ತುಮಕೂರು : 

      ಸಿರಾ ಉಪಚುನಾವಣೆಯ ಸಮರ ಅಂತ್ಯಗೊಂಡಿದ್ದು, ಅತಿರಥಮಹಾರಥರೆಲ್ಲಾ ರಾಜಕೀಯವಾಗಿ ಭೂಗತವಾಗಿದ್ದಾರೆ. ನೆಲೆಯೇ ಇಲ್ಲದಿದ್ದ ಬಿಜೆಪಿ ಶಿರಾ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರುವ ಮೂಲಕ ಕೇಸರಿ ಪತಾಕೆ ಹಾರಿಸಿದ್ದೇವೆ ಎಂಬ ಹೆಮ್ಮೆಯಲ್ಲಿದೆ.

      ಈ ಕ್ಷೇತ್ರದಲ್ಲಿ 10 ನೇ ಬಾರಿ ಸ್ಪರ್ಧೆಗಿಳಿದಿದ್ದ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ರಾಜಕೀಯ ಚತುರತೆಯುಳ್ಳವರು, ಬಹಳಷ್ಟು ವರ್ಷಗಳಿಂದ ಈ ಕ್ಷೇತ್ರದಲ್ಲಿ ಅಧಿಕಾರದ ಗದ್ದುಗೆ ಏರಿ ಸೋಲಿನ ರುಚಿ ಕಂಡು ತನ್ನ ಅಧಿಪತ್ಯದ ಹಿಡಿತ ಸಾಧಿಸಿದ್ದ ಹಿರಿಯ ಮುತ್ಸದ್ಧಿ ಟಿ.ಬಿ.ಜಯಚಂದ್ರ ಗೆಲುವಿನ ಸನಿಹದಲ್ಲಿದ್ದೇವೆ ಎಂಬ ಭ್ರಮೆಯಲ್ಲಿ ತೊಡಗಿದ್ದರು. ಆದರೆ, ಜಯಚಂದ್ರರವರ ಸೋಲು ಪೂರ್ವ ನಿಯೋಜಿತ ಎನ್ನುವ ರೀತಿಯಲ್ಲಿ ಕೆಲವು ಕಾಂಗ್ರೆಸ್ ನಾಯಕರ ವರ್ತನೆಗಳು ಕಂಡುಬಂದದ್ದು ಚುನಾವಣೆಯ ಹಿಂದೆಯೇ ಗೋಚರವಾಗಿತ್ತಾದರೂ ಇದನ್ನು ಯಾರು ಗಣನೆಗೆ ತೆಗೆದುಕೊಳ್ಳಲಿಲ್ಲ.

      ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಮತ್ತು ಮುನ್ನಡೆಯಲ್ಲಿದ್ದ ಕೆಲವು ನಾಯಕರು ಆತ್ಮಸಾಕ್ಷಿಯಾಗಿ ಜಯಚಂದ್ರ ಗೆಲುವು ಕಾಂಗ್ರೆಸ್ ಪಕ್ಷದ ಗೆಲುವು ಎಂದು ಭಾವಿಸಿ ಚುನಾವಣೆಯನ್ನು ಎದುರಿಸಲಿಲ್ಲ. ಹಿಂದಿನ ಚುನಾವಣೆಗಳ ಸೋಲು ಮತ್ತು ಜಾತಿಯ ದಳ್ಳೂರಿಗಳು ಆಂತರಿಕ ಕ್ರೋದಾಗ್ನಿಯಂತೆ ಜ್ವಲಿಸುತ್ತಿದ್ದರೂ ಮೇಲ್ನೋಟಕ್ಕೆ ಜಯಚಂದ್ರ ಗೆಲುವಿನ ರೂವಾರಿಗಳಂತೆ ಮುಖವಾಡ ಹೊತ್ತು ಚುನಾವಣಾ ಕಣದಲ್ಲಿ ಮತಯಾಚನೆ ಮಾಡಿದರು. ಹಿಂಬದಿಯಲ್ಲಿ ತನ್ನ ಹಿಂಬಾಲಕರು ಮತ್ತು ಸ್ವಜನಾಂಗದ ಬೆಂಬಲವನ್ನ ಜಯಚಂದ್ರ ವಿರುದ್ಧವಾಗಿ ತಿರುಗಿಬೀಳುವಂತೆ ಪಕ್ಷದ ರಾಜ್ಯ ವರಿಷ್ಠರ ಗಮನಕ್ಕೆ ಬಾರದಂತೆ ರಣತಂತ್ರ ರೂಪಿಸಿದ್ದರು ಎನ್ನಲಾಗುತ್ತಿದೆ. ಕಾಂಗ್ರೆಸ್‍ನ ಮಟ್ಟಿಗೆ ನಿಷ್ಠಾವಂತ ಕಾರ್ಯಕರ್ತರನ್ನ ಹೊರತುಪಡಿಸಿದರೆ ಜಯಚಂದ್ರ ಗೆಲುವಿಗೆ ಶ್ರಮಿಸಿದವರ ಸಂಖ್ಯೆ ಅತೀ ವಿರಳ.

      ಮೊನ್ನೆ ಸೋಮವಾರದ ದಿನ ಜಯಚಂದ್ರ ಆಸ್ಪತ್ರೆಗೆ ದಾಖಲಾಗುವ ಮುಖೇನಾ ತನ್ನ ಸೋಲನ್ನ ತಾವೇ ಪರೋಕ್ಷವಾಗಿ ಒಪ್ಪಿಕೊಂಡಿದ್ದೇವೆ ಎಂಬ ಸ್ಪಷ್ಟ ಸಂದೇಶವನ್ನ ಶಿರಾ ಮತದಾರರಿಗೆ ರವಾನಿಸಿದ್ದರು. ಜಾತ್ಯಾತೀತ ಜನತಾದಳದ ಹುರಿಯಾಳುಗಳು ಅಭ್ಯರ್ಥಿ ಅಮ್ಮಾಜಮ್ಮನವರ ಗೆಲುವಿಗೆ ಪೂರಕವಾಗಿ ಸಕಾರಾತ್ಮಕ ಸ್ಪಂದನೆ ನೀಡದಿದ್ದರೂ ಸಹ ಅಮ್ಮಾಜಮ್ಮಾನವರ ಸ್ಪರ್ಧೆಯೇ ಮೂರನೇ ಸ್ಥಾನಕ್ಕೆ ಜೆಡಿಎಸ್ ತೃಪ್ತಿಪಟ್ಟಿಕೊಳ್ಳುತ್ತದೆ ಎಂದು ಅಭ್ಯರ್ಥಿ ಘೋಷಣೆಯಾದ ದಿನವೇ ನಿರ್ಧರಿತವಾಗಿಬಿಟ್ಟಿತ್ತು. ಕ್ಷೇತ್ರ ವ್ಯಾಪ್ತಿಯಲ್ಲಿ ಒಂದಷ್ಟು ಸ್ವಾಭಿಮಾನಿ ಕಾರ್ಯಕರ್ತರಲ್ಲಿ ಉತ್ಸಾಹ ಕಂಡು ಬಂದಿತ್ತಾದರೂ ಆ ಕ್ಷೇತ್ರದ ಜೆಡಿಎಸ್ ಟಿಕೆಟ್ ವಂಚಿತರ ಕುಹಕತನ ಮತ್ತು ಷಡ್ಯಂತರಗಳು ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಮಾರಕವಾಗಿ ಪರಿಣಮಿಸಿದವು.

      ಬಿಜೆಪಿ ಪಕ್ಷ ಗೆಲುವಿನ ನಗೆಬೀರುವ ಮುಖೇನ ತಾನು 12.949 ಮತಗಳ ಅಂತರದಿಂದ ಗೆದ್ದಿದ್ದೇನೆ ಎನ್ನುವಂತಹ ಉತ್ಸಾಹದಲ್ಲಿದೆಯಾದರೂ ಈ ಗೆಲುವು ನೈತಿಕತೆಯ ಗೆಲುವ ಎನ್ನುವ ಯಕ್ಷಪಶ್ನೆ ಶಿರಾ ಮತದಾರರಲ್ಲಿ ಕಾಡುತ್ತಿದೆ.

        ಆಡಳಿತರೂಢ ಬಿಜೆಪಿ ತಂತ್ರ, ಪ್ರತಿತಂತ್ರ, ವಾಮಮಾರ್ಗಗಳು, ಚಾಣಾಕ್ಷ ನಡೆಗಳನ್ನೆಲ್ಲ ಬಳಕೆ ಮಾಡಿಕೊಂಡು ಅಧಿಕಾರ ಚುಕ್ಕಾಣಿಯನ್ನು ಹಿಡಿದಿದೆ. ವೈದ್ಯ ಡಾ.ರಾಜೇಶ್‍ಗೌಡ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರಾದರೂ ಹಣದ ಹೊಳೆಯಲ್ಲಿ ಕಮಲ ನಳನಳಿಸಿದೆ ಎನ್ನುವ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿವೆ.

      ಮೂಲ ಬಿಜೆಪಿಗರಲ್ಲಿ ಆರಂಭಿಕ ವೈಮನಸ್ಯ ಕಂಡಿತ್ತಾದರೂ ಜಿಲ್ಲಾಧ್ಯಕ್ಷ ಬಿ.ಸುರೇಶ್‍ಗೌಡರ ಪ್ರಜ್ಞಾವಂತಿಕೆಯಿಂದ ಅಪಸ್ವರ, ಭಿನ್ನಾಬಿಪ್ರಾಯಗಳು ಶಮನವಾಗಿ ಬಿಜೆಪಿಯು ಏಕತೆಯನ್ನ ಪ್ರದರ್ಶಿಸಿತು. ಜಿಲ್ಲಾಧ್ಯಕ್ಷ ಬಿ.ಸುರೇಶ್‍ಗೌಡರು ಒಂದುವರೆ ತಿಂಗಳುಗಳಿಗಿಂತ ಹೆಚ್ಚುಕಾಲ ಶಿರಾದಲ್ಲಿ ಠಿಕಾಣಿ ಹೂಡುವ ಮುಖೇನ ಒಬ್ಬ ಸಾಮಾನ್ಯ ಕಾರ್ಯಕರ್ತನಂತ ಭೂತ್ ಮಟ್ಟದ ಕಾರ್ಯಕ್ರಮ ಮತ್ತು ಕಾರ್ಯಕರ್ತರ ಸಂಘಟನೆಯ ಜೊತೆಗೆ ಚುನಾವನಾ ಪ್ರಚಾರ, ವೈಮಸ್ಯಗಳ ಶಮನ, ಭಿನ್ನಮತೀಯರನ್ನ ಒಗ್ಗೂಡಿಸುವಿಕೆ ಕ್ಷೇತ್ರದಲ್ಲಿ ಕಮಲ ಅರಳಿಸುವ ರಣತಂತ್ರ, ರಾಜಕೀಯ ಎದುರಾಳಿಗಳಿಗೆ ಪ್ರತಿತಂತ್ರ. ಅಬ್ಬರದ ಚುನಾವಣಾ ಪ್ರಚಾರದ ಮುಖಂಡತ್ವವನ್ನ ವಹಿಸಿಕೊಳ್ಳುವ ಮುಖೇನ ಸಿರಾ ಕ್ಷೇತ್ರದಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತರಲು ಸುರೇಶ್‍ಗೌಡರ ಪಾತ್ರ ಬಹುಮುಖ್ಯ ಎನ್ನುವುದು ಸಿರಾ ಮತದಾರರ ಅಭಿಪ್ರಾಯವಾಗಿದೆ.

      ಸುರೇಶ್‍ಗೌಡರು ಕಾರ್ಯಕರ್ತರಲ್ಲಿ ಹುಮ್ಮಸ್ಸನ್ನ ತುಂಬದಿದ್ದರೆ ಹೊಸ ಅಭ್ಯರ್ಥಿ ರಾಜೇಶ್‍ಗೌಡರಿಗೆ ಆ ಪೂರಕವಾದ ಬೆಂಬಲ ದೊರೆಯುತ್ತಿರಲಿಲ್ಲ ಎನ್ನುವ ಮಾತುಗಳು ಚುನಾವಣಾ ಸಮಯದಲ್ಲಿ ಕೇಳಿಬರುತ್ತಿದ್ದವು. ಇವುಗಳ ಜೊತೆಗೆ ವಿಜಯೇಂದ್ರ, ಯಡಿಯೂರಪ್ಪನವರು ಈ ಕ್ಷೇತ್ರದಲ್ಲಿಯೇ ಉಳಿದು ರಾಜಕೀಯ ನಡೆಗಳ ಬಗ್ಗೆ ಗಮನಹರಿಸಿದ್ದು ಬಿಜೆಪಿ ಗೆಲುವಿಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ.

      ಒಟ್ಟಾರೆ ಬಿಜೆಪಿ ಗೆಲುವು ಸಿರಾ ಕ್ಷೇತ್ರದಲ್ಲಿ ರಾಜಕೀಯ ಧೃವೀಕರಣದ ಮುನ್ನುಡಿ ಬರೆದಿದೆ ಎನ್ನುವುದು ಆ ಕ್ಷೇತ್ರದ ಮತದಾರರ ಅಭಿಪ್ರಾಯವಾಗಿದೆ. ಮತದಾರರ ಬೆಂಬಲ, ನಂಬಿಕೆ ಮತ್ತು ನಿರೀಕ್ಷೆಗಳನ್ನ ಹುಸಿಗೊಳಿಸದೆ ಬಿಜೆಪಿಯ ನೂತನ ಶಾಸಕ ಡಾ.ರಾಜೇಶ್‍ಗೌಡರು ಕಾರ್ಯನಿರ್ವಹಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

(Visited 9 times, 1 visits today)