ಗುಬ್ಬಿ:

      ಕೃಷಿ ಚಟುವಟಿಕೆಗೆ ಲಾಕ್‍ಡೌನ್ ಆದೇಶ ಅಡ್ಡಿಯಾದ ಪರಿಣಾಮ ಭತ್ತದ ಕೊಯ್ಲು ತಡವಾದ ಹಿನ್ನಲೆಯಲ್ಲಿ ಭತ್ತದ ತೆನೆ ಗಾಳಿ ಮಳೆಗೆ ಮಣ್ಣುಪಾಲಾದ ಘಟನೆ ಎಂ.ಎಚ್.ಪಟ್ಟಣ ಕೆರೆ ಗದ್ದೆಬಯಲಿನಲ್ಲಿ ನಡೆದಿದೆ.

      ಹೇಮಾವತಿ ನೀರು ಹರಿದು ತುಂಬಿದ ಎಂ.ಎಚ್.ಪಟ್ಟಣ ಮತ್ತು ಗುಬ್ಬಿ ಅಮಾನಿಕೆರೆ ಗದ್ದೆ ಬಯಲು ಹಲವು ವರ್ಷಗಳ ನಂತರ ಭತ್ತದ ಪೈರು ನಳನಳಿಸಿತು. ಹಸಿರು ಬಣ್ಣದ ಪೈರು ರೈತನ ಮುಖದಲ್ಲಿ ಸಂತಸ ತುಂಬಿದ ನಂತರದಲ್ಲಿ ಲಾಕ್‍ಡೌನ್ ಆದೇಶದ ಮಧ್ಯೆ ಬಂಗಾರ ಬಣ್ಣಕ್ಕೆ ತಿರುಗಿದ ಗದ್ದೆಯಲ್ಲಿ ಭತ್ತದ ಕೊಯ್ಲು ಮಾಡುವುದು ಕಷ್ಟವಾಯಿತು. ಕೂಲಿ ಆಳುಗಳ ದೊರೆಯದೇ ಪರದಾಡುವ ಈ ಸಂದರ್ಭದಲ್ಲಿ ಮುಯ್ಯಾಳು ಪದ್ದತಿ ಕೂಡಾ ಅನುಸರಿಸುವಂತಿಲ್ಲ. ಸಾಮಾಜಿಕ ಅಂತರದ ಭೀತಿಯ ನಡುವೆ ಭತ್ತದ ತೆನೆ ಕೊಯ್ಲು ಯಂತ್ರ ಕರೆಸಿದರೆ ಈ ಲಾಕ್‍ಡೌನ್ ಆದೇಶದ ನಿಯಮಗಳು ರೈತರನ್ನು ಕಂಗೆಡಿಸಿತು.

      ತಮಿಳುನಾಡು ಮೂಲದ ಯಂತ್ರಗಳು ತೆನೆ ಕೊಯ್ಯಲು ಬಂದು ರೈತರ ಗದ್ದೆಗೆ ಇಳಿಯುವ ಮುನ್ನ ತಾಲ್ಲೂಕು ಆಡಳಿತ ಯಂತ್ರದ ಮಾಹಿತಿ ಕಲೆ ಹಾಕಿ ಹೊರರಾಜ್ಯದಿಂದ ಬಂದ ಹಿನ್ನಲೆಯಲ್ಲಿ ತೆನೆ ಕೊಯ್ಯುವ ಕೆಲಸಕ್ಕೆ ಆಸ್ಪದ ನೀಡಲಿಲ್ಲ. ಎರಡು ದಿನಗಳ ಕಾಲ ಹೆದ್ದಾರಿ ಬದಿಯಲ್ಲೇ ನಿಂತ ಯಂತ್ರ ರೈತರ ನಿದ್ದೆಗೆಡಿಸಿತು. ಈ ಮಧ್ಯೆ ಸುರಿದ ಮಳೆ ಭತ್ತದ ತೆನೆಯನ್ನು ಮಣ್ಣು ಪಾಲು ಮಾಡತೊಡಗಿತು. ಈ ನಷ್ಟ ಅನುಭವಿಸಿದ ರೈತರು ಲಾಕ್‍ಡೌನ್ ಆದೇಶದ ನಿಯಮದ ವಿರುದ್ದ ಹಿಡಿಶಾಪ ಹಾಕುವಂತಾಯಿತು. ಕೃಷಿ ಚಟುವಟಿಕೆಗೆ ಯಾವ ನಿಯಮ ಪಾಲನೆ ಇಲ್ಲ ಎನ್ನುವ ಅಧಿಕಾರಿಗಳೇ ಭತ್ತದ ಕೊಯ್ಲು ಮಾಡಲು ಅಡ್ಡಿ ಪಡಿಸಿದ್ದು ಗೊಂದಲಕ್ಕೆ ಕಾರಣವಾಯಿತು.

      ಮುಂಗಾರು ಆರಂಭದಲ್ಲಿ ಯಾವುದೇ ಕೊರತೆ ಬಾರದಂತೆ ಗೊಬ್ಬರ, ಬಿತ್ತನೆಬೀಜ ಮಾರಾಟಕ್ಕೆ ಅನುವು ಮಾಡಿದ ಸರ್ಕಾರ ಭತ್ತದ ಕೊಯ್ಲು ಮಾಡ ಲು ಸಲ್ಲದ ನಿಯಮ ಪಾಲನೆಗೆ ಮುಂದಾಗಿದೆ. ತಾಲ್ಲೂಕು ಆಡಳಿತ ಎರಡು ದಿನಗಳ ಕಾಲ ಭತ್ತದ ಕೊಯ್ಲು ಯಂತ್ರವನ್ನು ತಡೆಗಟ್ಟಿರುವುದು ಬೇಸರದ ಸಂಗತಿ. ಸಾಮಾಜಿಕ ಅಂತರದ ನಿಯಮ ಮುಯ್ಯಾಳು ಪದ್ದತಿಗೆ ಅನ್ವಯವಾಗಬಹುದು.

      ಆದರೆ ಯಂತ್ರದ ಕೆಲಸ ಕೇವಲ ಆಪರೇಟರ್ ಮಾತ್ರ ನಡೆಸುವುದಾಗಿದೆ. ಯಾವುದೇ ಗುಂಪು ಸೇರುವ ಪ್ರಶ್ನೆಯೇ ಈ ಚಟುವಟಿಕೆಯಲ್ಲಿಲ್ಲ. ಯಂತ್ರದೊಟ್ಟಿಗೆ ಬಂದ ಕಾರ್ಮಿಕರು ಸಹ ಗ್ರಾಮ ಪ್ರವೇಶ ಮಾಡುವುದಿಲ್ಲ. ಸಾರ್ವಜನಿಕ ಸಂಪರ್ಕವೇ ಇಲ್ಲದ ಯಂತ್ರ ಗದ್ದೆ ಬಯಲಿನಲ್ಲಿ ತನ್ನ ಕೆಲಸ ಮಾಡಲಿದೆ. ಆದರೂ ಅಧಿಕಾರಿಗಳು ಅಡ್ಡಿ ಪಡಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ ರೈತರು ಇನ್ನೊಂದು ವಾರದಲ್ಲಿ ಗದ್ದೆ ಬಯಲಿನಲ್ಲಿರುವ ಭತ್ತ ಕೊಯ್ಲು ಮಾಡದಿದ್ದರೇ ಎಲ್ಲವೂ ಮಣ್ಣುಪಾಲಾಗುತ್ತದೆ ಎಂದು ತಮ್ಮ ಅಳಲು ತೋಡಿಕೊಂಡರು.

      ತಮಿಳುನಾಡಿನ ಮೂಲದ ಯಂತ್ರಕ್ಕೆ ಅಡ್ಡಿ ಪಡಿಸುವ ತಾಲ್ಲೂಕು ಆಡಳಿತ ಅದೇ ರಾಜ್ಯದಿಂದ ಬಂದು ಮೈಕ್ರೋ ಫೈನಾನ್ಸ್ ನಡೆಸುವ ನೂರಾರು ಮಂದಿ ಜಿಲ್ಲೆಯಲ್ಲಿ ಎಲ್ಲಾ ಗ್ರಾಮಗಳಲ್ಲೂ ವಸೂಲಿಗೆ ನಿಂತಿದ್ದಾರೆ. ಲಾಕ್‍ಡೌನ್ ಹಿನ್ನಲೆಯಲ್ಲಿ ತಮ್ಮೂರಿಗೆ ಹೋಗಿದ್ದ ಈ ಫೈನಾನ್ಸ್ ತಂಡ ಈಗ ಮರಳಿ ತಮ್ಮ ಕೆಲಸ ಮಾಡುತ್ತಿದೆ. ಸಾಲ ವಸೂಲಿಗೆ ಮುಂದಾದ ಈ ಹೊರರಾಜ್ಯದ ಕೆಲಸಗಾರರಿಗೆ ಕ್ವಾರೆಂಟೈನ್ ಮಾಡುವಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮವಹಿಸಬೇಕಿದೆ.

(Visited 22 times, 1 visits today)