ಕೊರಟಗೆರೆ :

ಕೊರೊನಾ ರೋಗದ ಲಾಕ್‍ಡೌನ್ ಮತ್ತು ಸೀಲ್‍ಡೌನ್ ನಡು ವೆಯು ಕರುನಾಡಿನ ಇತಿಹಾಸ ಪ್ರಸಿದ್ದ ಪುಣ್ಯಕ್ಷೇತ್ರ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಾಲಯದ ಹುಂಡಿಗೆ ಸಾವಿರಾರು ಭಕ್ತಾದಿಗಳಿಂದ 49ಲಕ್ಷಕ್ಕೂ ಅಧಿಕ ಕಾಣಿಕೆ ರೂಪದಲ್ಲಿ ಹಣ ಮತ್ತು ಬಂಗಾರದ ಒಡವೆ ಹರಿದು ಬಂದಿರುವ ಘಟನೆ ಬುಧವಾರ ಎಣಿಕೆಯ ಸಂದರ್ಭದಲ್ಲಿ ಕಂಡುಬಂದಿದೆ.
ಕಲ್ಪತರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ತೀತಾ ಗ್ರಾಪಂ ವ್ಯಾಪ್ತಿಯ ಸುಪ್ರಸಿದ್ದ ಪುಣ್ಯಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದಲ್ಲಿ ಕಳೆದ 4ತಿಂಗಳಿಂದ ಸಂಗ್ರಹಣೆ ಆಗಿದ್ದ 8ಹುಂಡಿಗಳಿಂದ 49,89,780ರೂ ನಗದು ಹಣದ ಜೊತೆ ಲಕ್ಷಾಂತರ ರೂ ಮೌಲ್ಯದ ಬಂಗಾರದ ಒಡವೆವು ಸಹ ಸಂಗ್ರಹಣೆಯಾಗಿ ಮಹಾಲಕ್ಷ್ಮೀ ದೇವಾಲಯದ ಖಾತೆಗೆ ಜಮಾವಾಗಿದೆ.
ಸಾವಿರಾರು ಭಕ್ತರಿಂದ ಕಾಣಿಕೆ ರೂಪದಲ್ಲಿ ಲಕ್ಷಾಂತರ ರೂಪಾಯಿ ಹಣದ ಜೊತೆಗೆ ಬಂಗಾರದ ತಾಳಿ ದೊಡ್ಡದು-1, ಚಿಕ್ಕದು-5, ನತ್ತು-3, ಬೆಳ್ಳಿಯ ಲಕ್ಷ್ಮೀ ಮುಖವಾಡ-1, ಬಳೆ-1, ಬಿಸ್ಕತ್ತು-2, ಕಾಲುಚೈಲು-4, ಲಕ್ಷ್ಮೀನಾಣ್ಯ-1, ಕಾಲುಂಗರ-2, ತಾಳಿ-2, ಕಣ್ಣು-2, ನಾಗಪ್ಪ-1 ವಿಗ್ರಹ ಸೇರಿ ಲಕ್ಷಾಂತರ ಮೌಲ್ಯದ ಒಡವೆಯನ್ನು ಭಕ್ತಾಧಿಗಳು ಮಹಾಲಕ್ಷ್ಮಿ ದೇವಾಲಯದ ಹುಂಡಿಗೆ ಹಾಕಿದ್ದಾರೆ.
ಹುಂಡಿಯ ಎಣಿಕೆ ವೇಳೆಯಲ್ಲಿ ಕೋಳಾಲ ಉಪತಹಶೀಲ್ದಾರ್ ಮಧುಸೂಧನ್, ಆಹಾರ ಶಿರಸ್ತೆದಾರ ನರಸಿಂಹಮೂರ್ತಿ ಸೇರಿದಂತೆ 40ಕ್ಕೂ ಅಧಿಕ ಗ್ರಾಮ ಸಹಾಯಕರು, ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಮಹಾಲಕ್ಷ್ಮೀ ದೇವಾಲಯದ ಸಿಬ್ಬಂದಿ ವರ್ಗದಿಂದ ಎಣಿಕೆ ಕಾರ್ಯ ಪೂರ್ಣಗೊಂಡಿದೆ.





