ತುಮಕೂರು:

      ಜಿಲ್ಲೆಯ ತುಮಕೂರು ತಾಲ್ಲೂಕು ಹೆಬ್ಬೂರು ವ್ಯಾಪ್ತಿ ಡಿ 23-ಅರಿಯೂರು, ಡಿ 24-ಬೊಮ್ಮನಹಳ್ಳಿ ಹಾಗೂ 153 ಎಸ್ಕೇಪ್‍ವಾಲ್ ಡಿ.ಎಸ್.ಪಾಳ್ಯ, ಕಣಕುಪ್ಪೆ ಗೇಟ್‍ವಾಲ್ ಬಳಿ ಹಾದು ಹೋಗಿರುವ ಹೇಮಾವತಿ ಚಾನೆಲ್ ಗೇಟ್‍ಗಳ ಸುತ್ತಮುತ್ತ 100 ಮೀಟರ್ ಪ್ರದೇಶದಲ್ಲಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ತುಮಕೂರು ತಾಲೂಕಿನ ತಾಲ್ಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ಹಾಗೂ ತಹಶೀಲ್ದಾರ್ ಆರ್. ಯೋಗಾನಂದ ಆದೇಶ ಹೊರಡಿಸಿದ್ದಾರೆ.

      ಕುಡಿಯುವ ನೀರಿಗಾಗಿ ಹರಿಸುತ್ತಿರುವ ಹೇಮಾವತಿ ನೀರನ್ನು ಏಕಾಏಕಿ ರೈತರು ಜಮಾಯಿಸಿ, ಕೆರೆಗಳಿಗೆ ತುಂಬಿಸಿಕೊಳ್ಳುವ ಸಲುವಾಗಿ ನಾಲೆಯ ತೂಬುಗಳ ಬಳಿ ಪ್ರತಿಭಟನೆ ನಡೆಸುತ್ತಿದ್ದು, ಹೇಮಾವತಿ ನಾಲೆಯ ಗೇಟ್‍ಗಳನ್ನು ಜಖಂಗೊಳಿಸುವ ಸಂಭವವಿರುವುದರಿಂದ ಈ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.

      ನಿಷೇಧಾಜ್ಞೆಯು ಈಗಾಗಲೇ ಜಾರಿಯಲ್ಲಿದ್ದು, ಸೆಪ್ಟೆಂಬರ್ 10ರ ಸಂಜೆ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ನಿಷೇಧಾವಧಿಯಲ್ಲಿ 5ಕ್ಕಿಂತ ಹೆಚ್ಚು ಜನರು ಗುಂಪು ಸೇರಬಾರದು. ಯಾವುದೇ ರೀತಿಯ ಅಪಾಯಕಾರಿಯಾದ ಆಯುಧ ಮತ್ತು ಶಸ್ತ್ರಾಸ್ತ್ರಗಳೊಂದಿಗೆ ತಿರುಗಾಡಬಾರದು ಮತ್ತು ಕೊಂಡೊಯ್ಯಬಾರದು.

      ಯಾವುದೇ ವದಂತಿಗಳನ್ನು ಹಬ್ಬಿಸಬಾರದು ಮತ್ತು ಶಾಂತಿಭಂಗ ಉಂಟು ಮಾಡಬಾರದು. ಸಾರ್ವಜನಿಕ ಜೀವಕ್ಕೆ, ಸುರಕ್ಷತೆಗೆ ಹಾಗೂ ಆಸ್ತಿ-ಪಾಸ್ತಿಗಳಿಗೆ ಯಾವುದೇ ರೀತಿಯ ಹಾನಿಯುಂಟುಮಾಡಬಾರದು. ಧಾರ್ಮಿಕ ಹಾಗೂ ಶವಸಂಸ್ಕಾರ ಮೆರವಣಿಗೆಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

(Visited 20 times, 1 visits today)