ತುಮಕೂರು : 

     ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ 2020-21ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುವಂತೆ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಶಿಕ್ಷಕರುಗಳಿಗೆ ಸೂಚಿಸಿದರು.

      ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ಧ 2020-21ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗಾಗಿ ಪ್ರೌಢ ಶಾಲಾಶಿಕ್ಷಕರ ಪ್ರಗತಿ ಪರಿಶೀಲನಾ ಹಾಗೂ ಮಾರ್ಗದರ್ಶನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

       ಕಳೆದ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಜಿಲ್ಲೆಯು 14ನೇ ಸ್ಥಾನದಲ್ಲಿದೆ. ಆದರೆ ಈ ಬಾರಿ ಉತ್ತಮ ಫಲಿತಾಂಶದೊಂದಿಗೆ ಜಿಲ್ಲೆಯನ್ನು ಉತ್ತಮ ಸ್ಥಾನಕ್ಕೇರಿಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊಂದು ವಿದ್ಯಾರ್ಥಿಯನ್ನು ತನ್ನ ಮಗು ಎಂದು ಭಾವಿಸಿ, ಉತ್ತಮ ಮಾರ್ಗದರ್ಶನ ನೀಡಬೇಕು. ಕೋವಿಡ್-19ರ ಹಿನ್ನೆಲೆಯಲ್ಲಿ ಪಠ್ಯಗಳು ಕಡಿಮೆಯಾಗಿದ್ದು, ಪ್ರತಿ ಮಗುವು ಉತ್ತೀರ್ಣರಾಗುವಂತೆ ತಯಾರು ಮಾಡಬೇಕು ಎಂದರು.

       ಪ್ರತಿಯೊಬ್ಬ ಮನುಷ್ಯನ ನಿರ್ಮಾಣ ಶಿಕ್ಷಕರಿಂದಲೇ ಸಾಧ್ಯ, ಅಂತಹ ಶಿಕ್ಷಕರಿಗೆ ಸಲಹೆ ನೀಡುವ ಬದಲು, ಶಿಕ್ಷಕರು ಹೇಳುವ ಮಾತುಗಳನ್ನು ಕೇಳಬೇಕು. ಮಕ್ಕಳಿಗೆ ಜೀವನ ಮೌಲ್ಯಗಳನ್ನು ಕಲಿಸಿಕೊಡಬೇಕು. ಶಿಕ್ಷಕರು ಮುಂದಿನ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಉತ್ತಮ ಫಲಿತಾಂಶ ತರುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ಅಧಿಕಾರ ಸ್ವೀಕರಿಸಿದ ನಂತರ ಪಾಲ್ಗೊಂಡ ಮೊದಲ ಕಾರ್ಯಕ್ರಮ ಇದಾಗಿದ್ದು, ಸ್ವತಃ ಶಿಕ್ಷಕ ವೃತ್ತಿಯಿಂದ ಬಂದಿದ್ದು, ನನ್ನ ಅಪ್ಪ ಹಾಗೂ ಅಜ್ಜಿ ಶಿಕ್ಷಕರಾಗಿದ್ದರು. ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರ ಅತಿ ಪ್ರಮುಖವಾಗಿದೆ ಎಂದು ಅವರು ತಿಳಿಸಿದರು.
ಈ ಬಾರಿ 23 ಸಾವಿರ ಮಕ್ಕಳು ಪರೀಕ್ಷೆ ಬರೆಯಲಿದ್ದು, ಓದಿನಲ್ಲಿ ಹಿಂದಿರುವ ಮಗುವಿಗೆ ಹೆಚ್ಚಿನ ಒತ್ತು ನೀಡಬೇಕು. ಕೋವಿಡ್-19 ಪಠ್ಯಗಳು ಕಡಿಮೆಯಾಗಿದ್ದು, ಮಕ್ಕಳು ಉತ್ತಮ ಫಲಿತಾಂಶ ಪಡೆಯಬಹುದು. ಈಗಾಗಿ ಶಿಕ್ಷಕರು ಉತ್ತಮ ಮಾರ್ಗದರ್ಶನ ನೀಡಬೇಕು. ಪರೀಕ್ಷೆ ಉತ್ತೀರ್ಣವಾದರೆ ಸಾಲದು. ಜೀವನದಲ್ಲಿ ಪಾಸಾಗುವ ರೀತಿ ಮಕ್ಕಳಿಗೆ ಪಾಠ ಮಾಡಬೇಕು ಎಂದರು.

       ಈ ಸಂದರ್ಭದಲ್ಲಿ ಡಿಡಿಪಿಐಗಳಾದ ನಂಜಯ್ಯ, ಡಯಟ್ ಪ್ರಾಂಶುಪಾಲ ಮಂಜುನಾಥ್ ಕೆ., ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ರಂಗದಾಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ತಿಮ್ಮರಾಜು, ರಂಗಧಾಮಯ್ಯ, ಸೋಮಶೇಖರ್, ಕಾತ್ಯಾಯಿನಿ ಸೇರಿದಂತೆ ಸರ್ಕಾರಿ, ಅನುದಾನಿತ, ಅನುದಾನರಹಿತ, ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಜರಿದ್ದರು.

(Visited 10 times, 1 visits today)