ತುಮಕೂರು:

      ಶಿರಾ ವಿಧಾನಸಭಾ ಉಪ ಚುನಾವಣೆಯ ಮತ ಎಣಿಕೆಯು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇಂದು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿದ್ದು, ಮತ ಎಣಿಕೆಯನ್ನು ಸುಗಮವಾಗಿ ನಡೆಸಲು ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ.

      ಇದಕ್ಕೂ ಮುನ್ನ ಬೆಳಿಗ್ಗೆ 7-30 ಗಂಟೆಗೆ ಚುನಾವಣೆ ವೀಕ್ಷಕರು ಹಾಗೂ ಅಭ್ಯರ್ಥಿಗಳು/ ರಾಜಕೀಯ ಪಕ್ಷಗಳ ಏಜೆಂಟರುಗಳ ಸಮಕ್ಷಮದಲ್ಲಿ ಮತ ಯಂತ್ರಗಳನ್ನು ಇರಿಸಿರುವ ಭದ್ರತಾ ಕೊಠಡಿಗಳನ್ನು ತೆರೆಯಲಾಗುವುದು.

      ನಗರದ ಪಾಲಿಟೆಕ್ನಿಕ್ ಕಾಲೇಜಿನಲ್ಲಿಂದು ನಡೆಯುವ ಚುನಾವಣಾ ಮತ ಎಣಿಕೆಯ ಅಂತಿಮ ಸಿದ್ಧತೆಗಳ ಬಗ್ಗೆ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಹಾಗೂ ಚುನಾವಣಾಧಿಕಾರಿ ಡಾ: ಕೆ. ನಂದಿನಿದೇವಿ ಪರಿಶೀಲಿಸಿದರು.

      ಬೆಳಿಗ್ಗೆ 8 ಗಂಟೆಗೆ ಚುನಾವಣಾ ಮತದಾನ ಪ್ರಕ್ರಿಯೆ ಆರಂಭವಾಗಲಿದ್ದು, 8 ಗಂಟೆಗೆ ಅಂಚೆ ಮತಪತ್ರ ಹಾಗೂ ಸರ್ವೀಸ್ ವೋಟ್‍ಗಳ ಎಣಿಕೆ ಆರಂಭವಾಗಲಿದೆ. 8-30ರಿಂದ ಇವಿಎಂ ಮತಯಂತ್ರಗಳ ಮತ ಎಣಿಕೆ ಆರಂಭವಾಗಲಿದೆ. ಮತ ಯಂತ್ರಗಳ(ಇವಿಎಂ) ಮತ ಎಣಿಕೆಯು 2 ಕೊಠಡಿಗಳಲ್ಲಿ ಒಟ್ಟು 14 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‍ಗೆ ಒಬ್ಬ ಎಣಿಕೆ ಸೂಪರ್‍ವೈಸರ್, ಒಬ್ಬ ಎಣಿಕೆ ಸಹಾಯಕ ಹಾಗೂ ಒಬ್ಬ ಮೈಕ್ರೋ ಅಬ್ಸರ್ವರ್‍ನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

      ಅಂಚೆ ಮತಪತ್ರ ಹಾಗೂ ಸರ್ವೀಸ್ ವೋಟ್‍ಗಳ ಎಣಿಕೆಗಾಗಿ ಪ್ರತ್ಯೇಕ ಕೊಠಡಿಯಲ್ಲಿ 4 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. 330 ಮತಗಟ್ಟೆಗಳ ಮತ ಎಣಿಕೆಯು 24 ಸುತ್ತಿನಲ್ಲಿ ನಡೆಯಲಿದ್ದು, ಪ್ರತಿ ಟೇಬಲ್‍ಗೆ ಒಬ್ಬ ಅಭ್ಯರ್ಥಿಗೆ ಒಬ್ಬ ಏಜೆಂಟ್‍ನಂತೆ ಹಾಜರಿರಲು ಅವಕಾಶ ನೀಡಲಾಗುವುದು. ಈಗಾಗಲೇ ಮತ ಎಣಿಕೆ ಏಜೆಂಟರುಗಳಿಗೆ ಪಾಸ್ ವಿತರಿಸಲಾಗಿದೆ. ಪಾಸ್‍ಗಳನ್ನು ತಂದವರಿಗೆ ಮಾತ್ರ ಪ್ರವೇಶ ನೀಡಲಾಗುವುದು. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟರುಗಳಿಗೆ ಎಣಿಕಾ ಕೇಂದ್ರಕ್ಕೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳ ಅನುಕೂಲಕ್ಕಾಗಿ ಎಣಿಕಾ ಕೇಂದ್ರದ ಆವರಣದಲ್ಲಿ ಅಭ್ಯರ್ಥಿಗಳ ಕೊಠಡಿಯನ್ನು ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

    ಮತ ಎಣಿಕಾ ಕೇಂದ್ರಕ್ಕೆ ಮೊಬೈಲ್, ಕ್ಯಾಮೆರಾ, ಮತ್ತಿತರೆ ವಸ್ತುಗಳನ್ನು ತರಲು ಅವಕಾಶವಿರುವುದಿಲ್ಲ.

ಸುಸಜ್ಜಿತ ಮಾಧ್ಯಮ ಕೇಂದ್ರ ಸ್ಥಾಪನೆ:

      ಚುನಾವಣಾ ಮತ ಎಣಿಕೆ ಮಾಹಿತಿಯನ್ನು ಕಾಲಕಾಲಕ್ಕೆ ಮಾಧ್ಯಮಗಳಿಗೆ ಒದಗಿಸಲು ಸುಸಜ್ಜಿತ ಮಾಧ್ಯಮ ಕೇಂದ್ರವನ್ನು ಮತ ಎಣಿಕೆ ಕೇಂದ್ರದ ಆವರಣದಲ್ಲಿ ತೆರೆಯಲಾಗಿದೆ. ಮತ ಎಣಿಕಾ ಫಲಿತಾಂಶವನ್ನು ವೀಕ್ಷಿಸಲು ಡಿಸ್‍ಪ್ಲೇ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಸುತ್ತಿನ ಮತ ಎಣಿಕೆಯ ಮಾಹಿತಿಯನ್ನು ಪ್ರದರ್ಶಿಸಲಾಗುವುದು. ಮಾಧ್ಯಮದವರು ಮಾಹಿತಿ ರವಾನೆಗೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮಾಧ್ಯಮ ಕೇಂದ್ರಕ್ಕೆ ಆಗಮಿಸುವ ಮಾಧ್ಯಮ ಪ್ರತಿನಿಧಿಗಳಿಗೆ ಮೊಬೈಲ್/ಲ್ಯಾಪ್‍ಟಾಪ್ ತರಲು ವಿನಾಯತಿ ನೀಡಲಾಗಿದೆ.

      ಮತ ಎಣಿಕಾ ಕೇಂದ್ರಕ್ಕೆ ಮತ ಎಣಿಕೆಗೂ ಮುನ್ನ ಮತ್ತು ಮತ ಎಣಿಕೆಯ ನಂತರ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುತ್ತದೆ. ಮತ ಎಣಿಕಾ ಕೇಂದ್ರಕ್ಕೆ ಆಗಮಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.

ಬಿಗಿಭದ್ರತೆ:

      ಮತ ಎಣಿಕೆ ಕಾರ್ಯವನ್ನು ಶಾಂತಿಯುತವಾಗಿ ನಡೆಸಲು ಅನುಕೂಲವಾಗುವಂತೆ ಮತ ಎಣಿಕಾ ಕೇಂದ್ರ ಹಾಗೂ ಕೇಂದ್ರದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇದಕ್ಕಾಗಿ 200ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ/ಸಿಬ್ಬಂದಿಗಳನ್ನು ಹಾಗೂ 2 ಕೆ.ಎಸ್.ಆರ್.ಪಿ. ಪ್ಲಟೂನ್‍ಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೆ. ವಂಶಿಕೃಷ್ಣ ತಿಳಿಸಿದ್ದಾರೆ.

ಮದ್ಯ ಮಾರಾಟ ನಿಷೇಧ:

     ಮತ ಎಣಿಕೆ ದಿನದಂದು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಇಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಶಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಾಗೂ ತುಮಕೂರಿನ ಮತ ಎಣಿಕೆ ಕೇಂದ್ರದ 500 ಮೀಟರ್ ಸುತ್ತಳತೆಯಲ್ಲಿ ಜಾರಿಗೆ ಬರುವಂತೆ ಎಲ್ಲಾ ಮದ್ಯದಂಗಡಿಗಳನ್ನು(ಕೆಎಸ್‍ಬಿಸಿಎಲ್ ಡಿಪೋಗಳನ್ನು ಹೊರತುಪಡಿಸಿ) ಮುಚ್ಚಿಸಿ ಮದ್ಯ ಮಾರಾಟ, ಹಂಚಿಕೆ, ಶೇಖರಣೆಯನ್ನು ನಿಷೇಧಿಸಲಾಗಿದೆ.

ನಿಷೇಧಾಜ್ಞೆ ಜಾರಿ:

     ಮತ ಎಣಿಕೆ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮತ ಎಣಿಕಾ ಕೇಂದ್ರದ ಸುತ್ತಮುತ್ತಲಿನ 5 ಕಿ.ಮೀ. ವ್ಯಾಪ್ತಿ ಹಾಗೂ ಶಿರಾ ತಾಲ್ಲೂಕಿನಾದ್ಯಂತ ನವೆಂಬರ್ 10ರ ಬೆಳಿಗ್ಗೆ 6 ರಿಂದ ನವೆಂಬರ್ 11ರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದೆ.

(Visited 5 times, 1 visits today)