ಚಿಕ್ಕನಾಯಕನಹಳ್ಳಿ:

      ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಇತರೆ ಭಾಗಕ್ಕೆ ಹಾಗೂ ತಿಪಟೂರು ತಾಲ್ಲೂಕಿನ ಹಾಲ್ಕುರ್ಕೆ ಭಾಗದ ಹೇಮಾವತಿ ನಾಲಾ ಕಾಮಗಾರಿ ಜೂನ್ 30 ರಂದು ನಿರ್ಧಾರವಾಗಲಿದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

      ಅವರು ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಲಸಿಕಾ ಅಭಿಯಾನ ಉದ್ಘಾಟನಾ ಕಾರ್ಯಕ್ರಮದ ನಂತರ ವರದಿಗಾರರ ಪ್ರಶ್ನೆಗೆ ಉತ್ತರಿಸಿ ಚಿಕ್ಕನಾಯಕನಹಳ್ಳಿ ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಬೋರನಕಣಿವೆಯವರೆಗೆ ತಿಪಟೂರು ತಾಲ್ಲೂಕಿನ ಹಾಲ್ಕುರ್ಕೆ ಮಾರ್ಗದ ಹೇಮಾವತಿ ನಾಲಾ ಕಾಮಗಾರಿಗಳು ಸ್ಥಗಿತಗೊಂಡಿರುವ ಬಗ್ಗೆ ಸ್ಪಷ್ಟನೆ ನೀಡಿ ಹಿಂದಿನ ಗುತ್ತಿಗೆದಾರರು ನ್ಯಾಯಾಲಯಕ್ಕೆ ಹೋಗಿ, ಆದೇಶ ತಂದ ಕಾರಣ ಈ ಭಾಗದ ಎಲ್ಲಾ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಇದಕ್ಕೂ ಮುನ್ನ ಈ ಹಿಂದೆ ಅವರ ಮನವೊಲಿಸಿ ಅವರೊಂದಿಗೆ ಕರಾರು ಮಾಡಿಕೊಂಡು ಶೆಟ್ಟಿಕೆರೆ ಭಾಗಕ್ಕೆ ನೀರು ಹರಿಸಿದ್ದೆವು. ಈಗ ಅದು ಕ್ಲೋಸ್ ಆಗಿದೆ.

ಈಗ ಬಾಕಿಯಿರುವ ಕಾಮಗಾರಿಗಳನ್ನು ಮುಂದುವರೆಸಲು ಹೊಸದಾಗಿ 98 ಕೋಟಿ ರೂ.ಗಳ ಯೋಜನೆಯ ರೂಪುರೇಷೆಯನ್ನು ಸಿದ್ದಪಡಿಸಿ ಟೆಂಡರ್‍ನ ಅನುಮೋದನೆಗಾಗಿ ನೀರಾವರಿ ನಿಗಮಕ್ಕೆ ಈಗಾಗಲೇ ನಿಡಲಾಗಿದೆ. ಈ ಸಂಬಂಧ ಜೂನ್ 30 ರಂದು ನಡೆಯುವ ನಿಗಮದ ಸಭೆಯಲ್ಲಿ ತೀರ್ಮಾನವಾಗಲಿದೆ. ಅಲ್ಲಿ ಅನುಮೋದನೆ ದೊರೆತು ಟೆಂಡರ್ ಕರೆದ ನಂತರ ಹೊಸ ಕಾಮಗಾರಿ ಆರಂಭ ಹಾಗೂ ಎಷ್ಟು ದಿನದಲ್ಲಿ ಮುಗಿಯಬಹುದೆನ್ನುವದನ್ನು ತಿಳಿಯಬಹುದಾಗಿದೆ ಎಂದರು.

(Visited 9 times, 1 visits today)