ತುಮಕೂರು:
ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ ರಾಜನಹಳ್ಳಿಯ ಶ್ರೀವಾಲ್ಮೀಕಿ ಮಹರ್ಷಿಗಳು ನಡೆಸುತ್ತಿರುವ ಧರಣಿಗೆ ಬೆಂಬಲ ವ್ಯಕ್ತಪಡಿಸಿ ಇಂದು ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಟೌನ್‍ಹಾಲ್ ವೃತ್ತದಲ್ಲಿ ಸಮಾವೇಶಗೊಂಡ ನೂರಾರು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮುಖಂಡರುಗಳು ಸರಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಅಶೋಕ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಹಾಗೂ ಶಬರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಶ್ರೀಮತಿ ಶಾಂತಲಾ ರಾಜಣ್ಣ,ಮೀಸಲಾತಿ ಹೆಚ್ಚಳ ಮಾಡಿ ಎಂದು ನಮ್ಮ ಸಂವಿಧಾನ ಬದ್ದವಾದ ಹಕ್ಕನ್ನು ಕೇಳುತ್ತಿದ್ದೆವೆಯೇ ಹೊರತು ಭೀಕ್ಷೆಯನ್ನಲ್ಲ.ಸಂವಿಧಾನದ ಪ್ರಕಾರ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹಂಚಿಕೆಯಾಗಬೇಕು. ಈ ಮೊದಲು ನಾವು ಮೀಸಲಾತಿ ಹೆಚ್ಚಳ ಮಾಡಿ ಎಂದು ಕೇಳಿದರೆ ಅಂಕಿ ಅಂಶಗಳಿಲ್ಲ ಎಂದು ಹೇಳುತ್ತಿದ್ದರು. ಆದರೆ ಈಗ ಸರಕಾರದ ಮುಂದೆ ನ್ಯಾ.ನಾಗಮೋಹನ್‍ದಾಸ್ ಅವರ ವರದಿ ಇದೆ. ಆ ವರದಿ ಪ್ರಕಾರ ಪರಿಶಿಷ್ಟ ಜಾತಿಗೆ ಶೇ17.5 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ7.5 ಮೀಸಲಾತಿ ನೀಡಲು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ ವರದಿ ಬಂದು 8 ತಿಂಗಳು ಕಳೆದರೂ ಸರಕಾರ ನಿರ್ಲಕ್ಷ ವಹಿಸಿರುವುದು ಸರಿಯಲ್ಲ.ಆದರೆ ಯಾವುದೇ ವರದಿ ಇಲ್ಲದೆ ಶೇ 3 ರಷ್ಟು ಜನಕ್ಕೆ ಶೇ10 ರ ಮೀಸಲಾತಿ ನೀಡಲು ಸಾಧ್ಯವಾಯಿತು ಎಂದು ಪ್ರಶ್ನಿಸಿದ ಅವರು, ಕೂಡಲೇ ನಾಗಮೋಹನ್ ದಾಸ್ ವರದಿಯನ್ನು ಜಾರಿಗೆ ತರಬೇಕು. ಇಲ್ಲದಿದ್ದಲ್ಲಿ ಇಂದು ಸಾಂಕೇತಿಕವಾಗಿರುವ ಹೋರಾಟ ಮುಂದೊಂದು ದಿನ ಉಗ್ರ ಸ್ವರೂಪ ಪಡೆದುಕೊಳ್ಳಲಿದ್ದು, ಅಂದು ಆಗುವ ಅನಾಹುತಗಳಿಗೆ ಸರಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇಂದು ವಾಲ್ಮೀಕಿ ಆಶ್ರಮದ ಶ್ರೀಪ್ರಸನ್ನಾನಂದ ಸ್ವಾಮೀಜಿಗಳ ಹೋರಾಟಕ್ಕೆ ಬೆಂಬಲವಾಗಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸುತಿದ್ದೇವೆ. ಈಗಲೂ ನೀವು ನಿರ್ಲಕ್ಷವಹಿಸಿದರೆ ಶೇ25ಕ್ಕಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಎಸ್ಸಿ, ಎಸ್ಟಿ ಸಮುದಾಯಗಳು ಒಗ್ಗೂಡಿದರೆ ನಿಮ್ಮ ಸರಕಾರಕ್ಕೆ ಉಳಿಗಾಲವಿಲ್ಲ ಎಂದು ಶಾಂತಲಾ ರಾಜಣ್ಣ ನುಡಿದರು.
ಬಿಎಸ್ಪಿ ಯ ರಾಜಸಿಂಹ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರಕಾರ ಸಂವಿಧಾನ ಶಿಲ್ಪಿ ಅಂಬೇಡ್ಕರ ಅವರನ್ನು ಮುಂದಿಟ್ಟುಕೊಂಡೇ ಶೋಷಿತ ಸಮುದಾಯಗಳಿಗೆ ಇದುವರೆಗೂ ದೊರೆಯುತ್ತಿದ್ದ ಒಂದೊಂದೆ ಸವಲತ್ತುಗಳನ್ನು ಕಿತ್ತುಕೊಳ್ಳುತ್ತಿದೆ. ಆ ಮೂಲಕ ಪರೋಕ್ಷವನ್ನು ಸಂವಿಧಾನದಲ್ಲಿ ಬದಲಾವಣೆಗಳನ್ನು ತರುತ್ತಿದೆ ಎಂದರು. ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಪಿ.ಎನ್.ರಾಮಯ್ಯ ಮಾತನಾಡಿ, ಹತ್ತಾರು ವರ್ಷಗಳಿಂದ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಿ ಎಂಬ ಹೋರಾಟ ನಡೆಸುತ್ತಾ ಬಂದಿದ್ದರೂ ಸರಕಾರಗಳು ಹಿಂದೇಟು ಹಾಕುತ್ತಿವೆ ಎಂದರು.
ಪ್ರತಿಭಟನೆಗೂ ಮುನ್ನ ಟೌನ್‍ಹಾಲ್ ವೃತ್ತದಲ್ಲಿ ಹೋರಾಟವನ್ನು ಬೆಂಬಲಿಸಿ ಮಾತನಾಡಿದ ಶಾಸಕ ಜಿ.ಬಿ.ಜೋತಿಗಣೇಶ್, ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಮೀಸಲಾತಿ ಹೆಚ್ಚಳ ಮಾಡಬೇಕೆಂಬುದಕ್ಕೆ ನಮ್ಮ ಬೆಂಬಲವಿದೆ. ಈ ನಿಟ್ಟಿನಲ್ಲಿ ಸದನದಲ್ಲಿ ಪ್ರಸ್ತಾಪಿಸುವುದಲ್ಲದೆ, ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸುವಂತೆ ಸರಕಾರದ ಮೇಲೆ ಒತ್ತಡ ತರಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಪಿ.ಎನ್.ರಾಮಯ್ಯ, ಪ್ರತಾಪ್ ಮದಕರಿ, ವಾಲ್ಮೀಕಿ ವಿದ್ಯಾಭಿವೃದ್ದಿ ಸಂಘದ ಅಧ್ಯಕ್ಷ ಪುರುಷೋತ್ತಮ್, ನಿವೃತ್ತ ಅಧಿಕಾರಿ ಪಿ.ಬಿ.ಬಸವರಾಜು, ದಲಿತ ಮುಖಂಡರಾದ ಆಟೋ ಶಿವರಾಜು, ಎಂ.ವಿ.ರಾಘವೇಂದ್ರಸ್ವಾಮಿ, ರಂಜನ್, ಬಂಡೆಕುಮಾರ್, ಕುಪ್ಪೂರು ರಂಗಪ್ಪನಾಯಕ, ಕ್ಯಾತ್ಸಂದ್ರ ರವಿ, ರಾಜೇಂದ್ರನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.

(Visited 13 times, 1 visits today)