ಹುಳಿಯಾರು : 

      ದಸೂಡಿ ಸಮೀಪದ ರಾಮಪ್ಪನಕೆರೆ ಸುತ್ತಮುತ್ತಲ ನೂರಾರು ಎಕರೆ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯವರೆ ಬೆಳಸಿದ್ದ ಮರಗಳನ್ನು ಅರಣ್ಯಾಧಿಕಾರಿಗಳೇ ಕಡಿದು ಅದೇ ಸ್ಥಳದಲ್ಲಿ ಪುನಃ ಅರಣ್ಯೀಕರಣ ಮಾಡಲು ಹೊರಟಿದ್ದಾರೆ ಎಂದು ಗಾಣಧಾಳು ಗ್ರಾಮ ಪಂಚಾಯಿತಿ ಸದಸ್ಯ ಗುರುವಾಪುರ ಶ್ರೀನಿವಾಸ್ ಆರೋಪಿಸಿದ್ದಾರೆ.

      ಬುಕ್ಕಾಪಟ್ಟಣ ವಲಯ ಅರಣ್ಯ ಪ್ರದೇಶಕ್ಕೆ ಸೇರಿದ ದಸೂಡಿ ಸರ್ಕಾರಿ ಸರ್ವೆ ನಂಬರ್ 100, 101, 104, 106 ರಲ್ಲಿ ಸುಮಾರು 290 ಎಕರೆ ಅರಣ್ಯ ಪ್ರದೇಶದಲ್ಲಿ ಈ ಹಿಂದೆ ಜಾಣೆ, ಕಮರ ಸೇರಿದಂತೆ ಅನೇಕ ಗಿಡಗಳನ್ನು ಅರಣ್ಯ ಇಲಾಖೆಯವರೆ ನೆಟ್ಟು ಐದಾರು ವರ್ಷ ಟ್ಯಾಂಕರ್‍ಗಳಲ್ಲಿ ನೀರುಣಿಸಿ ಬೆಳೆಸಿದ್ದರು. ಈಗ ಈ ಎಲ್ಲಾ ಮರಗಳು ಹೆಮ್ಮರವಾಗಿ ಬೆಳೆದು ಪ್ರಾಣಿ ಪಕ್ಷಿಗಳಿಗೆ ನೆರಳು, ಹಣ್ಣು ನೀಡುತ್ತಿರುವ ಸಂದರ್ಭದಲ್ಲಿ ನಿರ್ಧಾಕ್ಷ್ಯಿಣ್ಯವಾಗಿ ಕಡಿದು ಧರೆಗುರುಳಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಮುಂಬೈ, ಕರ್ನಾಟಕ ಹಾಗೂ ಗೋವಾ ರಾಜ್ಯಗಳಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ಧಾರಿ ನಿರ್ಮಾಣಕ್ಕಾಗಿ ಹಾಳಾಗಿರುವ ಅರಣ್ಯ ನಾಶದ ಪರ್ಯಾಯವಾಗಿ ಅರಣ್ಯ ಬೆಳೆಸಲು ಬುಕ್ಕಾಪಟ್ಟಣ ಅರಣ್ಯ ಇಲಾಖೆಗೆ ಲಕ್ಷಾಂತರ ರೂ. ಬಿಡುಗಡೆಯಾಗಿದೆ. ಈ ಹಣವನ್ನು ಖರ್ಚು ಮಾಡುವ ಸಲುವಾಗಿ ಈಗಾಗಲೇ ಸರ್ವೆ ನಂಬರ್ 104 ರಲ್ಲಿ ಹಿಟಾಚಿ ಯಂತ್ರದಿಂದ ಸಾವಿರಾರು ಮರಗಳನ್ನು ನೆಲಕ್ಕೆ ಉರುಳಿಸಿದ್ದಾರೆ ಎಂದು ಚಿತ್ರ ಸಹಿತ ವಿವರಿಸಿದ್ದಾರೆ.

      ಬುಕ್ಕಾಪಟ್ಟಣ ಅರಣ್ಯ ಪ್ರದೇಶಲ್ಲಿ ಅರಣ್ಯೀಕರಣಗೊಳಿಸಲು ಸಾಕಷ್ಟು ಅರಣ್ಯ ಪ್ರದೇಶವಿದ್ದರೂ ಸಹ ಮರಗಳನ್ನು ಕಡಿದು ಪುನಃ ಅದೇ ಸ್ಥಳದಲ್ಲಿ ನೆಡಲು ಹೊರಟಿರುವುದರ ಹಿಂದಿರುವ ರಹಸ್ಯವಾದರೂ ಏನು ಎಂದು ಪ್ರಶ್ನಿಸಿರುವ ಶ್ರೀನಿವಾಸ್ ಅರಣ್ಯೀಕರಣ ಮಾಡುವ ಮೊದಲು ಸ್ಥಳೀಯ ಸಭೆ ನಡೆಸಬೇಕಿದೆ. ಆದರೆ ಬುಕ್ಕಾಪಟ್ಟಣ ವಲಯ ಅರಣ್ಯಾಧಿಕಾರಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಈಗಾಗಲೇ ಹುಲುಸಾಗಿ ಬೆಳೆದಿರುವ ಮರಗಳನ್ನು ತೆರವುಗೊಳಿಸಿ ಮತ್ತೆ ಗಿಡಗಳನ್ನು ನೆಡಲು ತೀರ್ಮಾನಿಸಿರುವುದು ಆಕ್ಷೇಪಾರ್ಹ ಎಂದಿದ್ದಾರೆ.

      ಜನಪ್ರತಿನಿಧಿಗಳು ಮತ್ತು ಮೇಲಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಕಠಿಣ ಕ್ರಮ ಕೈಗೊಳ್ಳದಿದ್ದರೆ ಉಳಿದಿರುವ ಮರಗಳನ್ನೂ ಸಹ ಕಡಿದು ನೆಲಸಮ ಮಾಡುತ್ತಾರೆ. ಹಾಗಾಗಿ ತಕ್ಷಣ ಎಚ್ಚೆತ್ತುಕೊಂಡು ಇಂತಹ ಕೃತ್ಯ ನಡೆಸಿರುವ ಬುಕ್ಕಾಪಟ್ಟಣ ವಲಯ ಅರಣ್ಯ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಶ್ರೀನಿವಾಸ್ ಒತ್ತಾಯಿಸಿದ್ದಾರೆ.

(Visited 11 times, 1 visits today)