ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ : ಟಿಬಿಜೆಗೆ ಟಾಂಗ್ ನೀಡಿದ ಕೆ.ಎನ್.ಆರ್

ಮಧುಗಿರಿ:

      ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ, ಸಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಪ್ರಕಟಿಸುತ್ತೇನೆ ಎಂದು ಹೇಳುವ ಮೂಲಕ ಮಾಜಿ ಶಾಸಕ ಕೆ.ಎನ್. ರಾಜಣ್ಣ ಟಿ.ಬಿ.ಜೆಗೆ ಟಾಂಗ್ ನೀಡಿದ್ದಾರೆ.

      ಪಟ್ಟಣದ ತಮ್ಮ ಸ್ವಗೃಹದಲ್ಲಿ ಹಮ್ಮಿಕೊಂಡಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವರ್ಷದ ಅಕ್ಟೋಬರ್ ಅಥವಾ ನವೆಂಬರ್ ವೇಳೆಗೆ ಸಿರಾ ವಿಧಾನಸಭಾ ಕ್ಷೇತ್ರ ಉಪ ಚುನಾವಣೆ ನಡೆಯುವ ನಿರೀಕ್ಷೆಯಿದ್ದು, ಇದರ ಬಗ್ಗೆ ಹೆಚ್ಚೇನು ಮಾತನಾಡುವುದಿಲ್ಲ. ಈ ತಿಂಗಳ ಕೊನೆಯಲ್ಲಿ ದಿವಂಗತ ಸತ್ಯನಾರಾಯಣ್‍ರವರ ಪುಣ್ಯತಿಥಿಯನ್ನು ಹಮ್ಮಿಕೊಳ್ಳಲಾಗಿದ್ದು, ಈಗ ಇದರ ಬಗ್ಗೆ ಮಾತನಾಡುವುದು ಸರಿಯಲ್ಲ. ನಂತರದ ದಿನಗಳಲ್ಲಿ ಕೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಲಿದ್ದು, ರಾಜಕೀಯದಲ್ಲಿರುವ ಎಲ್ಲರಿಗೂ ಆಸೆ ಆಕಾಂಕ್ಷೆಗಳಿರುತ್ತವೆ. ನಮ್ಮ ಪಕ್ಷದಿಂದ ಏನೆಲ್ಲಾ ಅಬಿಪ್ರಾಯಗಳು ಬರುತ್ತವೆ, ಇತರೆ ಪಕ್ಷಗಳಲ್ಲಿ ಯಾವ ಹೇಳಿಕೆಗಳು ಬರುತ್ತವೆ ಎಂಬುದನ್ನೆಲ್ಲಾ ಕ್ರೋಡೀಕರಿಸಿ ಮುಂದಿನ ದಿನಗಳಲ್ಲಿ ಮಾಧ್ಯಮದ ಮುಂದೆ ನಿರ್ಧಾರ ಪ್ರಕಟಿಸುತ್ತೇನೆ ಎಂದರು.

ಟೋಲ್ ರದ್ದು ಮಾಡುತ್ತೇನೆ:

       ಮಧುಗಿರಿಯನ್ನು ಜಿಲ್ಲೆಯನ್ನಾಗಿಸುವುದು, ಎತ್ತಿನ ಹೊಳೆಯ ಮೂಲಕ ತಾಲೂಕಿನ 56 ಕೆರೆಗಳಿಗೆ ನೀರು ಹರಿಸುವುದು, ಮಧುಗಿರಿ ಬೆಟ್ಟಕ್ಕೆ ರೋಪ್‍ವೇ ಅಳವಡಿಸಿ ಪ್ರವಾಸೋಧ್ಯಮ ಕೇಂದ್ರವನ್ನಾಗಿ ಮಾಡುವುದು, ತಾಲೂಕಿನಲ್ಲಿ ಕೈಗಾರಿಕೆಗಳಿಗೆ ಆದ್ಯತೆ ನೀಡುವುದು ನನ್ನ ಕನಸಿನ ಯೋಜನೆಗಳು. ಈ ಯೋಜನೆಗಳನ್ನು ಜಾರಿಗೆ ತರಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಪಾವಗಡ-ಮಳವಳ್ಳಿ ರಸ್ತೆಗೆ ಟೋಲ್ ಅಳವಡಿಸಿರುವುದು ಅವೈಜ್ಞಾನಿಕ ಸರ್ವೀಸ್ ರಸ್ತೆ ನಿರ್ಮಿಸದೇ ಟೋಲ್ ಅಳವಡಿಸುವಂತಿಲ್ಲ. ಇದರಿಂದ ಜನತೆಗೆ ಹೊರೆಯಾಗುತ್ತದೆ. ಕೊರಟಗೆರೆ ತಾಲೂಕಿನಲ್ಲಿ ಎರಡು ಟೋಲ್ ಗಳು ನಿರ್ಮಾಣವಾಗಿದ್ದು, ಅದನ್ನು ವಿರೋಧಿಸುವುದು ಅಲ್ಲಿನ ಜನಪ್ರತಿನಿಧಿಗಳ ಕರ್ತವ್ಯ. ಮುಂದಿನ ದಿನಗಳಲ್ಲಿ ನಾನು ಶಾಸಕನಾಗಿ ಆಯ್ಕೆಯಾದರೆ ಟೋಲ್ ರದ್ದು ಗೊಳಿಸುತ್ತೇನೆ ಎಂದರು.

      ಸರ್ಕಾರಿ ಶಾಲೆಗಳ ಸಬಲೀಕರಣ :

       ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆ ಮೂರನೇ ಸ್ಥಾನ ಗಳಿಸಿದ್ದು, ಅಲ್ಪ ಹಿನ್ನಡೆಯಿಂದಾಗಿ ಮೊದಲನೇ ಸ್ಥಾನ ಕಳೆದುಕೊಳ್ಳಬೇಕಾಯಿತು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದು, ಮುಂದಿನ ದಿನಗಳಲ್ಲಿ ಮೊದಲನೇ ಸ್ಥಾನ ಗಳಿಸುವ ವಿಶ್ವಾಸವಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಗಳಿಸಿ ಇಂದು ಆರ್ಥಿಕವಾಗಿ ಸದೃಡವಾಗಿರುವ ಹಳೆಯ ವಿದ್ಯಾರ್ಥಿಗಳ ನೆರವಿನಿಂದ ತಾಲೂಕಿನ ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವ ಇರಾದೆಯಿದ್ದು, ಇದರ ಬಗ್ಗೆ ಮುಂದಿನ ದಿನಗಳಲ್ಲಿ ಯೋಜನೆ ರೂಪಿಸುತ್ತೇನೆ. ತಾಲೂಕಿನಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂಬ ಆರೋಪಗಳು ವ್ಯಕ್ತವಾಗುತ್ತಿದ್ದು, ಇದರ ಬಗ್ಗೆ ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ ಎಂದರು.

      ಕೋವಿಡ್ ವಿಚಾರದಲ್ಲಿ ಜನರ ನಿರೀಕ್ಷೆಯಂತೆ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಕೋವಿಡ್ ಕೇಂದ್ರಗಳಲ್ಲಿ ಬಹಳಷ್ಟು ಅನಾನುಕೂಲಗಳಿದ್ದು, ಸಮರ್ಪಕವಾಗಿ ಸೌಲಭ್ಯಗಳನ್ನು ಒದಗಿಸಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದರ ಬಗ್ಗೆ ಅಧಿಕಾರಿಗಳು ಬಹಳಷ್ಟು ನಿರ್ಲಕ್ಷ ವಹಿಸಿದ್ದಾರೆ. ಆಸ್ಪತ್ರೆಗಳಲ್ಲೂ ಹೊರಗೆ ಎಲ್ಲಾ ಚೆನ್ನಾಗಿದೆ ಎಂದು ಕಂಡು ಬಂದರೂ ವಾಸ್ತವಾಂಶವೇ ಬೇರೆಯಿದೆ. ವೈದ್ಯಾಧಿಕಾರಿಗಳು ಪ್ರಾಣ ಭಯದಿಂದ ರೋಗಿಗಳನ್ನು ಸಮರ್ಪಕವಾಗಿ ಪರೀಕ್ಷಿಸಲು ಮುಂದೆ ಬರುತ್ತಿಲ್ಲ ಎಂದರು.

     ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಕ್ರಿಬ್ಕೋ ನಿರ್ದೇಶಕ ಆರ್. ರಾಜೇಂದ್ರ, ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎನ್. ಗಂಗಣ್ಣ, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ. ನಂಜುಂಡಯ್ಯ, ಸದಸ್ಯರಾದ ಮಂಜುನಾಥ್ ಆಚಾರ್, ಲಾಲಾಪೇಟೆ ಮಂಜುನಾಥ್, ತಿಮ್ಮರಾಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್. ರಾಜಗೋಪಾಲ್, ತುಮುಲ್ ಮಾಜಿ ಅಧ್ಯಕ್ಷರಾದ ಬಿ. ನಾಗೇಶ್ ಬಾಬು, ಬಿ.ಎನ್. ನರಸಿಂಹಮೂರ್ತಿ ಇತರರಿದ್ದರು.

(Visited 3 times, 1 visits today)

Related posts

Leave a Comment