ತುಮಕೂರು:

      ಸಿರಾ ಕ್ಷೇತ್ರದ ಆರಾಧ್ಯ ದೈವ ಶ್ರೀ ಜುಂಜಪ್ಪಸ್ವಾಮಿಗೆ ನಮಸ್ಕರಿಸಿ ನಾವು ನಾಮಪತ್ರ ಸಲ್ಲಿಸಿದ್ದೇವೆ. ಜುಂಜಪ್ಪ ದೇವರ ಆಶೀರ್ವಾದ ಪಕ್ಷದ ಅಭ್ಯರ್ಥಿ ಡಾ. ರಾಜೇಶ್‍ಗೌಡರ ಮೇಲಿದೆ. ನೂರಕ್ಕೆ ನೂರರಷ್ಟು ಗೆದ್ದು ಭಾರತೀಯ ಜನತಾ ಪಕ್ಷದ ಪತಾಕೆಯನ್ನು ಸಿರಾದಲ್ಲಿ ಹಾರಿಸಲಿದ್ದೇವೆ ಎಂಬ ವಿಶ್ವಾಸವನ್ನು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಇಂದಿಲ್ಲಿ ವ್ಯಕ್ತಪಡಿಸಿದರು.

      ಸಿರಾ ಉಪಚುನಾವಣೆಯಲ್ಲಿ ಆಶ್ಚರ್ಯಕರ ರೀತಿಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ರಾಜೇಶ್‍ಗೌಡ ಅವರು ಗೆದ್ದೇ ಗೆಲ್ಲುತ್ತಾರೆ ಎಂದು ಅವರು ಹೇಳಿದರು.

      ಸಿರಾದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್‍ಗೌಡ ಅವರ ಜತೆ ತೆರಳಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಮತ್ತು ರಾಜ್ಯದ ಜನ ಭಾರತೀಯ ಜನತಾ ಪಕ್ಷ ಗೆಲ್ಲಬೇಕು ಎಂದು ಬಯಸುತ್ತಿದ್ದಾರೆ. ದೇಶದ ಶೇ. 75 ರಷ್ಟು ರಾಜ್ಯಗಳಲ್ಲಿ ಬಿಜೆಪಿ ಪಕ್ಷದ ಆಡಳಿತ ಇದೆ. ರಾಜ್ಯದಲ್ಲಿ ಯಡಿಯೂರಪ್ಪನವರ ನಾಯಕತ್ವದ ಸರ್ಕಾರ ಇದೆ. ಕೇಂದ್ರದಲ್ಲಿ ಮೋದೀಜಿ ನಾಯಕತ್ವದ ಸರ್ಕಾರವಿದೆ. ಹಾಗಾಗಿ ಈ ಉಪಚುನಾವಣೆ ರಾಜಕೀಯದ ದಿಕ್ಕನ್ನು ಬದಲಿಸುವ ದಿಕ್ಸೂಚಿಯಾಗಲಿದೆ ಎಂದರು.

     ಪ್ರಧಾನ ಮಂತ್ರಿಗಳು ಮಾಡಿರುವ ಅಭಿವೃದ್ಧಿ ಕೆಲಸಗಳು, ರಾಜ್ಯ ಸರ್ಕಾರದ ಜನಪರ ಕಾರ್ಯಗಳನ್ನು ಜನ ಮೆಚ್ಚಿಕೊಂಡಿದ್ದು, ಈ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಮತದಾರರು ಗೆಲ್ಲಿಸಲಿದ್ದಾರೆ ಎಂದು ಅವರು ಪುನರುಚ್ಚರಿಸಿದರು.

      ಬಿಜೆಪಿಯ ತತ್ವ ಸಿದ್ದಾಂತಗಳನ್ನು ಯಾರು ಒಪ್ಪಿ ಸದಸ್ಯರಾಗಿದ್ದಾರೋ ಅವರೆಲ್ಲರೂ ನಮ್ಮವರೆ. ಹಾಗಾಗಿ ನಾವೆಲ್ಲ ಒಗ್ಗಟ್ಟಾಗಿ ಅವರನ್ನು ಗೆಲ್ಲಿಸುತ್ತೇವೆ ಎಂದರು.

16ಕ್ಕೆ ಮತ್ತೆ ನಾಮಪತ್ರ :

     ಇಂದು ರಾಜೇಶ್‍ಗೌಡ ಅವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು, ಮತ್ತೆ ಅ. 16 ರಂದು ಅಧಿಕೃತವಾಗಿ ಬಿ ಫಾರಂನೊಂದಿಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದರು.

       ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ, ಒಂದೇ ಕುಟುಂಬದ ಸದಸ್ಯರ ರೀತಿ ಚುನಾವಣೆ ಎದುರಿಸಲಿದ್ದೇವೆ ಎಂದು ಅವರು ಹೇಳಿದರು.
ಮುಖಂಡ ಎಸ್.ಆರ್. ಗೌಡ ಮಾತನಾಡಿ, ಉಪಚುನಾವಣೆಗೆ ಟಿಕೆಟ್ ನೀಡುವ ವಿಚಾರದಲ್ಲಿ ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ. ವರಿಷ್ಠರು ಒಬ್ಬರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದಾರೆ. ಪಕ್ಷದ ತತ್ವ ಸಿದ್ದಾಂತಗಳಿಗೆ ಯಾವುದೇ ಗೊಂದಲ, ಒಳ ಸುಳಿವಿಲ್ಲದೆ ನಿಷ್ಕಲ್ಮಶವಾಗಿ ಚುನಾವಣೆ ಮಾಡಿ ಪಕ್ಷದ ಅಭ್ಯರ್ಥಿ ರಾಜೇಶ್‍ಗೌಡ ಅವರನ್ನು ನೂರಕ್ಕೆ ನೂರರಷ್ಟು ಗೆಲ್ಲಿಸುತ್ತೇವೆ ಎಂದು ಘೋಷಿಸಿದರು.

     ಯಾರ ಕಥೆಯನ್ನು ಮುಗಿಸಲು ನರ ಮಾನವನದಿಂದ ಸಾಧ್ಯವಿಲ್ಲ. ಅದೇನಿದ್ದರೂ ದೇವರಿಂದ ಮಾತ್ರ ಸಾಧ್ಯ. ಆದ್ದರಿಂದ ಯಾವುದೇ ಊಹಾ ಪೋಹಗಳಿಗೆ ಕಿವಿಗೊಡುವ ಅಗತ್ಯವಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

      ರಾಜೇಶ್‍ಗೌಡ ಅವರಲ್ಲಿ ಸರಳತೆ, ವಿಧೇಯತೆ ಇದೆ. ಅವರು ಪಕ್ಷಕ್ಕೆ ಬದ್ದವಾಗಿ ನಡೆದುಕೊಳ್ಳುತ್ತಾರೆ ಎಂದರು. ಟಿಕೆಟ್ ಸಿಗಲಿಲ್ಲ ಎಂಬ ಬಗ್ಗೆ ನಮ್ಮಲ್ಲಿ ಅಸಮಾಧಾನ ಇತ್ತು ನಿಜ. ಆದರೆ ಅದನ್ನು ಪಕ್ಷದ ವರಿಷ್ಠರ ಮುಂದೆ ವ್ಯಕ್ತಪಡಿಸಿದ್ದೆವು. ಆ ಸಂದರ್ಭದಲ್ಲಿ ವರಿಷ್ಠರು ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕೊಡುವುದಾಗಿ ಭರವಸೆ ನೀಡಿದ್ದಾರೆ. ಹಾಗಾಗಿ ನಾವೆಲ್ಲ ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

      ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್‍ಗೌಡ ಮತ್ತಿತರರು ಉಪಸ್ಥಿತರಿದ್ದರು.

(Visited 13 times, 1 visits today)