ಹುಳಿಯಾರು:

      ಎಸಿಬಿಯ ಸಾರ್ವಜನಿಕ ಸಭೆಗಳಲ್ಲಿ ಬರುವ ಅರ್ಜಿಗಳನ್ನು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಸ್ಪಂಧಿಸದೆ ಪೆಂಡಿಗ್ ಇಟ್ಟರೆ ಕ್ರಮಕ್ಕೆ ಮೇಲಧಿಕಾರಿಗಳಿಗೆ ಶಿಫಾರಸ್ಸು ಮಾಡುವುದಾಗಿ ಎಸಿಬಿ ಅಧಿಕಾರಿ ಪ್ರವೀಣ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

      ತುಮಕೂರು ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣೆಯ ವತಿಯಿಂದ ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

       ಕಳೆದ ಒಂದು ವರ್ಷದಲ್ಲಿ ಜಿಲ್ಲೆಯ ಅನೇಕ ಕಡೆ ಎಸಿಬಿಯಿಂದ ಸಾರ್ವಜನಿಕ ಸಭೆ ನಡೆಸಿದ್ದು ಈ ಸಭೆಯಲ್ಲಿ ಬಂದಿದ್ದ ಅರ್ಜಿಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳು ಪೆಂಡಿಗ್ ಇಟ್ಟಿದ್ದಾರೆ. ಎಸಿಬಿಗೆ ಕೊಟ್ಟರೂ ಸಮಸ್ಯೆ ಬಗೆಹರಿಯದಿದ್ದರೆ ಸಾರ್ವಜನಿಕವಾಗಿ ಇಲಾಖೆ ನಂಬಿಕೆ ಕಡೆದುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜನರು ಎಸಿಬಿ ಮೇಲಿಟ್ಟಿರುವ ನಂಬಿಕೆ ಮತ್ತು ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಿರ್ಲಕ್ಷ್ಯಿಸಿರುವ ಅಧಿಕಾರಿಗಳ ಮೇಲೆ ಕ್ರಮ ಅನಿವಾರ್ಯ ಎಂದರು.

        ಎಸಿಬಿಯಿಂದ ಪತ್ರ ಬಂದಿದೆ ಎಂಬ ಮಾತ್ರಕ್ಕೆ ಕಾನೂನು ಬಾಹಿರವಾಗಿ ಅಧಿಕಾರಿಗಳು ಕೆಲಸ ಮಾಡುವುದು ಬೇಡ. ಕಾನೂನು ಚೌಕಟ್ಟಿನಲ್ಲಿ ಅರ್ಜಿಗೆ ಸ್ಪಂಧಿಸುವ ಪ್ರಮಾಣಿಕ ಪ್ರಯತ್ನ ಮಾಡಬೇಕಿದೆ. ಅರ್ಜಿ ಪೆಂಡಿಗ್ ಇಡಲು ಇರುವ ಸಕಾರಣವನ್ನು ನೀಡುವ, ಅರ್ಜಿ ತಿರಸ್ಕಾರಕ್ಕೆ ಇರುವ ಕಾನೂನು ತೊಡಕುಗಳನ್ನು ತಿಳಿಸುವ ಕೆಲಸ ಮಾಡಬೇಕಿದೆ ಎಂದು ಕಿವಿ ಮಾತು ಹೇಳಿದರಲ್ಲದೆ ಕೊರೊನಾ ಸೋಂಕಿನ ಭೀತಿಯ ನಡುವೆಯೂ ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿ ಕೆಲಸ ವಿರ್ವಹಿಸುತ್ತಿರುವುದಕ್ಕೆ ಅಭಿನಂಧಿಸಿದರು.

      ಈ ಸಭೆಯಲ್ಲಿ ಉಪ ತಹಸೀಲ್ದಾರ್ ಬಿ.ಸಿ.ಸುಮತಿ, ತಾಪಂ ಯೋಜನಾಧಿಕಾರಿ ಮೂರ್ತ ಪ್ಪ, ಬೆಸ್ಕಾಂ ಎಇಇ ಎನ್.ಬಿ. ಗವೀರಂಗಯ್ಯ, ಮೀನುಗಾರಿಕೆ ಇಲಾ ಖೆಯ ಸಹಾಯಕ ನಿರ್ದೇಶಕರಾದ ಎ.ಎಸ್.ಮಂಜುಶ್ರೀ, ಅಕ್ಷರ ದಾಸೋಹದ ಕಾಂತರಾಜು ಸೇರಿದಂತೆ ತಾಲೂಕಿನ ವಿವಿಧ ಪಂಚಾಯ್ತಿಯ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

   ಶೌಚಾಲಯ ವ್ಯವಸ್ಥೆ ಕಲ್ಪಿಸಿ:

       ಹುಳಿಯಾರು ಬಸ್ ನಿಲ್ದಾಣಕ್ಕೆ ನಿತ್ಯ ಸಾವಿರಾರು ಪ್ರಯಾಣಿಕರು ಬಂದೋಗುತ್ತಾರೆ. ನೂರಾರೂ ಫುಟ್ ಫಾತ್ ವ್ಯಾಪಾರಿಗಳು ಇದ್ದಾರೆ. ಆದರೆ ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಸಾರ್ವಜನಿಕ ಶೌಚಾಲಯಕ್ಕೆ ಹಾಕಿದ್ದ ಬೀಗ ಇನ್ನೂ ತೆರೆದಿಲ್ಲ. ಪತ್ರಿಕೆಗಳಲ್ಲಿ ಈ ಬಗ್ಗೆ ವರದಿ ಬಂದಿದ್ದರೂ ನಿರ್ಲಕ್ಷ್ಯಿಸಿದ್ದಾರೆ. ಹಾಗಾಗಿ ಸಾರ್ವಜನಿಕರಿಗೆ ಬಯಲಲ್ಲಿ ಶೌಚಕ್ಕೆ ಹೋಗುವಂತ್ತಾಗಿದೆ ಎಂದು ಬಸ್ ಏಜೆಂಟ್ ರಹಮತ್ ದೂರಿದರು. ಇದಕ್ಕೆ ಸ್ಪಂಧಿಸಿದ ಎಸಿಬಿ ಅಧಿಕಾರಿ ಪ್ರವೀಣ್ ಅವರು ಹೊಸ ಶೌಚಾಲಯ ಕಟ್ಟುವವರೆವಿಗೆ ಹಳೆ ಶೌಚಾಲಯದ ಬಳಕೆಗೆ ಅನುವು ಮಾಡುವಂತೆ ಪಪಂಗೆ ಸೂಚಿಸಿದರು.

 ಮೂಲ ಪತ್ರ ಇದ್ದರೂ ಖಾತೆ ರದ್ದು:

      ಹುಳಿಯಾರಿನ ಬಾಲಾಜಿ ಚಿತ್ರ ಮಂದಿರದ ಹಿಂಭಾಗ ನಮ್ಮ ನಿವೇಶನವಿದ್ದು ಮೂಲ ಪತ್ರ ಸಹ ನಮ್ಮ ಬಳಿಯಿದ್ದು ಪಂಚಾಯ್ತಿಯಲ್ಲಿ ಖಾತೆಯಾಗಿತ್ತು. ಆದರೆ ನಮ್ಮ ಗಮನಕ್ಕೆ ಬಾರದೆ ಖಾತೆ ರದ್ದು ಮಾಡಿ ಬೇರೆಯವರಿಗೆ ಇಸ್ವತ್ತು ಮಾಡಿಕೊಟ್ಟಿದ್ದಾರೆ ಎಂದು ನಿವಾಸಿ ಮಂಜುನಾಥ್ ಆರೋಪಿಸಿದರಲ್ಲದೆ ಈ ಬಗ್ಗೆ ಮುಖ್ಯಾಧಿಕಾರಿಗಳ ಗಮನಕ್ಕೆ ತಂದರೂ ಸ್ಪಂಧಿಸದೆ ನಿರ್ಲಕ್ಷ್ಯಿಸಿದ್ದಾರೆ ಎಂದು ದೂರಿದರು. ಮೂಲ ಪತ್ರ ಹಾಗೂ ಖಾತೆಯಿಂತೆ ಈಗ ನಮೂನೆ 3 ರಲ್ಲಿ ನಿವೇಶನ ದಾಖಲಾತಿ ಕೊಡಿಸಿಕೊಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂಧಿಸಿದ ಎಸಿಬಿ ಅಧಿಕಾರಿ ಪ್ರವೀಣ್ ಅವರು ತಕ್ಷಣ ಸಮಸ್ಯೆ ಪರಿಹರಿಸುವಂತೆ ಪಪಂ ಅಧಿಕಾರಿಗಳಿಗೆ ಸೂಚಿಸಿದರು.

(Visited 21 times, 1 visits today)