ತುಮಕೂರು : 

     ಶಿರಾ ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಅಮ್ಮಾಜಮ್ಮ ಸತ್ಯನಾರಾಯಣ ಅವರ ಪರವಾಗಿ ಮಾಜಿ ಮಂತ್ರಿ ಹೆಚ್.ಡಿ.ರೇವಣ್ಣ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರ ಸ್ವಾಮಿ ಮತ್ತು ಶಿರಾ ಪುರಸಭೆ ಮಾಜಿ ಅಧ್ಯಕ್ಷ ರಾಮು ರವರುಗಳು ನಾಮಪತ್ರ ಸಲ್ಲಿಸಿದರು.

      ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿರುವ ಅಮ್ಮಾಜಮ್ಮ ಅವರಿಗೆ ಕೋರೋನ ಸೋಂಕು ದೃಡಪಟ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಅವರ ಪರವಾಗಿ ಜೆಡಿಎಸ್ ಪಕ್ಷದ ಮುಖಂಡರ ಚುನಾವಣಾಧಿಕಾರಿಗಳಾದ ಮಧುಗಿರಿ ಉಪವಿಭಾಗಾಧಿಕಾರಿ ಡಾ.ನಂದಿನಿ ದೇವಿ ಅವರಿಗೆ ಉಮೇದುವಾರಿಕೆ ಪತ್ರ ಸಲ್ಲಿಸಿದರು.

      ಶಿರಾ ನಗರದ ಚೆಂಗಾವರ ರಸ್ತೆಯಲ್ಲಿರುವ ಮಾಜಿ ಶಾಸಕ ದಿವಂಗತ ಸತ್ಯನಾರಾಯಣ ಅವರಿಗೆ ಸೇರಿದ ವಸತಿಗೃಹದಿಂದ ಶಿರಾ ನಗರದ ಹೊರವಲಯದಲ್ಲಿರುವ ತಾಲೂಕು ಕಚೇರಿಗೆ ಮಿನಿ ವಿಧಾನಸೌಧದವರೆಗೆ ಸಾವಿರಾರು ಕಾರ್ಯಕರ್ತ ರೊಂದಿಗೆ ಮೆರವಣಿಗೆ ನಡೆಸಿದ ಶಾಸಕ ಹಾಗೂ ಪಕ್ಷದ ಉಪಾಧ್ಯಕ್ಷ ಹೆಚ್.ಡಿ.ರೇವಣ್ಣ,ಹಾಸನ ಸಂಸದ ಹೆಚ್.ಆರ್.ಪ್ರಜ್ವಲ್ ರೇವಣ್ಣ, ಶಾಸಕರಾದ ಡಿ.ಸಿ.ಗೌರಿಶಂಕರ್,ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮಧುಗಿರಿಯ ಎಂ.ವಿ.ವೀರಭದ್ರಯ್ಯ,ಮಾಜಿ ಶಾಸಕರಾದ ಸುಧಾಕರಲಾಲ್,ಮಾಜಿ ಸಚಿವ ನಬೀ,ಸತ್ಯನಾರಾಯಣ ಅವರ ಪುತ್ರ ಸತ್ಯಪ್ರಕಾಶ್,ಸಿ.ಆರ್.ಉಮೇಶ್ ಅವರುಗಳು,ಜೆಡಿಎಸ್ ಪಕ್ಷದ ಶಕ್ತಿ ಪ್ರದರ್ಶನ ನಡೆಸಿದರು.

      ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಹೆಚ್.ಡಿ.ರೇವಣ್ಣ,ಈ ಚುನಾವಣೆ ಬರಬಾರದಿತ್ತು.ಸತ್ಯನಾರಾಯಣ ಅವರ ಸಾವಿನ ಸೂತಕದ ನಡುವೆ ನಾವು ಚುನಾವಣೆ ಎದುರಿಸುತ್ತಿದ್ದೇವೆ.ವರಿಷ್ಠರ ತೀರ್ಮಾನದಂತೆ ಅವರ ಕುಟುಂಬದವರಿಗೆ ಟಿಕೇಟ್ ನೀಡಲಾಗಿದೆ.ಶಿರಾದಲ್ಲಿ ಜೆಡಿಎಸ್ ಪಕ್ಷಕ್ಕೆ ತನ್ನದೇ ಆದ ಶಕ್ತಿಯಿದೆ. ಅದನ್ನು ಈ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ತೋರಿಸುವ ಮೂಲಕ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರನ್ನು ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

       ಜೆಡಿಎಸ್ ಪಕ್ಷದಲ್ಲಿ ಅಭ್ಯರ್ಥಿಗಳ ಕೊರತೆಯಿಲ್ಲ.ಆದರೆ 130 ವರ್ಷದ ಪಕ್ಷ ಎಂದು ಹೇಳುವ ಕಾಂಗ್ರೆಸ್,ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷಗಳು ನಮ್ಮ ಪಕ್ಷದ ಕಾರ್ಯಕರ್ತರನ್ನು ಸೆಳೆದು ಟಿಕೇಟ್ ನೀಡುವ ಮೂಲಕ ತಮ್ಮ ಬೆಳೆ ಬೇಯಿಸಿಕೊಳ್ಳಲು ಹೊರಟಿದೆ.ಆದರೆ ಜೆಡಿಎಸ್ ಆ ಕೆಲಸ ಮಾಡಿಲ್ಲ.ಆರ್.ಆರ್.ನಗರ ಮತ್ತು ಶಿರಾ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ.ಇದರಲ್ಲಿ ಅನುಮಾನವೇ ಇಲ್ಲ.ನಾಳೆಯಿಂದ ಹೆಚ್.ಡಿ.ಕುಮಾರಸ್ವಾಮಿ ಅವರು ಸಹ ಕ್ಷೇತ್ರಕ್ಕೆ ಭೇಟಿ ನೀಡಿ ಅಮ್ಮಾಜಮ್ಮ ಅವರ ಪರ ಪ್ರಚಾರ ನಡೆಸಲಿದ್ದಾರೆ ಎಂದು ಹೆಚ್.ಡಿ.ರೇವಣ್ಣ ತಿಳಿಸಿದರು.

      ಶಿರಾ ಕ್ಷೇತ್ರದ ದೊಡ್ಡ ಆಲದಮರದ ಆಂಜನೇಯಸ್ವಾಮಿ ದೇವಾಲಯದ ಬಳಿಯಿಂದ ಚುನಾವಣಾಧಿಕಾರಿಗಳ ಕಚೇರಿವರೆಗೆ ಬೈಕ್ ರ್ಯಾಲಿ ನಡೆಸಿದ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ,ಅನಿರೀಕ್ಷಿತವಾಗಿ ಶಿರಾ ಉಪಚುನಾವಣೆ ಎದುರಾಗಿದೆ.ಪಕ್ಷದ ಕಾರ್ಯಕರ್ತರೆಲ್ಲರೂ ಒಗ್ಗೂಡಿ ಚುನಾವಣೆ ಎದುರಿಸುವ ಮೂಲಕ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲಿದ್ದೇವೆ.ಪಕ್ಷಕ್ಕೆ ತನ್ನದ ಆದ ಮತದಾರರಿದ್ದಾರೆ.ಅಲ್ಲದೆ ಸತ್ಯನಾರಾಯಣ ಅವರ ಸಾವು ಈ ಕ್ಷೇತ್ರದಲ್ಲಿ ಕೆಲಸ ಮಾಡಲಿದೆ.ಅವರು ಶಾಸಕರಾಗಿದ್ದ ಎರಡು ವರ್ಷಗಳಲ್ಲಿ ಸುಮಾರು 2000 ಕೋಟಿ ರೂ ಅನುದಾನ ತಂದು ಕ್ಷೇತ್ರದ ಅಭಿವೃದ್ದಿ ಕೆಲಸ ಮಾಡಿದ್ದಾರೆ.ಇದನ್ನು ಕ್ಷೇತ್ರದ ಮತದಾರರು ಪರಾಮರ್ಶಿಸಿ ಮತದಾನ ಮಾಡಲಿದ್ದಾರೆ ಎಂದರು.

      ಸಾಮಾಜಿಕ ಅಂತರ, ಮಾಸ್ಕ್ ಮರೆತ ಕಾರ್ಯಕರ್ತರು:ಚುನಾವಣೆಗೆ ಸಂಬಂಧಿಸಿದಂತೆ ಇಂದು ಜೆಡಿಎಸ್ ಆಯೋಜಿಸಿದ್ದ ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.ಬಹುತೇಕ ಮಂದಿ ಮಾಸ್ಕ್ ಧರಿಸಿರಲಿಲ್ಲ.ಅಲ್ಲದೆ ಸಾಮಾಜಿಕ ಆಂತರವೆಂಬುದು ಮರೀಚಿಕೆಯಾಗಿತ್ತು.

(Visited 4 times, 1 visits today)