‘ಕ್ಯಾಂಪಸ್ ಕಹಾನಿ’ ಪುಸ್ತಕದಲ್ಲಿ ನವಿರಾದ ಅಭಿವ್ಯಕ್ತಿಯಿದೆ!: ಸಿಬಂತಿ ಪದ್ಮನಾಭ


ತುಮಕೂರು:


‘ಕ್ಯಾಂಪಸ್ ಕಹಾನಿ’ ಲೇಖಕ ಯೋಗೇಶ್ ಮಲ್ಲೂರು ಅವರ ಮೊದಲ ಪುಸ್ತಕವಾಗಿದ್ದು, ನವಿರಾದ ಅಭಿವ್ಯಕ್ತಿಯಿಂದ ಕೂಡಿದೆ. ಪುಸ್ತಕದ ನಿರೂಪಣೆ ಓದುಗರನ್ನು ಸೆಳೆಯುತ್ತವೆ ಎಂದು ತುಮಕೂರು ವಿಶ್ವವಿದ್ಯಾನಿಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಸಹಾಯಕ ಪ್ರಾಧ್ಯಾಪಕ ಹಾಗೂ ಲೇಖಕ ಡಾ. ಸಿಬಂತಿ ಪದ್ಮನಾಭ ಕೆ.ವಿ ತಿಳಿಸಿದರು.
ನಗರದ ತುಮಕೂರು ವಿಶ್ವವಿದ್ಯಾನಿಲಯದ ಸದಾನಂದಮಯ ಕಟ್ಟಡದಲ್ಲಿರುವ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ನಡೆದ ಯೋಗೇಶ್ ಮಲ್ಲೂರು ಅವರ ಕ್ಯಾಂಪಸ್ ಕಹಾನಿ ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಯೋಗೇಶ್ ನನ್ನ ಹಳೆಯ ವಿದ್ಯಾರ್ಥಿ, ಅವರ ಬರವಣಿಗೆಯ ಆಸಕ್ತಿಯನ್ನು ಪದವಿ ಹಂತದಿಂದಲೇ ನೋಡಿಕೊಂಡು ಬಂದಿದ್ದೆ. ಉತ್ತಮವಾದ ಬರಹಗಳನ್ನು ಬರೆಯುತ್ತಿದ್ದರು ಎಂದರು.

ಹದಿಹರೆಯದ ಮನಸ್ಸಿನ ತುಡಿತಗಳು, ಭಾವನೆಗಳನ್ನು ಪುಸ್ತಕದಲ್ಲಿ ಕಾಣುತ್ತೇವೆ. ಯುವ ವಯಸ್ಸಿಗೆ ಈ ತರಹದ ಭಾವನೆಗಳು ಸಹಜವಾದರೂ ಅದನ್ನು ಅಭಿವ್ಯಕ್ತಿ ಪಡಿಸುವುದು ಮುಖ್ಯ. ಪುಸ್ತಕದಲ್ಲಿ ಸುಮಾರು 40 ರಷ್ಟು ಬರಹಗಳಿದ್ದು, ನವಿರಾದ ನಿರೂಪಣೆ ಹಾಗೂ ಉತ್ತಮ ಶೈಲಿಯಿಂದ ಕೂಡಿದೆ. ವಿದ್ಯಾರ್ಥಿ ದಿಸೆಯಿಂದಲೇ ಒಳ್ಳೆಯ ರೀತಿಯ ಬರವಣಿಗೆಯನ್ನು ರೂಢಿಸಿಕೊಂಡಂತಹ ವಿದ್ಯಾರ್ಥಿ ಯೋಗೇಶ್, ಅದರ ಜೊತೆಗೆ ಸಾಮಾಜಿಕ ಕೆಲಸಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇದೆಲ್ಲವೂ ಒಬ್ಬ ವಿದ್ಯಾರ್ಥಿಗೆ, ಪತ್ರಕರ್ತನಿಗೆ ಇರಬೇಕಾದ ಸಾಮಾಜಿಕ ತುಡಿತಗಳು. ಸಮಾಜದ ಜೊತೆಗೆ ಸಮಸ್ಯೆಗಳಿಗೆ ಸ್ಪಂದಿಸುವುದು, ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಅದರೊಂದಿಗೆ ಬರವಣಿಗೆಯ ಅಭಿವ್ಯಕ್ತಿ ಕೆಲಸಗಳನ್ನು ಮಾಡುತ್ತಿರುವುದು ಸಂತೋಷದ ವಿಷಯ. ಕಥೆಗಳನ್ನು ಬರೆಯುವ ಹವ್ಯಾಸವು ಕೂಡ ಯೋಗೇಶ್ ಅವರಿಗಿದೆ. ಈಗಾಗಲೇ ಸಾಕಷ್ಟು ಕಥೆ, ಚುಟುಕು, ಲೇಖನಗಳನ್ನು ಬರೆದಿದ್ದಾರೆ. ಇನ್ನೂ ಕೂಡ ಅವರು ಈ ತರಹದ ಬರಹಗಳನ್ನು ಹೆಚ್ಚು ಹೆಚ್ಚಾಗಿ ಬರೆಯಲಿ. ಅವರಿಂದ ಒಳ್ಳೆಯ ಕೃತಿಗಳು ಪ್ರಕಟವಾಗಲಿ, ಅವುಗಳನ್ನು ನಾವು ಓದುವಂತಾಗಲಿ ಎಂದು ಆರೈಸಿದರು.

ಯುವಕರು ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವುದು ಮಾತ್ರವಲ್ಲದೆ, ಅವುಗಳನ್ನು ಪ್ರಕಟಿಸುವುದು ಮುಖ್ಯ ಜೊತೆಗೆ ಅದನ್ನು ತೆಗೆದುಕೊಂಡು ಓದಿ ಸೂಕ್ತ ಪ್ರತಿಕ್ರಿಯೆ ಕೊಡುವುದು ಒಬ್ಬ ಲೇಖಕ, ಬರಹಗಾರ, ಪತ್ರಕರ್ತರ ಬರವಣಿಗೆಗಳ ಸಾರ್ಥಕತೆ ಎಂದರು.
ಪುಸ್ತಕಕ್ಕೆ ಚಿತ್ರ ಸಾಹಿತಿ ಕವಿರಾಜ್ ಮುನ್ನುಡಿ ಬರೆದಿದ್ದಾರೆ. ಪ್ರೀತಿಯಿಂದ ಗುಬ್ಬಚ್ಚಿ ಸತೀಶ್ ಪ್ರಕಟಿಸಿದ್ದಾರೆ. ಬಹಳ ಸಂತೋಷದಿಂದ ಪುಸ್ತಕವನ್ನು ಕೈಗೆತ್ತಿಕೊಂಡಿದ್ದೇನೆ.
ಪ್ರಕಾಶಕರು ಹಾಗೂ ಲೇಖಕರಿಗೆ ಶುಭಾಶಯ ಕೋರುತ್ತಾ, ಲೇಖಕ ಮತ್ತಷ್ಟು ಸಾಹಿತ್ಯ ಕೃಷಿ ಮಾಡುತ್ತಾ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಕೃತಿಗಳು ರಚಿಸಲಿ ಎಂದರು.
ಇದೇ ಸಂದರ್ಭದಲ್ಲಿ ಲೇಖಕ ಯೋಗೇಶ್ ಮಲ್ಲೂರು, ಪತ್ರಕರ್ತ ಉಮೇಶ್, ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ವಿಶಾಲ್ ಮಯೂರ್, ಚನ್ನಬಸವ ಎಂ, ಪ್ರವೀಣ್‍ಕುಮಾರ್, ಅನಿಲ್, ಗೋಪಾಲ ಪುರುಷೋತ್ತಮ್ ಉಪಸ್ಥಿತರಿದ್ದರು.

(Visited 23 times, 1 visits today)

Related posts