ತುಮಕೂರು:

      ರೈತ ಕಾರ್ಮಿಕರು ಹಾಗೂ ಜನಸಾಮಾನ್ಯರಿಗೆ ಮಾರಕವಾದ ರೀತಿಯಲ್ಲಿ ಕಾಯ್ದೆಗಳ ಬದಲಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕ್ರಮದ ವಿರುದ್ಧವಾಗಿ ನ.26ರಂದು ಅಖಿಲ ಭಾರತ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆನೀಡಲಾಗಿದೆ.

      ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯನ್ನು ಮಾಡುತ್ತಿದ್ದು, ಸಾಮಾನ್ಯ ಕುಟುಂಬಕ್ಕೆ ಹೊರೆಯಾಗಿ ಪರಿಣಮಿಸಿರುವ ವಿದ್ಯುತ್ ದರ ಏರಿಕೆಯನ್ನು ಹಿಂಪಡೆಯಬೇಕು, ರಕ್ಷಣಾ, ಆರೋಗ್ಯ, ರೈಲ್ವೆ, ವಿದ್ಯುತ್, ವಿಮಾ, ಬ್ಯಾಂಕ್ ಮತ್ತು ರಕ್ಷಣಾ ವಲಯದ ಕೈಗಾರಿಕೆಗಳ ಖಾಸಗೀಕರಣವನ್ನು ವಿರೋಧಿಸಿ, ಕನಿಷ್ಠ ವೇತನ, ಮಾಸಿಕ 21 ಸಾವಿರ ಕನಿಷ್ಠ ಕೂಲಿ, ಗುತ್ತಿಗೆ ನೌಕರರ ಕಾಯಂಮಾತಿಗೆ ಶಾಸನ ರೂಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕೇಂದ್ರ ಜಂಟಿ ಕಾರ್ಮಿಕ ಸಂಘಟನೆಗಳ ಒಕ್ಕೂಟದಿಂದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ.

      ಅಖಿಲ ಭಾರತ ಮುಷ್ಕರವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಆವರಣದಲ್ಲಿರುವ ರಂಗತಾಲೀಮು ಕೇಂದ್ರದಲ್ಲಿ ನಡೆದ ಜೆಸಿಟಿಯು ಜಿಲ್ಲಾ ಸಮಾವೇಶದಲ್ಲಿ ಒಕ್ಕೂರಲಿನಿಂದ ತೀರ್ಮಾನಿಸಲಾಯಿತು.

     ಸಮಾವೇಶದಲ್ಲಿ ಮಾತನಾಡಿದ ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್ ಅವರು, ಸರ್ಕಾರಗಳು ಕೋವಿಡ್ ಅನ್ನು ಮುಂದು ಮಾಡಿ, ಜನ ವಿರೋಧಿ ಶಾಸನಗಳನ್ನು ತರಲು ಬಳಸಿಕೊಂಡು, ರೈತ ಕಾರ್ಮಿಕರಿಗೆ ದ್ರೋಹ ಬಗೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

     ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಪ್ರಬಲ ಜನ ಪ್ರತಿರೋಧ ಮೂಡಿಬರಬೇಕಾಗಿದೆ, ಈ ನಿಟ್ಟಿನಲ್ಲಿ ಕಾರ್ಮಿಕ ಸಂಘಟನೆಗಳು ಹಾಗೂ ಕಾರ್ಮಿಕರು ಅಖಿಲ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ಭಾಗಿಯಾಗುವ ಮೂಲಕ ಕೈಜೋಡಿಸುವಂತೆ ಕರೆ ನೀಡಿದರು.

      ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಅವರು ಮಾತನಾಡಿ, ಸರ್ಕಾರವು ಆರ್ಥಿಕ ಪುನಶ್ಚೇತನ ಪ್ಯಾಕೇಜ್‍ಗಳನ್ನು ಬಂಡವಾಳಗಾರರ ಕೈ ಸೇರಿಸುತ್ತಿದೆ. ಅದರ ಬದಲು ಜನಸಾಮಾನ್ಯರ ಕೈಗೆ ಸರ್ಕಾರದ ಆರ್ಥಿಕ ಪ್ಯಾಕೇಜ್‍ಗಳು ದೊರೆತರೆ, ಜನರ ಕೊಳ್ಳುವ ಶಕ್ತಿ ಹೆಚ್ಚಳವಾಗಲಿದ್ದು, ಆ ಮೂಲಕ ಆರ್ಥಿಕತೆ ನಿಜವಾಗಿ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

     ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಸಿ.ಯತಿರಾಜು ಅವರು ಮಾತನಾಡಿ, ಸುಳ್ಳುಗಳು ವಿಜೃಂಭಿಸುವ ಈ ಕಾಲದಲ್ಲಿ ಸತ್ಯೋತ್ತರ ಕಾಲ, ಆತ್ಮ ವಂಚನೆಯ ಕಾಲವಾಗುತ್ತಿದೆ. ಆಗಾಗಿ ಹೋರಾಟಗಳ ದಿಕ್ಕು ತಪ್ಪಿಸುವ ಕುತಂತ್ರಗಳ ಅರಿತು, ದೃಢವಾಗಿ ಮುಂದೆ ಸಾಗಲು ರೈತ ಕಾರ್ಮಿಕರ ಐಕ್ಯ ಚಳವಳಿ ಅಗತ್ಯವೆಂದು ಹೇಳಿದರು.

     ಎಐಯುಟಿಯುಸಿ ಮಂಜುನಾಥ್ ಮಾತನಾಡಿ ಶ್ರೀಮಂತರ ಬೆಳೆಸುವ ನೀತಿಗಳ ವಿರುದ್ಧ ಕಾರ್ಮಿಕ ವರ್ಗ ಒಂದಾಗಿ ಹೋರಾಡಲು ಕರೆ ನೀಡಿದರು. ಐಎನ್‍ಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜು ಅವರು ಮಾತನಾಡಿ ಕಾರ್ಮಿಕ ಕಲ್ಯಾಣ ಮರೀಚಿಕೆಯಾಗುತ್ತಿದೆ ಎಂದರು.

      ಸಮಾವೇಶದ ಅಧ್ಯಕ್ಷ ಮಂಡಳಿಯಲ್ಲಿ ಸಿಐಟಿಯು ಸೈಯದ್ ಮುಜೀಬ್, ಎಐಟಿಯುಸಿ ಗೀರೀಶ್, ಎಐಯುಟಿಯುಸಿ ಮಂಜುಳಾ ಅವರು ಮಾತನಾಡಿದರು. ಆರಂಭದಲ್ಲಿ ಸಿಐಟಿಯು ಜಿ.ಕಮಲಾ ಸ್ವಾಗತಿಸಿದರು, ಕೊನೆಯಲ್ಲಿ ಎಐಟಿಯುಸಿಯ ಕಂಬೇಗೌಡ ವಂದಿಸಿದರು. ಸಮಾವೇಶದಲ್ಲಿ ಹಿರಿಯರಾದ ಟಿ.ಆರ್.ರೇವಣ್ಣ, ಶಿವಣ್ಣ, ಎನ್.ಕೆ.ಸುಬ್ರಮಣ್ಯ, ಅಂಗನವಾಡಿ ನೌಕರರ ಸಂಘದ ಗುಲ್ಜಾರ್ ಬಾನು, ಕಟ್ಟಡ ಕಾರ್ಮಿಕರ ಸಂಘದ ಬಿ.ಉಮೇಶ್, ನಾಗಣ್ಣ, ನಿಸಾರ್ ಅಹ್ಮದ್ ಇತರರು ಇದ್ದರು.

(Visited 11 times, 1 visits today)