ತುಮಕೂರು:
ಯುವತಿ-ಯುವಕರಿಗೆ ಸೂಕ್ತ ಕೌಶಲ್ಯ ತರಬೇತಿ ನೀಡಿ, ಅಧಿಕೃತ ಪ್ರಮಾಣ ಪತ್ರ ವಿತರಿಸಿ, ಅವರ ಭವಿಷ್ಯ ಉಜ್ವಲವಾಗುವಂತೆ ನೋಡಿಕೊಳ್ಳುವುದು ಜಿಲ್ಲಾ ಕೌಶಲ್ಯ ಸಮಿತಿಯ ಜವಾಬ್ದಾರಿಯಾಗಿದೆ ಎಂದು ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ. ವಿದ್ಯಾಕುಮಾರಿ ತಿಳಿಸಿದರು.
ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕಾರ್ಯಕ್ರಮಗಳ ಅನುಷ್ಟಾನದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ಯೋಜನೆಗಳು ಜಿಲ್ಲೆಯಲ್ಲಿ ವಿಫುಲ ಉದ್ಯೋಗದ ಅವಕಾಶ ತೆರೆದಿವೆ. ಸ್ಥಳಿಯ ಯುವತಿ-ಯುವಕರಿಗೆ ಹೆಚ್ಚಿನ ಅವಕಾಶ ಕಲ್ಪಿಸಿ, ಉನ್ನತ ಗುಣಮಟ್ಟದ ಕೈಗಾರಿಕೆಗಳು ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಂದ ಯುವತಿ-ಯುವಕರಿಗೆ ತರಬೇತಿ ನೀಡಬೇಕು. ದುರ್ಬಲ ಆರ್ಥಿಕ ಪರಿಸ್ಥಿತಿಯ ಕುಟುಂಬದ ವಿದ್ಯಾರ್ಥಿಗಳಿಗೆ ಈ ತರಬೇತಿಯು ಅವರ ಭವಿಷ್ಯವನ್ನು ಉತ್ತಮವಾಗಿ ರೂಪಿಸುತ್ತದೆ, ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬದ ಯುವಕರಿಗೆ ಕೌಶಲ್ಯ ಅಭಿವೃದ್ಧಿಯ ತರಬೇತಿ ನೀಡಿ ಅವರ ಜೀವನೋಪಾಯಕ್ಕೆ ಸಹಾಯವಾಗುವಂತೆ ನೋಡಿಕೊಳ್ಳಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಪಿ.ಎಂ.ಕೆ.ವಿ.ವೈ., ರಾಜ್ಯ ಸರ್ಕಾರದ ಸಿ.ಎಂ.ಕೆ.ಕೆ.ವೈ. ಯೋಜನೆಯಡಿ ಎಲ್ಲಾ ವಲಯದ ಕೆಲಸಗಾರರಿಗೆ ಆಯಾ ಕ್ಷೇತ್ರಕ್ಕನುಗುಣವಾಗಿ ತರಬೇತಿ ನೀಡಿ ಅವರ ವೃತ್ತಿಪರತೆಯನ್ನು ಹೆಚ್ಚಿಸುವ ಜವಾಬ್ದಾರಿ ಜಿಲ್ಲಾ ಕೌಶಲ್ಯ ಸಮಿತಿಯ ಉಪ ಸಮಿತಿಯದ್ದಾಗಿದೆ, ತರಬೇತಿಯ ಲಾಭ ಅರ್ಹÀ ಫಲಾನುಭವಿಗಳಿಗೆ ಸಿಗುವಂತೆ ನೋಡಿಕೊಳ್ಳಬೇಕು ಹಾಗೂ ಎಲ್ಲಾ ಇಲಾಖೆಗಳ ಮುಖ್ಯಸ್ಥರು ತಮ್ಮ ತಮ್ಮ ಇಲಾಖೆಗಳಡಿ ನಿಗದಿಪಡಿಸಿರುವ ಕಾರ್ಯಕ್ರಮಗಳ ಭೌತಿಕ ಮತ್ತು ಆರ್ಥಿಕ ಗುರಿಯನ್ನು ಕಾಲಮಿತಿಯೊಳಗೆ ಸಾಧಿಸಿ, ಶೇ.100ರಷ್ಟು ಪ್ರಗತಿ ಸಾಧಿಸುವಂತೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೂಚಿಸಿದರು.
ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಕೆ. ಶ್ರೀನಿವಾಸ ಇವರು ಪಿಪಿಟಿ ಮೂಲಕ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸದರಿ ಸಭೆಯಲ್ಲಿ ಸಿ.ಎಂ.ಕೆ.ಕೆ.ವೈ. ಮತ್ತು ಪಿ.ಎಂ.ಕೆ.ವಿ.ವೈ. ಯೋಜನೆಗಳಡಿ ಆಯೋಜಿಸಿರುವ ತರಬೇತಿ ಕಾರ್ಯಕ್ರಮಗಳು, ಆರೋಗ್ಯ ಕ್ಷೇತ್ರದ ತರಬೇತಿಗಳು, ವಿವಿಧ ಇಲಾಖೆಗಳಡಿ ಆಯೋಜಿಸಲಾಗಿರುವ ಕೌಶಲ್ಯ ತರಬೇತಿ ಮತ್ತು ಸ್ವಯಂ ಉದ್ಯೋಗ ಕಾರ್ಯಕ್ರಮಗಳು ಜಿಲ್ಲಾ ಕೌಶಲ್ಯ ಸಮಿತಿಯ ಉಪ ಸಮಿತಿಗಳ ಪ್ರಗತಿ ಹಾಗೂ ಪಿ.ಎಂ.ಸ್ವನಿಧಿ ಮತ್ತು ಡೇ-ನಲ್ಮ್ ಅಭಿಯಾನದ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಕೆ. ಅಂಜಿನಪ್ಪ, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿಗಳು, ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 23 times, 1 visits today)