ಸಂಚಾರಿ ನಿಯಮ ಉಲ್ಲಂಘನೆ: 86 ಸವಾರರ ಡಿ.ಎಲ್ ಅಮಾನತು!

 ತುಮಕೂರು:

      ಮದ್ಯಪಾನ, ಅತಿವೇಗ ಅಜಾಗರೂಕ ಚಾಲನೆ, ಸಂಚಾರಿ ನಿಯಮ ಉಲ್ಲಂಘನೆ ಮಾಡಿರುವ 86 ಸವಾರರುಗಳ ಡಿ.ಎಲ್(ಚಾಲನಾ ಪರವಾನಗಿ)ಗಳನ್ನು ಅಮಾನತ್ತುಗೊಳಿಸಿದ್ದು, ಸಂಚಾರಿ ನಿಯಮ ಉಲ್ಲಂಘಿಸಿರುವವರ ವಿರುದ್ಧದ ಕಾರ್ಯಚಾರಣೆಯನ್ನು ಇನ್ನಷ್ಟು ಚುರುಕುಗೊಳಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್ ಕುಮಾರ್ ಅವರು ಸಾರಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

      ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಮದ್ಯಪಾನ-120, ಅಪಘಾತ-10, ಅತಿವೇಗ/ಅಜಾಗರೂಕ ಚಾಲನೆ-35 ಹಾಗೂ ಸಂಚಾರ ನಿಯಮ ಉಲ್ಲಂಘನೆ-16 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 86 ಡಿ.ಎಲ್‍ಗಳನ್ನು ಅಮಾನತ್ತುಗೊಳಿಸಲಾಗಿದೆ ಎಂದರು.

      ಎಲ್ಲಾ ಕಾಲೇಜುಗಳಲ್ಲಿ ಸಾರಿಗೆ ಹಾಗೂ ಪೊಲೀಸ್ ಇಲಾಖೆಗಳು ಜಂಟಿಯಾಗಿ ರಸ್ತೆ ಸುರಕ್ಷತೆ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಲೋಕಸಭಾ ಚುನಾವಣೆ ಮುಗಿದ ನಂತರ ಅರಿವು ಕಾರ್ಯಕ್ರಮಗಳ ಆಯೋಜನೆ ರೂಪುರೇಷಗಳನ್ನು ಸಿದ್ದಪಡಿಸಿ, ಅದರಂತೆ ರಸ್ತೆ ಸುರಕ್ಷತೆ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸಬೇಕು. ಆ್ಯಂಬುಲೆನ್ಸ್ ಸೇರಿದಂತೆ ತುರ್ತುಸೇವಾ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸುವ ವಾಹನ ಚಾಲಕರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ, ಇಯರ್ ಫೊನ್ ಬಳಕೆ ಮಾಡುವವರಿಗೆ ದಂಡ ವಿಧಿಸಬೇಕು ಎಂದು ತಿಳಿಸಿದರು.

      ಜಿಲ್ಲೆಯಲ್ಲಿ ಗುರುತಿಸಿರುವ 88 ಬ್ಲಾಕ್ ಸ್ಪಾಟ್‍ಗಳು ಹಾಗೂ ಅಪಘಾತ ನಿಯಂತ್ರಣ ಸೇರಿದಂತೆ ರಸ್ತೆ ಸುರಕ್ಷತೆಯ ವರದಿಯನ್ನು ಸಾರಿಗೆ ಇಲಾಖೆಗೆ ಸಲ್ಲಿಸಿ ಎಂದು ಪೊಲೀಸ್ ಇಲಾಖೆಗೆ ಸೂಚಿಸಿದ ಜಿಲ್ಲಾಧಿಕಾರಿಗಳು ಈ ವರದಿಯನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಮುಂದೆ ಮಂಡಿಸುವಂತೆ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜು ಅವರು ಸರ್ಕಾರದ ಆದೇಶದಂತೆ 15 ವರ್ಷದ ಮೇಲ್ಪಟ್ಟ ಪ್ರಯಾಣಿಕ ವಾಹನಗಳಿಗೆ ಎಫ್.ಸಿ. ಮಾಡುತ್ತಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.

      ರಸ್ತೆಗಳ ಇಕ್ಕೆಲುಗಳನ್ನು ಗುರುತಿಸಿ ಅಗತ್ಯವಿರುವ ಕಡೆ ಪ್ರತಿಫಲಕ ದೀಪಗಳನ್ನು ಅಳವಡಿಸಬೇಕಲ್ಲದೆ 1ಕ್ಕಿಂತ ಹೆಚ್ಚಿನ ಪರ್ಮಿಟ್‍ಗಳು ವಿತರಣೆಯಾಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಹಾಗೂ 15 ವರ್ಷ ಮೇಲ್ಪಟ್ಟ ಪ್ರಯಾಣಿಕರು ವಾಹನಗಳ ಸಂಚಾರಕ್ಕೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

      ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನ ವಂಶಿಕೃಷ್ಣ ಮಾತನಾಡಿ ಪೊಲೀಸ್ ಇಲಾಖೆಯಿಂದ ಜಿಲ್ಲೆಯಲ್ಲಿ 88 ಅಪಘಾತ ವಲಯ(ಬ್ಲ್ಯಾಕ್ ಸ್ಪಾಟ್)ಗಳೆಂದು ಸ್ಥಳ ಗುರುತಿಸಲಾಗಿದೆ. ಕೆಲವೆಡೆ ರಸ್ತೆಗಳು ತಾಂತ್ರಿಕ ಕಾರಣಗಳಿಂದ ಅಪಘಾತಗಳು ಸಂಭವಿಸುತ್ತಿವೆ. ಈಗಾಗಲೇ ಜಿಲ್ಲೆಯ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮಗಳ ಬಗ್ಗೆ ಮೊದಲ ಹಂತದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರಲ್ಲದೆ, ರಸ್ತೆ ಸುರಕ್ಷತೆ ಬಗ್ಗೆ ನಾಗರಿಕ ಹಿತರಕ್ಷಣಾ ಸಂಘಗಳ ಸಹಕಾರದೊಂದಿಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದರು.

      ತುಮಕೂರು ನಗರದಲ್ಲಿ ದ್ವಿಚಕ್ರವಾಹನ ಚಾಲಕರಿಗೆ ಹೆಲ್ಮೆಟ್ ಕಡ್ಡಾಯವಾಗಿದ್ದು, ಪ್ರತಿನಿತ್ಯ ವಿಶ್ವವಿದ್ಯಾನಿಲಯ ಕಾಲೇಜು, ಸಿದ್ಧಗಂಗಾ ಕಾಲೇಜು ಸೇರಿದಂತೆ ಮತ್ತಿತರ ಪ್ರಮುಖ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ ದಂಡ ವಿಧಿಸಲಾಗುತ್ತಿದೆ. ಅಲ್ಲದೆ ವಿಶೇಷ ದಿನಗಳಲ್ಲಿ(ವಾರದ 1 ದಿನ) ಆಟೋ, ಗೂಡ್ಸ್‍ಗಾಡಿ, ಹೀಗೆ ಒಂದೊಂದು ದಿನ ನಿಗಧಿಪಡಿಸಿಕೊಂಡು ತಪಾಸಣೆ ನಡೆಸಲಾಗುತ್ತಿದೆ. ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು ಅಂತಹ ಪ್ರಕರಣಗಳು ಕಂಡುಬಂದಲ್ಲಿ ಡಿಎಲ್ ಅಮಾನತ್ತಿಗೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುತ್ತಿದೆ ಎಂದು ತಿಳಿಸಿದರು.

      ನಗರದ ರಂಗಾಪುರದಿಂದ ಬಟವಾಡಿವರೆಗೂ ರಸ್ತೆ ಅವೈಜ್ಞಾನಿಕವಾಗಿದ್ದು, ಸರ್ವೀಸ್ ರಸ್ತೆ ಇಲ್ಲದಿರುವುದರಿಂದ ಜಂಕ್ಷನ್‍ಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ ಎಂದು ನಗರ ಪೊಲೀಸ್ ಇಲಾಖೆ ಇನ್ಸ್‍ಪೆಕ್ಟರ್ ಚಂದ್ರಶೇಖರ್ ಸಭೆಗೆ ಮಾಹಿತಿ ನೀಡಿದರು.

      ಈ ಸಂದರ್ಭದಲ್ಲಿ ಡಿಹೆಚ್‍ಒ ಡಾ|| ಚಂದ್ರಿಕಾ, ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ಗಜೇಂದ್ರ ಕುಮಾರ್, ಪಾಲಿಕೆ ಕಾರ್ಯಪಾಲಕ ಇಂಜಿನಿಯರ್ ತಿಪ್ಪೇರುದ್ರಪ್ಪ, ರಾಷ್ಟ್ರೀಯ ಹೆದ್ದಾರಿ, ಸ್ಮಾರ್ಟ್ ಸಿಟಿ, ಅಬಕಾರಿ ಅಧಿಕಾರಿ, ಪೊಲೀಸ್ ಅಧಿಕಾರಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.

(Visited 26 times, 1 visits today)

Related posts