ಹುಳಿಯಾರು : 

      ಬಯಲು ಬಹಿರ್ದೆಸೆ ನಿರ್ಮೂಲನೆಗೆ ಸರ್ಕಾರ ಯುದ್ದೋಪಾದಿಯಲ್ಲಿ ಕ್ರಮ ಕೈಗೊಂಡು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಸಹ ಪಂಚಾಯ್ತಿಯ ನಿರ್ಲಕ್ಷ್ಯದಿಂದಾಗಿ ಬಯಲು ಬಹಿರ್ದೆಸೆ ಇನ್ನೂ ಜೀವಂತವಾಗಿದ್ದು ಸಾರ್ವಜನಿಕರು ರಸ್ತೆ ಬದಿ ಮಲಮೂತ್ರ ವಿಸರ್ಜಿಸುವ ವ್ಯವಸ್ಥೆ ಇದ್ದು ನಾಗರಿಕ ಸಮಾಜವನ್ನು ಅಣಕಿಸುವಂತಿದೆ.

      ಹೌದು, ಜಿಲ್ಲೆಯಲ್ಲೇ ಅತೀ ಹೆಚ್ಚು ಆದಾಯವುಳ್ಳ, ತಾಲೂಕು ಸರಿಸಮಾನಕ್ಕೆ ಬೆಳೆದು ನಿಂತಿರುವ, ವ್ಯಾಪಾರ ವಹಿವಾಟಿಗೆ ಹೆಸರಾಗಿರುವ ಹುಳಿಯಾರಿನ ಸ್ಥಿತಿ ಇದು. ಹೆಚ್ಚು ಜನಸಂದಣಿ ಇರುವ ರಾಮಗೋಪಾಲ್ ಸರ್ಕಲ್ ಮತ್ತು ಬಸ್ ನಿಲ್ದಾಣದಲ್ಲಿ ಪಂಚಾಯ್ತಿಯಿಂದ ದಶಕಗಳ ಹಿಂದೆ ಶೌಚಾಲಯ ಕಟ್ಟಿಸಿ, ಪ್ರಯಾಣಿಕರು, ಖಾಸಗಿ ಬಸ್ ಚಾಲಕ ಮತ್ತು ನಿರ್ವಾಹಕರು, ಹಮಾಲಿಗಳು, ಕೂಲಿಕಾರ್ಮಿಕರಿಗೆ, ಸಾರ್ವಜನಿಕರಿಗೆ ದೇಹಬಾಧೆ ತೀರಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದರು. ಆದರೆ ರಾಮಗೋಪಾಲ್ ಸರ್ಕಲ್ ಶೌಚಾಲಯ ಹೈವೆ ರಸ್ತೆ ಕಾಮಗಾರಿಗೆ ತೆರವು ಮಾಡಿದವರು ಪುನಃ ನಿರ್ಮಿಸಿಲ್ಲ. ಬಸ್ ನಿಲ್ದಾಣದ ಶೌಚಾಲಯವನ್ನು ಕೋವಿಡ್ ಲಾಕ್‍ಡೌನ್ ನೆಪದಲ್ಲಿ ಮುಚ್ಚಿದ್ದು ತೆರೆಯದಿರುವುದು ಬಯಲು ಬಹಿರ್ದೆಸೆಗೆ ಕಾರಣವಾಗಿದೆ.

      ಪಟ್ಟಣದ ಬಸ್ ನಿಲ್ದಾಣದ ಹಾಗೂ ರಾಮಗೋಪಾಲ್ ಸರ್ಕಲ್‍ನಲ್ಲಿ ಬೆಳಗ್ಗೆ 6 ರಿಂದ ರಾತ್ರಿ 9 ರ ತನಕ ವ್ಯಾಪಾರ-ವಹಿವಾಟುಗಳು ಜೋರಾಗಿ ನಡೆಯುತ್ತದೆ. ನುರಾರು ಬಸ್‍ಗಳು ಇಲ್ಲಿ ಬಂದೋಗುತ್ತವೆ. ರಸ್ತೆಯ ಇಕ್ಕೆಲಗಳಲ್ಲಿ ಹೂವು, ಹಣ್ಣು, ದಿನಸಿ ವಸ್ತುಗಳು, ತರಕಾರಿಗಳು ಸೇರಿದಂತೆ ಅಗತ್ಯ ವಸ್ತುಗಳ ಮಾರಾಟ ಹೆಚ್ಚಾಗಿದೆ. ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಂದ ಸಾವಿರಾರು ಮಂದಿ ಜನರು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಇಂತಹ ಸ್ಥಳದಲ್ಲಿ ಶೌಚಾಲಯವೇ ಇಲ್ಲದಿರುವುದು ಪಂಚಾಯ್ತಿ ಆಡಳಿತಕ್ಕೆ ಅವಮಾನದ ಸಂಗತಿಯಾಗಿದೆ. ಅಲ್ಲದೆ ಕಳೆದ ಐದಾರು ತಿಂಗಳಿಂದ ಜನರು ಬಯಲಲ್ಲಿ ಬಹಿರ್ದೆಸೆಗೆ ಹೋಗುತ್ತಿದ್ದರೂ ಮೌನವಹಿಸಿರುವ ಪಂಚಾಯ್ತಿಯ ಕ್ರಮವನ್ನು ಪ್ರಶ್ನಿಸುವ ವಿಷಯವಾಗಿದೆ.

      ನಿತ್ಯ ಪಟ್ಟಣಕ್ಕೆ ಸುತ್ತಮುತ್ತಲ ಊರಿಗಳಿಂದ ಉದ್ಯೋಗ, ವ್ಯಾಪಾರವ್ಯವಹಾರ, ಶಾಲಾಕಾಲೇಜು, ಬ್ಯಾಂಕುಕಛೇರಿ ಹೀಗೆ ವಿವಿಧ ಕೆಲಸಗಳಿಗೆ ಬಂದು ಹೋಗುವವರ ಸಂಖ್ಯೆ ಕಡಿಮೆ ಎಂದರೂ 2000 ದಾಟುತ್ತದೆ. ಅಲ್ಲದೆ ಬಸ್ ನಿಲ್ದಾಣ ಮತ್ತು ರಾಮಗೋಪಾಲ್ ಸರ್ಕಲ್‍ನಲ್ಲಿ ನೂರಾರು ಬೀದಿ ಬದಿ ವ್ಯಾಪಾರಿಗಳಿದ್ದಾರೆ. ವಾಣಿಜ್ಯ ಮಳಿಗೆಗಳಿದ್ದು ಇವರೆಲ್ಲರೂ ಬಯಲಿನಲ್ಲಿಯೇ ನೈಸರ್ಗಿಕ ಕ್ರಿಯೆ ನಡೆಸಿ ದೇಹಬಾಧೆ ತೀರಿಸಿಕೊಳ್ಳುತ್ತಿದ್ದಾರೆ. ಪುರುಷರೆನೋ ರಸ್ತೆ ಪಕ್ಕದಲ್ಲೇ ತಮ್ಮ ಜಲಬಾಧೆ ತೀರಿಸಿಕೊಳ್ಳುತ್ತಿದ್ದಾರೆ. ಆದರೆ ಮಹಿಳೆಯರ ಪರದಾಟ ಹೇಳತೀರದಾಗಿದ್ದು ಮತ್ತೋರ್ವ ಮಹಿಳೆಯನ್ನು ಕೆರೆ ದಡದಲ್ಲಿ ಕಾವಲಿಗಿಟ್ಟು ಕೆರೆಯೊಳಗೆ ಶೌಚಕ್ಕೆ ಹೋಗುವ ಸಂಕಷ್ಟ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.

      ಬಸ್ ನಿಲ್ದಾಣದ ಸಮೀಪ ಮಲಮೂತ್ರ ವಿಸರ್ಜಿಸುತ್ತಿರುವುದರಿಂದ ಇಡೀ ವಾತಾವರಣ  ದುರ್ನಾತ ಬೀರುತ್ತಿದೆ. ಪರಿಸರ ಕಲುಷಿತವಾಗುತ್ತಿದೆ. ಬಸ್‍ಗಾಗಿ ಕಾಯುವ ಸಾರ್ವಜನಿಕರು ಹಾಗೂ ದಾರಿಹೋಕರು ಮೂಗು ಮುಚ್ಚಿಕೊಳ್ಳುವ ಅನಿವಾರ್ಯತೆ ಸೃಷ್ಠಿಯಾಗಿದೆ. ಎಳನೀರು, ಟೀ ಮಾರುವ ವ್ಯಾಪಾರಿಗಳು ಈ ಕೆಟ್ಟಗಾಳಿ ಕುಡಿದು ಅರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪಂಚಾಯ್ತಿಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಪರಿಣಾಮ ಹುಳಿಯಾರು ಪಟ್ಟಣಕ್ಕೆ ಬರುವ ಹಾಗೂ ಇಲ್ಲಿನ ಬೀದಿಬದಿ ವ್ಯಾಪಾರಿಗಳು ನಿತ್ಯ ಪಂಚಾಯ್ತಿ ಅಧಿಕಾರಿಗಳಿಗೆ ಹಿಡಿಶಾಪ ಹಾಕಿ ಬಯಲಲ್ಲಿ ಶೌಚ ಮುಗಿಸಿಕೊಳ್ಳುತ್ತಿದ್ದಾರೆ. ಇನ್ನಾದರೂ ಮೇಲಧಿಕಾರಿಗಳು ಇತ್ತ ಗಮನ ಹರಿಸಿ ಬಯಲು ಬಹಿರ್ದೆಸೆ ಕೊನೆಗಾಣಿಸಲು ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.

(Visited 9 times, 1 visits today)