ಗುಬ್ಬಿ :

      ತೀವ್ರ ಹತಾಶೆಯಲ್ಲಿರುವ ಕೃಷಿಕ ವರ್ಗವನ್ನು ಪ್ರೋತ್ಸಾಹಿಸುವ ಯೋಜನೆಗಳನ್ನು ರೂಪಿಸದೆ ವರ್ಷಕ್ಕೆ 6 ಸಾವಿರ ರೂಗಳನ್ನು ನೀಡುವ ಕೇಂದ್ರ ಬಜೆಟ್ ರೈತರಿಗೆ ಮತ್ತಷ್ಟು ನಿರಾಸೆ ಮೂಡಿಸಿದೆ ಎಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಪ್ರತಿಕ್ರಿಯಿಸಿದರು. 

      ತಾಲ್ಲೂಕಿನ ನಾಗಸಂದ್ರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಕೇಂದ್ರ ಬಜೆಟ್ ಬಗ್ಗೆ ಮಾತನಾಡಿದ ಅವರು ಸ್ವಾಭಿಮಾನ ಬೆಳೆಸಿಕೊಂಡ ರೈತರಿಗೆ ಹಣದ ಆಮೀಷೆ ತೋರುವ ಅಗತ್ಯವಿಲ್ಲ. ಕೃಷಿಗೆ ಪೂರಕ ಯೋಜನೆಗಳು, ಕೃಷಿ ಬೆಳೆಗಳಿಗೆ ಬೆಂಬಲ ಮತ್ತು ವೈಜ್ಞಾನಿಕ ಬೆಲೆ ನಿಗದಿ ಮಾಡುವ ಭರವಸೆಯಲ್ಲಿದ್ದ ಸಣ್ಣ, ಮಧ್ಯಮ ರೈತರ ಮೂಗಿಗೆ ತುಪ್ಪ ಸವರುವ ಕಾರ್ಯ ಮಾಡಲಾಗಿದೆ ಎಂದು ಟೀಕಿಸಿದರು.

      ಕೇಂದ್ರದಲ್ಲಿ ಆಡಳಿತರೂಢ ಬಿಜೆಪಿ ಈ ಮೊದಲು ಬಿಪಿಎಲ್ ಕಾರ್ಡ್‍ದಾರರ ಖಾತೆಗೆ 15 ಲಕ್ಷ ರೂಗಳ ಆಸೆ ತೋರಿ ನಿರಾಸೆ ಮಾಡಿತ್ತು. ಮತ್ತೆ ಅದೇ ಪ್ರವೃತ್ತಿ ಮುಂದುವರೆದು 6 ಸಾವಿರ ರೂಗಳ ಆಮೀಷಯೊಡ್ಡಿರುವುದು ವಿಪರ್ಯಾಸ ಎನಿಸಿದೆ ಎಂದ ಅವರು ತಾಲ್ಲೂಕಿನಲ್ಲಿ ಕೋಟ್ಯಾಂತರ ರೂಗಳ ಅಭಿವೃದ್ದಿಗೆ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ರಸ್ತೆಗಳಿಗೆ ಮೊದಲ ಆದ್ಯತೆ ನೀಡಿ 300 ಕೋಟಿಗಳ ದೊಡ್ಡ ಕ್ರಿಯಾ ಯೋಜನೆ ರೂಪಿಸಲಾಗಿದೆ. ಆರಂಭದಲ್ಲಿ ನಿಟ್ಟೂರು ಚೇಳೂರು ರಸ್ತೆಗೆ 30 ಕೋಟಿ ರೂಗಳು, ಹಾಗಲವಾಡಿ ಗಡಿಭಾಗದ ರಸ್ತೆಗೆ 15 ಕೋಟಿ ರೂ ಮಂಜೂರು ಮಾಡಿ ಕೆಲಸಗಳಿಗೆ ಚಾಲನೆ ನೀಡಲಾಗಿದೆ ಎಂದರು.

      ಕಳೆದ ಮೂರು ದಿನಗಳಿಂದ ಅಭಿವೃದ್ದಿ ಕೆಲಸಗಳಿಗೆ ಅಡಿಗಲ್ಲು ಇಡಲಾಗುತ್ತಿದೆ. ಗೋಪಾಲಪುರ, ಕಡಬ, ನಾಗಸಂದ್ರ ಶಾಲೆಗಳಿಗೆ ತಲಾ 50 ಲಕ್ಷ ರೂಗಳ ಕೊಠಡಿಗಳು, ಕುಡಿಯುವ ನೀರು ಘಟಕ, ಕಾಂಪೌಂಡ್ ನಿರ್ಮಾಣ ಸೇರಿದಂತೆ ಮೂಲ ಸವಲತ್ತು ಒದಗಿಸಲಾಗುವುದು. ಈ ಜತೆಗೆ 35 ಲಕ್ಷ ರೂಗಳ ಗ್ರಾಮೀಣ ಸಂತೆಯನ್ನು ನಿಟ್ಟೂರಿನಲ್ಲಿ ನಿರ್ಮಿಸಲಾಗುವುದು. ವಿರೂಪಾಕ್ಷಪುರ ಗ್ರಾಮದಲ್ಲಿ ಸಿಸಿ ರಸ್ತೆಗೆ 40 ಲಕ್ಷ ರೂಗಳ ಕೆಲಸಕ್ಕೆ ಚಾಲನೆ ನೀಡಲಾಗಿದೆ ಎಂದ ಅವರು ಶೈಕ್ಷಣಿಕ ಪ್ರಗತಿಯ ಚಿಂತನೆಯಲ್ಲಿ ಸರ್ಕಾರ ತುಮಕೂರು ಶೈಕ್ಷಣಿಕ ಜಿಲ್ಲೆಗೆ 218 ಕೋಟಿ ರೂಗಳನ್ನು ನೀಡಲಾಗಿದೆ. ಈ ಹಣವನ್ನು ಸಂಪೂರ್ಣ ಶಾಲೆ ಅಭಿವೃದ್ದಿಗೆ ಬಳಸಲಾಗುವುದು ಎಂದರು.

      ಇದೇ ಸಂದರ್ಭದಲ್ಲಿ ತೊರೇಹಳ್ಳಿ, ಗೋಪಾಲಪುರ, ಕಡಬ, ವಿರೂಪಾಕ್ಷಪುರ, ನಿಟ್ಟೂರಿನಲ್ಲಿ ವಿವಿಧ ಕಾಮಗಾರಿಗೆ ಸಣ್ಣ ಕೈಗಾರಿಕಾಆ ಸಚಿವ ಎಸ್.ಆರ್.ಶ್ರೀನಿವಾಸ್ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ತಾಪಂ ಉಪಾಧ್ಯಕ್ಷೆ ಜಿ.ಕಲ್ಪನಾ, ಸದಸ್ಯರಾದ ರೆಹಮತ್‍ವುಲ್ಲಾ, ಎಪಿಎಂಸಿ ಅಧ್ಯಕ್ಷ ಜಿ.ಟಿ.ರೇವಣ್ಣ, ಕೆಎಂಎಫ್ ನಿರ್ದೇಶಕ ಜಿ.ಚಂದ್ರಶೇಖರ್, ಮುಖಂಡರಾದ ಪ್ರತಾಪ್, ತಿಮ್ಮೇಗೌಡ, ಲೋಕೋಪಯೋಗಿ ಇಲಾಖೆ ಎಇಇ ಸುರೇಶ್ ಇತರರು ಇದ್ದರು.

 

(Visited 19 times, 1 visits today)