ಪಾವಗಡ:

      ತಾಲ್ಲೂಕಿನ ನಿಡಗಲ್ ಹೋಬಳಿ ಗುಜ್ಜನಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಟಿ.ಎನ್.ಬೆಟ್ಟ ಗ್ರಾಮದ ತಿಮ್ಮಪ್ಪನ ಬೆಟ್ಟದ ತಪ್ಪಲಿನಲ್ಲಿರುವ ಸನಾತನ ಪುಷ್ಕರಣಿಯನ್ನು ಕಳೆದ ಒಂದು ವಾದದಿಂದ ಸ್ವಚ್ಛಮಾಡಲಾಗುತ್ತಿದೆ. ಇದರಲ್ಲಿ 18 ಮತ್ತು19 ನೇ ಶತಮಾನದ ನಾಣ್ಯಗಳು ದೊರೆತಿವೆ. ಈ ಅಪರೂಪದ ನಾಣ್ಯಗಳು ದೊರೆತಿರುವುದನ್ನು ಪೆಮ್ಮನಹಳ್ಳಿಯ ಗ್ರಾಮಸ್ಥರು ತಾಲ್ಲೂಕು ಆಡಳಿತದ ಗಮನಕ್ಕೆ ತಂದ ಕಾರಣ ಗುರುವಾರ ತಹಸಿಲ್ದರ್ ವರದರಾಜ್ ಅವರು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು.

      ನಂತರ ಮಾತನಾಡುತ್ತಾ ಪುರಾತನ ಪುಷ್ಕರಣಿಯನ್ನು ಸ್ವಚ್ಛಗೊಳಿಸುವ ವೇಳೆ ಈ ಅಪರೂಪದ ನಾಣ್ಯಗಳು ದೊರೆತಿವೆ ಇವುಗಳನ್ನು ಗ್ರಾಮಸ್ಥರು ಸಂಗ್ರಹಿಸಿ ಶ್ರೀರಾಮನ ದೇವಸ್ಥಾನದಲ್ಲಿ ಇಟ್ಟಿದ್ದರು. ನಂತರ ಈ ಸಂಂಬಂಧ ಮೇಲಾಧಿಕಾರಿಗಳ ಗಮನಕ್ಕೆ ತಂದು ಅವರ ಮಾರ್ಗದರ್ಶನದಂತೆ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.

     ಈ ದೇವಸ್ಥಾನದ ಹತ್ತಿರ ಅನೇಕ ಮೂಲಭೂತ ಸೌಕರ್ಯಗಳ ಕೊರತೆ ಇರುವುದರಿಂದ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಎಲ್ಲಾ ರೀತಿಯ ಸಮಸ್ಯೆಗಳನ್ನು ಈಡೇರಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

     ಪೆಮ್ಮನಹಳ್ಳಿಯ ವೀರಕ್ಯಾತಯನವರು ಮಾತನಾಡುತ್ತಾ, ಬೆಟ್ಟದಲ್ಲಿ ತಿಮ್ಮಪ್ಪನ ದೇಗುಲವಿದೆ. ಇದಕ್ಕೆ ಎರಡನೇ ತಿರುಪತಿ ಎಂಬ ಪ್ರತೀತಿಯು ಇದೆ. ಶ್ರಾವಣ ಮಾಸದಲ್ಲಿ ದೂರದೂರುಗಳಿಂದ ಸಾವಿರಾರು ಭಕ್ತರು ಇಲ್ಲಿನ ತಿಮ್ಮಪ್ಪನ ದರ್ಶನ ಪಡೆಯಲು ಬರುತ್ತಾರೆ. ಆ ವೇಳೆ ಇಲ್ಲಿನ ಪುರಾತನ ಕಾಲದ ಪುಷ್ಕರಣಿಯಲ್ಲಿ ಭಕ್ತರು ಹರಕೆ ಮಾಡಿಕೊಂಡು ನಾಣ್ಯಗಳನ್ನು ಭಕ್ತಿಯಿಂದ ಹಾಕಿದರೆ ತಮ್ಮ ಹರಕೆಗಳು ಈಡೇರುತ್ತವೆ ಎನ್ನುವ ಅಪಾರ ನಂಬಿಕೆ ಇಲ್ಲಿಗೆ ಬರುವ ಭಕ್ತರದ್ದಾಗಿದೆ.

     ಈ ಕಲ್ಯಾಣಿಯ ನೀರು ಸ್ವಚ್ಛತೆ ಕಾಣದೆ ಇರುವುದರಿಂದ ಮಲೀನಗೊಂಡು ವಾಸನೆ ಬರುತಿತ್ತು. ಇದನ್ನು ಮನಗೊಂಡು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದಾಗ 18 ಮತ್ತು 19ನೇ ಶತಮಾನದ ನಾಣ್ಯಗಳು ದೊರೆತಿವೆ. ವಿಜಯನಗರ ಅರಸರು ಮತ್ತು ಮೈಸೂರು ಅರಸರ ಹಾಗೂ ಬ್ರಿಟಿಷರ ಕಾಲದ ನಾಣ್ಯಗಳು ಇದಾಗಿವೆ. ಇವೆಲ್ಲವೂ 18 ಮತ್ತು 19 ನೇ ಶತಮಾನದಲ್ಲಿ ಟಂಕಿಸಲಾದ ನಾಣ್ಯಗಳು ಎಂದು ತಿಳಿಸಿದರು.
ದೇವಸ್ಥಾನದ ಅರ್ಚಕರಾದ ರಾಜಕುಮಾರ್ ಮಾತನಾಡುತ್ತಾ, ತಿಮ್ಮಳನಾಯಕನ ಆಳ್ವಿಕಾವಧಿಯಲ್ಲಿ ತಿಮ್ಮಪ್ಪನ ಜಾತ್ರೋತ್ಸವ ತುಂಬಾ ಅದ್ಧೂರಿಯಾಗಿ ನಡೆಯುತಿತ್ತು. ಅಂದಿನಿಂದ ಇಂದಿನವರೆಗೂ ಪ್ರತಿ ಶನಿವಾರ ವಿಶೇಷ ಪೂಜಾ ಕೈಂಕರ್ಯಗಳು ಶ್ರಧ್ಥೆ, ಭಕ್ತಿ, ಮಾಡಲಾಗುತ್ತದೆ.

      ಜೊತೆಗೆ ಇಲ್ಲಿರುವ ಕೆರೆ -ಕಟ್ಟೆಗಳು ಹಾಗೂ ಭಕ್ತರಿಗೆ ಕುಡಿಯುವ ನೀರಿಗಾಗಿ ಈ ಪುಷ್ಕರಣಿಯನ್ನ ತಿಮ್ಮಳನಾಯಕನ ಕಾಲದಲ್ಲಿಯೇ ನಿರ್ಮಾಣ ಮಾಡಿರಬಹುದು ಎಂದು ಇತಿಹಾಸಕಾರರ ಅಭಿಪ್ರಾಯ. ಒಟ್ಟಾರೆ ಇತಿಹಾಸದ ಸಾರವನ್ನ ತನ್ನ ಒಡಲಲ್ಲಿಟ್ಟುಕೊಂಡಿರುವ ಈ ತಿಮ್ಮಪ್ಪನ ಬೆಟ್ಟವನ್ನು ಪುರಾತತ್ವ ಇಲಾಖೆ ಹಾಗೂ ಜನಪ್ರತಿನಿಧಿಗಳು ಗಮನಹರಿಸಿ ರಕ್ಷಿಸಿ ಇಲ್ಲಿನ ಇತಿಹಾಸವನ್ನ ಸಂರಕ್ಷಿಸಬೇಕಿದೆ ಎಂದು ತಿಳಿಸಿದರು.

     ಈ ಸಂದರ್ಭದಲ್ಲಿ ಉಪತಹಶೀಲ್ದಾರರು ತಿಪ್ಪೇಸ್ವಾಮಿ, ಪಿ ಡಿ ಓ ರವಿ ಜಾಮಗೊಂಡ, ವಿ.ಎ.ರಾಜೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪದ್ಮಾವತಿ ಓಬಳೇಶ್ , ಸದಸ್ಯರಾದ ರಂಗಸ್ವಾಮಿ , ಗ್ರಾಮಸ್ಥರಾದ ಹನುಮಂತರಾಯಪ್ಪ, ಶಿಲ್ಪಾ ಚಾರಿ, ಧನಂಜಯ, ಚಂದ್ರಶೇಖರ್, ನಾಗಣ್ಣ, ಮಂಜುನಾಥ್, ವಿನಾಯಕ ಗೆಳೆಯರ ಬಳಗದ ಸದಸ್ಯರು ಹಾಗೂ ಅನೇಕ ಗ್ರಾಮಸ್ಥರು ಪಾಲ್ಗೊಂಡಿದ್ದರು.

(Visited 36 times, 1 visits today)