ಕೊರಟಗೆರೆ:

      ನೊಂದಾಯಿತ ಗುತ್ತಿಗೆದಾರ ಮತ್ತು ಗ್ರಾಪಂಯ ಕಾಮಗಾರಿ ಕರಾರು ಒಪ್ಪಂದ ಇರುವಂತಹ ಗುತ್ತಿಗೆದಾರನಿಗೆ ಗ್ರಾಪಂ ಚುನಾವಣೆಗೆ ಸ್ಪರ್ಧಿಸಲು ಅನರ್ಹ ಎಂದು ಸ್ಪಷ್ಟಿಕರಣ ನೀಡಿದ ರಾಜ್ಯ ಚುನಾವಣಾ ಆಯೋಗ. ಗ್ರಾಪಂ ಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದಲೇ ಜೀವನಕ್ಕೆ ಆಧಾರವಾದ ಗುತ್ತಿಗೆಯ ಪರವಾನಗಿ ನೊಂದಣಿಯನ್ನೇ ನೂರಾರು ಜನ ಗುತ್ತಿಗೆದಾರರು ನೊಂದಣಿಯನ್ನು ರದ್ದುಪಡಿಸಿಕೊಂಡ ಪತ್ರದೊಂದಿಗೆ ಗ್ರಾಪಂಯ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಘಟನೆ ನಡೆದಿದೆ.

      ಗುತ್ತಿಗೆದಾರರ ಮನವಿಯನ್ನು ಪರಿಶೀಲನೆ ನಡೆಸಿರುವ ಪಂಚಾಯತ್‍ರಾಜ್ ಅಧೀಕ್ಷಕ ಅಭಿಯಂತರವರ ಕಚೇರಿಯು ಹತ್ತಾರು ಷರತ್ತುಗಳಿಗೆ ಒಳಪಡಿಸಿ ಗುತ್ತಿಗೆದಾರನ ಗುತ್ತಿಗೆ ರದ್ದುಪಡಿಸಿ ಆದೇಶ ಮಾಡಿದ್ದಾರೆ. ಗ್ರಾಪಂ ಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದ ಕೊರಟಗೆರೆಯ ಮಾವತ್ತೂರು, ಜೆಟ್ಟಿ ಅಗ್ರಹಾರ, ಹೊಳವನಹಳ್ಳಿ, ಹುಲೀಕುಂಟೆ ಮತ್ತು ತುಂಬಾಡಿ ಗ್ರಾಪಂ ಸೇರಿದಂತೆ ತುಮಕೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಗ್ರಾಪಂಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದ ತಮ್ಮ ಗುತ್ತಿಗೆ ನೊಂದಣಿಯನ್ನು ರದ್ದು ಪಡಿಸಿಕೊಂಡು ನಾಮಪತ್ರ ಸಲ್ಲಿಸಿರುವುದು ಕಂಡುಬಂದಿದೆ.

      ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಕೋಟ್ಯಾಂತರ ರೂ ಅನುಧಾನ ಬರಲಿದೆ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನೂರಾರು ಕಾಮಗಾರಿ ನಡೆಯುತ್ತವೆ. ಪ್ರತಿ ಗ್ರಾಮದಿಂದ ಕಂದಾಯ ವಸೂಲಾತಿ ಸೇರಿದಂತೆ ಸರಕಾರದಿಂದ ಬರುವಂತಹ ಹತ್ತಾರು ವಿವಿಧ ಯೋಜನೆಗಳ ಅನುಧಾನ ಅನುಷ್ಠಾನ ಮಾಡುವುದೇ ಸ್ಥಳೀಯ ಗ್ರಾಪಂ ಆಡಳಿತ. ಇಷ್ಟೇಲ್ಲ ಸೌಲಭ್ಯ ಮತ್ತು ಅನುಕೂಲ ಇರುವ ಹಿನ್ನಲೆ ಗ್ರಾಪಂನ ಸದಸ್ಯತ್ವ ಸ್ಥಾನಕ್ಕೆ ಇನ್ನೀಲ್ಲದ ಬೇಡಿಕೆಯು ಸೃಷ್ಟಿಯಾಗಿದೆ.

      ಜಿಲ್ಲಾಧಿಕಾರಿಗೆ ಗ್ರಾಪಂ ಅಭ್ಯರ್ಥಿ ದೂರು:

      ಮಾವತ್ತೂರು ಗ್ರಾಪಂ ಗುತ್ತಿಗೆದಾರ ಮಂಜುನಾಥನ ಗುತ್ತಿಗೆಯ ನೊಂದಣಿ ಸಂಖ್ಯೆ.3365/2017-18ರಿಂದ 2022-23ವರೆಗೆ ಪರವಾನಗಿ ಚಾಲ್ತಿಯಲ್ಲಿದೆ. ಮಾವತ್ತೂರು ಗ್ರಾಪಂಯ ಮಾಜಿ ಸದಸ್ಯನಾಗಿ ಕೋಟ್ಯಾಂತರ ರೂ ಅನುಧಾನದ ಕೆಲಸ ಮಾಡಿದ್ದಾರೆ.

      ಗ್ರಾಪಂಯ ಖಾತೆಯಿಂದ 2018ರಿಂದ 2020ರವೆಗೆ ಕಾಮಗಾರಿಯ ಹಣವು ಈತನ ಖಾತೆಗೆ ವರ್ಗಾವಣೆ ಆಗಿದೆ. ಗ್ರಾಪಂ ಸದಸ್ಯನಾಗಿ ಗುತ್ತಿಗೆಯ ಪರವಾನಗಿ ಪಡೆದು ಈಗ ಮತ್ತೆ ಗ್ರಾಪಂಗೆ ಸ್ಪರ್ಧಿಸಿದ್ದಾನೆ. ಚುನಾವಣೆ ಆಯೋಗ ತಕ್ಷಣ ಇವರ ನಾಮಪತ್ರವನ್ನು ರದ್ದುಪಡಿಸಿ ಚುನಾವಣೆಗೆ ಸ್ಪರ್ಧಿಸದಂತೆ ತಡೆಯಾಜ್ಞೆ ನೀಡುವಂತೆ ಚುನಾವಣಾಅಧಿಕಾರಿ, ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗೆ ಮಾವತ್ತೂರು ಗ್ರಾಪಂ ಅಭ್ಯರ್ಥಿ ಮುತ್ತರಸಯ್ಯ ದೂರು ನೀಡಿದ್ದಾರೆ.

(Visited 16 times, 1 visits today)