ತುಮಕೂರು:

      ಹೊಸ ಲೇಔಟ್‍ಗಳ ನಿರ್ಮಾಣದ ಜೊತೆಗೆ, ನಗರಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಆಸ್ತಿಗಳನ್ನು ಸಂರಕ್ಷಿಸುವ ಗುರುತರ ಜವಾಬ್ದಾರಿ ಟೂಡಾ ಸದಸ್ಯರ ಮೇಲಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.

        ನಗರದ ವಿಘ್ನೇಶ್ವರ ಕಂರ್ಪಟ್‍ನಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ವತಿಯಿಂದ ನೂತನವಾಗಿ ಟೂಡಾ ಸದಸ್ಯರಾಗಿ ನೇಮಕವಾದವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸದಸ್ಯರಿಗೆ ಅಭಿನಂದಿಸಿ ಮಾತನಾಡುತಿದ್ದ ಅವರು, ಟೂಡಾ ಆಸ್ತಿಗಳಾದ ಉದ್ಯಾನವನಗಳು, ಸಿ.ಎ.ಸೈಟಗಳನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸುವ ಕೆಲಸವನ್ನು ಬಹಳ ಜವಾಬ್ದಾರಿಯಿಂದ ಸದಸ್ಯರು ಮಾಡಬೇಕಾಗಿದೆ ಎಂದರು.

     ನಗರದ ಹಲವಾರು ಉದ್ಯಾನವನಗಳನ್ನು ಕೆಲವರು ವಿಂಗಡಿಸಿ ಮಾರಾಟ ಮಾಡಿದ್ದಾರೆ. ನಗರಪಾಲಿಕೆ ವತಿಯಿಂದ ಪಾರ್ಕುಗಳ ಅಭಿವೃದ್ಧಿಗೆ ಮುಂದಾದಾಗ ನಿವೇಶನ ಕೊಂಡುಕೊಂಡವರು ಪರದಾಡುತ್ತಿದ್ದಾರೆ. ಹಾಗಾಗಿ ಮೊದಲು ನಗರದಲ್ಲಿ ಎಷ್ಟು ಪಾರ್ಕುಗಳಿವೆ? ಯಾವ ಸ್ಥಿತಿಯಲ್ಲಿವೆ? ಎಂಬ ಅಂಕಿ ಅಂಶವನ್ನು ದಾಖಲೆಗಳ ಸಮೇತ ಸಿದ್ದಪಡಿಸುವುದಲ್ಲದೆ, ಪಾಲಿಕೆಯ ಅಧಿಕಾರಿಗಳೊಂದಿಗೆ ಸದರಿ ಜಾಗಗಳನ್ನು ಟೂಡಾ ವಶಕ್ಕೆ ಪಡೆಯಲು ಪ್ರಯತ್ನಿಸ ಬೇಕಾಗಿದೆ ಎಂದು ಶಾಸಕರು ತಾಕೀತು ಮಾಡಿದರು.

      ತುಮಕೂರು ನಗರದ ಗುಬ್ಬಿ ಗೇಟ್ ರಿಂಗ್ ರಸ್ತೆಯಿಂದ ಶಿರಾಗೇಟ್‍ವರೆಗೆ ವರ್ತುಲ ರಸ್ತೆ ನಿರ್ಮಾಣ ಕಾಮಗಾರಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಇದರಿಂದಾಗಿ ದೊಡ್ಡ ವಾಹನಗಳು ನಗರದ ಮೂಲಕವೇ ಶಿರಾ, ಮಧುಗಿರಿ ಕಡೆಗೆ ಚಲಿಸುವುದರಿಂದ ರಸ್ತೆಗಳು ಬಹುಬೇಗ ಹಾಳಾಗುತ್ತಿದ್ದು,ಸುಮಾರು 2.1 ಕಿ.ಮಿ.ರಸ್ತೆ ನಿರ್ಮಾಣಕ್ಕೆ ಇದ್ದ ಅಡಚಣೆ ಯನ್ನು ನಿವಾರಿಸಿದ್ದು,ರಿಂಗ್ ರಸ್ತೆ ನಿರ್ಮಾಣಕ್ಕೆ ಬೇಗ ಚಾಲನೆ ದೊರೆಯುವಂತೆ ಒತ್ತಡ ಹಾಕಿ,ರಸ್ತೆ ನಿರ್ಮಾಣ ವಾಗುವಂತೆ ನೋಡಿಕೊಳ್ಳಿ ಎಂದು ಟೂಡಾ ಸದಸ್ಯರಿಗೆ ಸಲಹೆ ನೀಡಿದರು.

      ನಗರದ ಕೆಲ ರಸ್ತೆಗಳನ್ನು ಲೋಕೋಪಯೋಗಿ ಇಲಾಖೆಯ ಸುರ್ಪದಿಗೆ ನೀಡಿ, ಅಭಿವೃದ್ದಿ ಪಡಿಸುವ ಚಿಂತನೆ ನಡೆದಿದೆ. ಈಗಾಗಲೇ ಈ ಸಂಬಂದ ಆಯುಕ್ತರೊಂದಿಗೆ ಚರ್ಚೆ ನಡೆಸಲಾಗಿದೆ. ಪ್ರಮುಖವಾಗಿ ಅತಿ ಉದ್ದದ್ದ ರಸ್ತೆಗಳನ್ನು ಪಡೆದು, ಅಭಿವೃದ್ಧಿ ಪಡಿಸಿದರೆ,ನಗರಪಾಲಿಕೆಯಿಂದ ಹೊರೆಯನ್ನು ಕಡಿಮೆ ಮಾಡಬಹುದೆಂದು ಶಾಸಕ ಜಿ.ಬಿ. ಜೋತಿಗಣೇಶ್ ತಿಳಿಸಿದರು.

     ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಹಿಂದುಳಿದ ವರ್ಗ ಗಳ ಒಕ್ಕೂಟದ ಅಧ್ಯಕ್ಷ ಧನಿಯ ಕುಮಾರ್, ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ ತುಮಕೂರು ನಗರದ ಎರಡು ಕಣ್ಣುಗಳಿದ್ದಂತೆ,ಎರಡು ಕೂಡ ನಗರದ ಅಭಿವೃದ್ದಿಗೆ ನಿರಂತರ ಶ್ರಮಿಸುತ್ತಿವೆ. ಕಳೆದ ಎರಡು ವರ್ಷಗಳಲ್ಲಿ ಶಾಸಕರು ಸ್ಮಾರ್ಟ್ ಸಿಟಿ ಅಲ್ಲದೆ, ಹಲವು ಯೋಜನೆಗಳ ಮೂಲಕ ಅನುದಾನ ತಂದು, ರಸ್ತೆ, ಚರಂಡಿ, ಕುಡಿಯುವ ನೀರು ಇನ್ನಿತರ ಅಭಿವೃದ್ದಿ ಕಾರ್ಯಗಳಲ್ಲಿ ತೊಡಗಿದ್ದಾರೆ. ಮುಂದಿನ 3-4 ತಿಂಗಳಲ್ಲಿ ನಗರದ ಚಿತ್ರಣವೇ ಬದಲಾಗಲಿದೆ. ಹೊಸದಾಗಿ ಟೂಡಾಗೆ ನೇಮಕವಾದ ಸದಸ್ಯರು ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದರು.

      ಟೂಡಾ ಸದಸ್ಯರಾಗಿ ನೇಮಕವಾದ ಅಣ್ಣೇನಹಳ್ಳಿ ಶಿವಕುಮಾರ್, ಹನುಮಂತರಾಯಪ್ಪ, ಪ್ರತಾಪ್, ಶ್ರೀಮತಿ ವೀಣಾ ಶಿವಕುಮಾರ್, ಜಗದೀಶ್ ಅವರುಗಳನ್ನು ಅಭಿನಂದಿಸಲಾಯಿತು.ವೇದಿಕೆಯಲ್ಲಿ ಪಾಲಿಕೆ ಸದಸ್ಯರಾದ ಶ್ರೀಮತಿ ಗಿರಿಜಾ ಧನಿಯಕುಮಾರ್,ಜಿ.ಪಂ.ಸದಸ್ಯರಾದ ಗೂಳೂರು ಶಿವಕುಮಾರ್,ಮುಖಂಡರಾದ ಮಲ್ಲಸಂದ್ರ ಶಿವಣ್ಣ,ಕೊಪ್ಪಲ್ ನಾಗರಾಜು, ಅನಿಲ್‍ಕುಮಾರ್, ವಿನಯ್ ಜೈನ್,ಮಂಜೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 4 times, 1 visits today)