ತುಮಕೂರು:
ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಸೋಮವಾರ ಶಿವೈಕ್ಯರಾಗಿದ್ದು, ಇಂದು ಅವರ ಕ್ರಿಯಾ ಸಮಾಧಿಯ ವಿಧಿ ವಿಧಾನಗಳು ವೀರಶೈವ ಲಿಂಗಾಯಿತ ಆಗಮೋಕ್ತ ರೀತಿಯಲ್ಲಿ ನಡೆಯಲಿದೆ.
ಲಿಂಗ ಶರೀರವನ್ನ ರುದ್ರಾಕ್ಷಿ ಮಂಟಪದಲ್ಲಿ ಕೂರಿಸಿಕೊಂಡು ಹಳೇ ಮಠದ ಕ್ರಿಯಾ ಸಮಾಧಿವರೆಗೆ ಮೆರವಣಿಗೆ ಮಾಡಲಾಯಿತು. ಸದ್ಯ ಪಾರ್ಥೀವ ಶರೀರ ಕ್ರಿಯಾ ಸಮಾಧಿ ಬಳಿ ತಲುಪಿದ್ದು, ಸಕಲ ಸರ್ಕಾರಿ ಗೌರವಗಳು ನಡೆಯುತ್ತಿದೆ. ಇನ್ನೇನು ಕೆಲ ವೇ ಹೊತ್ತಿನಲ್ಲಿ ಅಂತಿಮ ವಿಧಾನ ಆರಂಭವಾಗಲಿದೆ.
ಮೊದಲಿಗೆ ಪಾರ್ಥಿವ ಶರೀರಕ್ಕೆ ಅಂತಿಮಪುಣ್ಯ ಸ್ನಾನ ಮಾಡಿಸಲಾಗುತ್ತದೆ. ನಾಡಿನ ಪುಣ್ಯ ನದಿಗಳಿಂದ ತರಿಸಿರುವ ಪವಿತ್ರ ತೀರ್ಥಗಳಿಂದ ಅಭಿಷೇಕ ನೆರವೇರಿಸಿ ಹೊಸ ಕಷಾಯ ವಸ್ತ್ರಗಳನ್ನು ಧಾರಣೆ ಮಾಡಿಸಲಾಗುತ್ತದೆ. ನಂತರ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿಯವರಿಗೆ ಪಟ್ಟಾಧಿಕಾರ ಹಸ್ತಾಂತರ ಮಾಡಲಾಗುತ್ತದೆ. ಬಳಿಕ ಪಾರ್ಥಿವ ಶರೀರವನ್ನು ಗದ್ದುಗೆಯ ಒಳಭಾಗದ ಗೂಡಿನಲ್ಲಿ ಪದ್ಮಾಸನ ಸ್ಥಿತಿಯಲ್ಲಿ ಕೂರಿಸಲಾಗುತ್ತದೆ.
ಈ ವೇಳೆ ಶ್ರೀಗಳ ಕೈಯಲ್ಲಿ ಇಷ್ಟ ಲಿಂಗವನ್ನು ಇರಿಸಲಾಗುತ್ತದೆ. ನಂತರ ರುದ್ರಾಕ್ಷ ಮಂತ್ರ ಪಠಣ ಮಾಡುತ್ತಾ ಶ್ರೀಗಳ ಪಾರ್ಥಿವ ಶರೀರಕ್ಕೆ ಪಂಚಾಮೃತಾಭಿಷೇಕ ನೆರವೇರಿಸಲಾಗುತ್ತದೆ. ಬಳಿಕ ಮಹಾ ಮಂಗಳಾರತಿ ಮಾಡಲಾಗುತ್ತದೆ. ಗದ್ದುಗೆಯ ಒಳಗೆ ತಂಬಿಟ್ಟು, ಚಿಗಲಿ ಹಾಗೂ ಹಸಿ ಕಡಲೆಕಾಳು ನೈವೇದ್ಯ ನೆರವೇರಿಸಲಾಗುತ್ತದೆ.
ಸದ್ಯ ಪಾರ್ಥೀವ ಶರೀರ ಕ್ರಿಯಾ ಸಮಾಧಿ ಬಳಿ ತಲುಪಿದ್ದು, ಸಕಲ ಸರ್ಕಾರಿ ಗೌರವಗಳು ನಡೆಯುತ್ತಿದೆ. ಇನ್ನೇನು ಕೆಲವೇ ಹೊತ್ತಿನಲ್ಲಿ ಅಂತಿಮ ವಿಧಾನ ಆರಂಭವಾಗಲಿದೆ..