ತುಮಕೂರು:

      ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ-2020ರ ಮೊದಲ ಹಂತದ ಹಾಗೂ ಎರಡನೇ ಹಂತದ ಚುನಾವಣೆ ಮತದಾನ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮತದಾನ ಮುಗಿಯುವ ಸಮಯಕ್ಕೆ 48 ಗಂಟೆಗಳ ಮುಂಚಿತವಾಗಿ ಮದ್ಯದಂಗಡಿ ಹಾಗೂ ತಯಾರಿಕಾ ಘಟಕ ಮುಚ್ಚಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.

       ಡಿಸೆಂಬರ್ 22ರಂದು ಮೊದಲನೇ ಹಂತದ ಚುನಾವಣೆ ನಡೆಯಲಿದ್ದು, ಡಿಸೆಂಬರ್ 20ರ ಸಂಜೆ 5 ಗಂಟೆಯಿಂದ 22ರ ಸಂಜೆ 5 ಗಂಟೆಯವರೆಗೆ ಹಾಗೂ ಡಿ.27ರಂದು ಎರಡನೇ ಹಂತದ ಚುನಾವಣೆ ನಡೆಯಲಿದ್ದು, ಡಿಸೆಂಬರ್ 25ರ ಸಂಜೆ 5 ಗಂಟೆಯಿಂದ 27ರ ಸಂಜೆ 5 ಗಂಟೆಯವರೆಗೆ ಎಲ್ಲಾ ಮದ್ಯದಂಡಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಅದರ ಮಾಲೀಕರು, ಅಧಿಭೋಗದಾರರು ಮತ್ತು ಸಂದರ್ಭನುಸಾರ ವ್ಯವಸ್ಥಾಪಕರು ಮುಚ್ಚತಕ್ಕದ್ದು ಹಾಗೂ ಮೊಹರ್ ಮಾಡಿ ಅದರ ಕೀ ಅನ್ನು ಜಿಲ್ಲಾಧಿಕಾರಿಗಳಿಗೆ ಅಥವಾ ಅಧಿಕಾರ ವ್ಯಾಪ್ತಿಯುಳ್ಳ ಕಾರ್ಯರ್ವಾಹಕ ಮ್ಯಾಜಿಸ್ಟ್ರೇಟರ್‍ರಿಗೆ ಒಪ್ಪಿಸತಕ್ಕದ್ದು. ಈ ಅವಧಿಯಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ, ಸಾಗಾಣಿಕೆ, ಶೇಖರಣೆ ನಿಷೇಧಿಸಿ ಮುಚ್ಚಲು ಆದೇಶಿಸಿರುತ್ತಾರೆ.

     ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಗ್ರಾಮ ಪಂಚಾಯಿತಿಗೆ ಚುನಾವಣೆ ನಡೆಯದಿದ್ದರೂ ಸಹ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಸದರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಡಿ.20ರ ಸಂಜೆ 5 ಗಂಟೆಯಿಂದ 22ರ ಸಂಜೆ 5 ಗಂಟೆಯವರೆಗೆ ಎಲ್ಲಾ ಮದ್ಯ ಮಾರಾಟ, ಶೇಖರಣೆ(ಕೆಎಸ್‍ಬಿಸಿಎಲ್ ಡಿಪೋ ಹೊರತುಪಡಿಸಿ)ನಿಷೇಧಿಸಿದೆ.

      ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಯಾರಾದರೂ ಮದ್ಯವನ್ನು ಸ್ವಾಧೀನದಲ್ಲಿಟ್ಟುಕೊಂಡಿರುವುದು ಅಥವಾ ಮದ್ಯವನ್ನು ಸೇವಿಸಿ ಬೀದಿಯಲ್ಲಿ ರಂಪಾಟ ಮಾಡುತ್ತಿರುವುದು ಕಂಡು ಬಂದರೆ ಮುನ್ನೆಚ್ಚರಿಕೆ ಕ್ರಮವಾಗಿ ಚುನಾವಣೆ ಮುಕ್ತಾಯವಾಗುವವರೆಗೆ ಅಂತಹವರನ್ನು ಕಸ್ಟಡಿಯಲ್ಲಿ ಇಡಲಾಗುವುದು ಎಂದು ಅವರು ಆದೇಶಿಸಿದ್ದಾರೆ.

(Visited 12 times, 1 visits today)