ಅರೆ ಮಲೆನಾಡು ಎಂದು ಸಾಕ್ಷಾತ್ಕರಿಸುವ ಹಸಿರ ಹೊದಿಕೆಗಳಿಂದ ಕಂಗೊಳಿಸುವ ಬೆಟ್ಟ ಗುಡ್ಡಗಳ ಸಾಲು, ಕಣ್ಣುಗಳಿಗೆ ತಂಪು, ಹಕ್ಕಿಗಳ ಗಾನದ ಇಂಪು, ಹೀಗೆ ಇರುವ ಈ ಪರಿಸರ ಪ್ರಕೃತಿ ಸೌಂದರ್ಯಕ್ಕೆ ಮನಸೋಲದವರೆ ಇಲ್ಲವೇನೋ ?

        ಮದಲಿಂಗನಕಣಿವೆ ಎಂದರೆ ಪ್ರವಾಸಿಗರ ಸ್ವರ್ಗ. ಸುತ್ತುಕಣಿವೆ ಇರುವುದರಿಂದ ಈ ಭಾಗದಲ್ಲಿ ಮಳೆಗಾಲದ ಸಂದರ್ಭದಲ್ಲಿ ಪ್ರಯಾಣಿಸಿದರೆ ಮಡಿಕೇರಿಯಲ್ಲಿ ಪ್ರವಾಸಿಗರಿಗೆ ದೊರಕುವ ನಿಸರ್ಗದ ಸೌಂದರ್ಯದ ಪ್ರತಿರೂಪದಂತೆ ಕಾಣಲಿದೆ. ಇನ್ನು ಚಳಿಗಾಲದ ಸಂದರ್ಭದಲ್ಲಿ ಕಣಿವೆ ಭಾಗದ ಸುತ್ತಮುತ್ತಾ ಬೀಳುವ ಮಂಜಿನಹನಿಯ ಸೌಂದರ್ಯವು ಸಹ ರಮಣೀಯವಾಗಿ ಕಾಣಿಸುತ್ತದೆ. ಜೊತೆಗೆ ಮದಲಿಂಗನ ಕಣಿವೆಗೆ ಹೋಗುವ ಮುನ್ನ ಹೊಸಹಳ್ಳಿ ಸಮೀಪದ 2 ಕಿಲೋಮೀಟರ್ ಸಂಚರಿಸಿದರೆ ಸಾಕು, ಅಲ್ಲಿಯೇ ಅನಾವರಣಗೊಳ್ಳುವುದು ಈ ಕಣಿವೆ ..

ಸಾಹಿತ್ಯಾಸಕ್ತರ ಸೃಜನಶೀಲತೆಗೆ ಸ್ಪೂರ್ತಿದಾಯಕವಾಗಿರುವ ಮತ್ತು ಈ ಕಣಿವೆಯನ್ನು ಸಾಹಿತ್ಯಕ್ಕೆ ವಸ್ತುವಾಗಿಸಿಕೊಂಡಿರುವ ಸಾಹಿತಿಗಳಾದ ಆಚಾರ್ಯ ತೀ.ನಂ.ಶ್ರೀ, ಜ್ಞಾನಪೀಠ ಪ್ರಶಸ್ತಿ ಪುರಸ್ಕತರಾದ ಮಾಸ್ತಿ ವೆಂಕಟೇಶ್ವರ ಐಯ್ಯಂಗಾರ್, ಆರ್.ಬಸವರಾಜ್, ಎಮ್ ವಿ ಎನ್, ಹೆಚ್ ಎಸ್ ಎಸ್, ಎಸ್.ಚಂದ್ರಶೇಖರ್‍ರಂತಹವರು ಈ ಕಣಿವೆಯ ಪ್ರಕೃತಿ ಸೌಂದರ್ಯವನ್ನು ಇಲ್ಲಿನ ಐತಿಹಾಸಿಕ ಘಟನೆಗಳೊಂದಿಗೆ ನಡೆದಿರುವ ವಿದ್ಯಾಮಾನಗಳನ್ನು ಮನೋಜ್ಞವಾಗಿ ಈ ನಾಡಿನ ಜನರಿಗೆ ಕಟ್ಟಿಕೊಟ್ಟಿದ್ದಾರೆ.

ಮದಲಿಂಗನಕಣಿವೆ ಇತಿಹಾಸ:

      ಮದಲಿಂಗನಗುಡ್ಡ ತನ್ನದೇ ಆದ ವೈಶಿಷ್ಠ್ಯಕ್ಕೆ ಹೆಸರಾಗಿದೆ. ಕುಸ್ತಿಪಟು ಮದನಿಂಗ ಚಿಕ್ಕನಾಯಕನಹಳ್ಳಿಯ ಅಳಿಯ. ಮದುವೆಯಾದ ಮೊದಲ ವರ್ಷ ಏಕಾದಶಿ ಜಾತ್ರೆಯಲ್ಲಿ ನಡೆಯುವ ಕುಸ್ತಿ ಪಂದ್ಯದಲ್ಲಿ ಭಾಗವಹಿಸುತ್ತಾನೆ. ವಾರಪೂರ್ತಿ ನಡೆಯುವ ಹಳೆಯೂರು ಆಂಜನೇಯ ಜಾತ್ರೆಯಲ್ಲಿ ಮಡದಿ ಹಾಗೂ ನಾದಿನಿ ಜೊತೆ ಜಾತ್ರೆಯಲ್ಲಿ ಸಂಭ್ರಮಿಸುತ್ತಾನೆ.

      ತಮಾಷೆಗೆಂದು ಜಗಜಟ್ಟಿ ಮದನಿಂಗ ನಾದಿನಿಯನ್ನೂ ಮದುವೆ ಮಾಡಿಕೊಡುವಂತೆ ಅತ್ತೆಯನ್ನು ಕೇಳಿಕೊಳ್ಳುತ್ತಾನೆ. ಊರ ಎದುರು ಮೈಚಾಚಿಕೊಂಡಿರುವ ಗುಡ್ಡವನ್ನು ಹಿಮ್ಮುಖವಾಗಿ ಹತ್ತಿ ಇಳಿದರೆ ಎರಡನೇ ಮಗಳನ್ನು ಕೊಡುವುದಾಗಿ ಅತ್ತೆ ಹೇಳುತ್ತಾಳೆ. ಸವಾಲು ಸ್ವೀಕರಿಸಿದ ಮದನಿಂಗ ಹಾಗೆ ಮಾಡುತ್ತಾನೆ. ಹಿಮ್ಮುಖವಾಗಿ ನಡೆದು ಗುರಿಯನ್ನು ತಲುಪುತ್ತಾನೆ. ಅಷ್ಟರಲ್ಲಿ ಆತನಿಗೆ ಅತೀವ ನೀರಡಿಕೆಯಾಗುತ್ತದೆ. ಆಗ ಅವರ ಬಳಿ ಇದ್ದದ್ದು ಕೇವಲ ಒಂದು ತಬ್ಬಿಗೆ ನೀರು ಅದನ್ನು ನಾದಿನಿಯ ಕೈಯಿಂದ ತೆಗೆದುಕೊಳ್ಳುವ ಭರಾಟೆ ಹಾಗೂ ರಸಿಕತೆಯ ಆತುರದಲ್ಲಿ ತಂಬಿಗೆ ಕೈಚಲ್ಲುತ್ತದೆ, ತಬ್ಬಿಗೆಯಲ್ಲಿದ್ದ ನೀರು ಮಣ್ಣುಪಾಲಾಗುತ್ತದೆ. ಸುತ್ತಲು ಎಲ್ಲೂ ನೀರು ಸಿಗದಾಗುತ್ತದೆ.

        ಅತೀವ ನೀರಡಿಕೆಯಿಂದ ಮದನಿಂಗ ಮಡಿಯುತ್ತಾನೆ ಎಂಬುದು ಮಾಸ್ತಿಯವರು ಕಟ್ಟಿಕೊಟ್ಟಿರುವ ಕಥನ ಕಾವ್ಯ. ಮದನಿಂಗ ಸತ್ತ ಸುದ್ದಿಯನ್ನು ಕೇಳಿ ಅತ್ತೆ ಎದೆ ಹೊಡೆದು ಸಾಯುತ್ತಾಳೆ. ಗಂಡ ಹಾಗೂ ತಾಯಿಯ ಸಾವು ಕಂಡು ಮಡದಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಎಂಬ ಕತೆಯಿದೆ. ಈ ಕತೆಗೆ ಪೂರಕ ಎಂಬಂತೆ ಸುತ್ತುಕಣಿವೆಯಲ್ಲಿ ಮದನಿಂಗನ ಶವ ಸಂಸ್ಕಾರ ಮಾಡಿದ ಊರಿಗೆ ಮದನಮಡು, ಅತ್ತೆಯ ಊರಿಗೆ ಅಜ್ಜಿಗುಡ್ಡೆ ಹಾಗೂ ಜಾಣೆಹಾರು ಎಂಬ ಊರುಗಳು ಇವೆ.

        ಮದಲಿಂಗನಗುಡ್ಡದ ಭಾಗದಲ್ಲಿ ಅಪರೂಪದ ಸಸ್ಯರಾಶಿಗಳಾದ ಕಾಡು ಬಿಕ್ಕೆ, ಕಮರ, ಕೇದಿಗೆ, ಜಾಲಗಿರಿ ಹೂ, ಪ್ರಕೃತಿಪ್ರಿಯರನ್ನು ಕೈ ಬೀಸಿ ಕರೆಯುತ್ತಿದೆ ಜೊತೆಗೆ ಜಾಣೆ ಮರ, ತ್ರಬ್ಶೀ ಮರ, ತರೇದ ಗಿಡ, ಲಾವಂಚ ಜಾತಿಗೆ ಸೇರಿದ ಹುಲ್ಲು, ಅಂಕಾಲೆ, ಸುಜ್ಜಲೀ ಹೀಗೆ ಹಲವಾರು ಸಸ್ಯ ಸಂಪತ್ತು ಇದೆ, ಇಲ್ಲಿರುವ ಅಪರೂಪದ ವನ್ಯಜೀವಿ ಸಂಪತ್ತು ಕಾಡಿನ ಮೆರುಗನ್ನು ಹೆಚ್ಚಿಸಿದೆ. ಈ ಭಾಗದಲ್ಲಿ ನವಿಲು, ಕರಡಿ ಹಾಗೂ ಚಿರತೆಗಳ ಸಂಖ್ಯೆಯೂ ಹೆಚ್ಚಾಗಿದೆ ಎಂದು ಕಾಡಿನ ಅಂಚಿನ ಜಮೀನುಗಳ ರೈತರು ಹೇಳುತ್ತಾರೆ.

      ಇಂತಹ ಒಂದು ಬಯಲು ನಾಡಿನ ಕುರುಚಲು ಕಾಡಿಗೆ ಒಂದು ಕಾಯಕಲ್ಪ‌ ಬೇಕೇ ಬೇಕು ಎನ್ನುವುದು ಇಲ್ಲಿಯ ನಾಗರೀಕರ, ಪರಿಸರ ಪ್ರಿಯರ ಮನವಿ, ಅರಣ್ಯ ಇಲಾಖೆಯವರು ಇಲ್ಲಿ ಹೆಚ್ಚು ಹೆಚ್ಚು ಬೀಟು ನೆಡಿಸಿ ಈ ಸುಂದರ ಕಾಡನ್ನು ಉಳಿಸಿಕೊಳ್ಳುವುದರ ಜೊತೆಗೆ ಬೂತಪ್ಪನ ಗುಡಿ ಬಳಿ ನಡೆಯುವ ಗುಂಡು-ತುಂಡು ಪಾರ್ಟಿಗಳನ್ನು ನಿಲ್ಲಿಸಲೇ ಬೇಕು, ಜೊತೆಗೆ ಸರ್ಕಾರದ ಮಟ್ಟದಲ್ಲಿ ಯೋಜನೆ ರೂಪಿಸಿ ಒಂದು ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಬೇಕು, ಪ್ರಕೃತಿ ಪ್ರಿಯರಿಗೆ, ಚಾರಣಿಗರಿಗೆ ಅಲ್ಲಿ ಕುಡಿಯುವ ನೀರಿನ ವ್ಯವಸ್ಥೆಗಳೂ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ನೆರವೇರಿಸಬೇಕು, ಸುತ್ತು ಕಣಿವೆಯಲ್ಲಿ ಓಡಾಡುವ ಬಸ್ಸುಗಳು ಶ್ರಿಲ್ ಹಾರನ್ ಮಾಡುವುದನ್ನು ನಿಶೇಧಿಸಬೇಕು, ಇದರಿಂದ ವನ್ಯ ಮೃಗಗಳ ನೆಮ್ಮದಿಗೆ ಭಂಗವೆಸಗದಂತೆ ಕಾರ್ಯೋನ್ಮುಖರಾಗಬೇಕು, ಕಾಡಿನ ನಡುವೆ ಅಲ್ಲಲ್ಲಿ ಒಡ್ಡುಗಳನ್ನು ನಿರ್ಮಿಸಿ ಅಲ್ಲಿ ನೀರು ಇಂಗಿಸುವ ಕಾರ್ಯಕ್ಕೆ ಚಾಲನೆ ನೀಡಬೇಕು.

ರವೀ ಚಿನಾ ಹಳ್ಳಿ

(Visited 1,355 times, 1 visits today)