ಗುಬ್ಬಿ:

      ರೈತರು ಬಳಸುತ್ತಿದ್ದ ಸರ್ಕಾರಿ ರಸ್ತೆಯನ್ನೇ ಸೇರಿಸಿಕೊಂಡು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ದೂರು ನೀಡಿದರೆ ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಮಾರಶೆಟ್ಟಿಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಜಾಣಮೌನ ತೋರುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಿ ರಸ್ತೆ ತೆರವುಗೊಳಿಸಬೇಕು ಎಂದು ತಾಲ್ಲೂಕಿನ ಕಡಬ ಹೋಬಳಿ ಅತ್ತಿಕಟ್ಟೆ ಗ್ರಾಮಸ್ಥರು ಬುಧವಾರ ಮನವಿ ಮಾಡಿದ್ದಾರೆ.

       ಹಲವಾರು ವರ್ಷಗಳಿಂದ ಓಡಾಡಲಾಗುತ್ತಿದ್ದ ರಸ್ತೆ ನಿತ್ಯ ಬಳಕೆ ಮಾಡಲಾಗುತ್ತಿತ್ತು. ಜತೆಗೆ ಕೃಷಿಕರು ತಮ್ಮ ಹೊಲ, ತೋಟಗಳಿಗೆ ಈ ರಸ್ತೆ ಬಳಸಿಕೊಳ್ಳುತ್ತಿದ್ದರು. ಇಲ್ಲಿನ ನಿವೇಶನವೊಂದರ ಮಾಲೀಕತ್ವಕ್ಕೆ ನ್ಯಾಯಾಲಯದ ಮೆಟ್ಟಿಲೇರಿದೆ. ಕಳೆದೆರಡು ವರ್ಷದಿಂದ ನಿವೇಶನಕ್ಕೆ ನಡೆದ ವ್ಯಾಜ್ಯ ದಿನಕಳೆದಂತೆ ಓಡಾಡುವ ರಸ್ತೆ ಅತಿಕ್ರಮಣಕ್ಕೆ ತಿರುಗಿದೆ. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ಲಿಖಿತ ದೂರು ನೀಡಲಾಗಿತ್ತು. ಸ್ಥಳ ಪರಿಶೀಲನೆ ನಡೆಸಿದ ಅಭಿವೃದ್ದಿ ಅಧಿಕಾರಿ ಗುರುಮೂರ್ತಿ ಸರ್ಕಾರಿ ರಸ್ತೆ ಒತ್ತುವರಿ ತೆರವು ಮಾಡುವ ಮಾತುಗಳಾಡುತ್ತಲೇ ಕಾಲಹರಣ ಮಾಡಿದರು. ಇದರ ಫಲ ಅಕ್ರಮವಾಗಿ ಕಟ್ಟಡವೂ ನಿರ್ಮಾಣವಾಗಿದೆ. ನ್ಯಾಯಾಲಯದಲ್ಲಿದ್ದ ಸಂದರ್ಭದಲ್ಲಿ ಕಟ್ಟಡ ನಿರ್ಮಾಣ ಮಾಡಿರುವ ಬಗ್ಗೆ ಉಪವಿಭಾಗಾಧಿಕಾರಿಗಳಿಗೆ ಮತ್ತು ತಹಸೀಲ್ದಾರ್ ಅವರಲ್ಲಿ ಮನವಿ ಸಲ್ಲಿಸಲಾಗಿದೆ. ಆದರೂ ಅಧಿಕಾರಿಗಳು ರಸ್ತೆ ತೆರವು ಬಗ್ಗೆ ಕಿಂಚಿತ್ತೂ ಕಾಳಜಿ ತೋರಿಲ್ಲ ಎಂದು ಸ್ಥಳೀಯ ಅರುಣ್‍ಕುಮಾರ್ ದೂರಿದರು.

      ರಸ್ತೆ ಇರುವ ಬಗ್ಗೆ ವಾಸ್ತವ ಸತ್ಯವನ್ನು ಇಡೀ ಗ್ರಾಮಕ್ಕೆ ತಿಳಿದಿದೆ. ಅಧಿಕಾರಿಗಳು ಸ್ಥಳಕ್ಕೆ ಬರಲು ಹಿಂದೇಟು ಹಾಕಿರುವುದು ಸರಿಯಲ್ಲ ಎಂದು ಅಳಲು ತೋಡಿಕೊಂಡ ಮಹಿಳೆ ಶಂಕರಮ್ಮ, ನನ್ನ ಮನೆಗೆ ಇರುವ ಒಂದು ರಸ್ತೆ ಮುಚ್ಚಿದ್ದಲ್ಲಿ ಹೇಗೆ ಓಡಾಡುವುದು. ಸರ್ಕಾರಿ ಸ್ಥಳದಲ್ಲಿ ಕಟ್ಟಡ ನಿರ್ಮಾಣಕ್ಕೆ ಹೇಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಸ್ಥಳೀಯ ಪಿಡಿಓ ಗುರುಮೂರ್ತಿ ಸಲ್ಲದ ಮಾತುಗಳಾಡುತ್ತಾರೆ.

      ಬೇಜವಾಬ್ದಾರಿತನ ತೋರುವ ಪಿಡಿಓ ಬಗ್ಗೆ ತಾಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಗ್ರಾಮಠಾಣಾ ವ್ಯಾಪ್ತಿಯ ರಸ್ತೆ ತೆರವು ಮಾಡಿಕೊಡುವಂತೆ ತಹಸೀಲ್ದಾರ್ ಅವರಿಗೆ ಮನವಿ ಮಾಡಲಾಗಿದೆ. ಖುದ್ದು ಪರಿಶೀಲಿಸಿ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.

(Visited 21 times, 1 visits today)